ಎಲ್ಲಿ ಐಐಟಿ ಸ್ಥಾಪನೆ?, ಶೀಘ್ರವೇ ಕೇಂದ್ರಕ್ಕೆ ಪ್ರಸ್ತಾವನೆ
ಬೆಂಗಳೂರು, ಏ. 6 : 'ಮುಖ್ಯಮಂತ್ರಿಯಾಗಿ ನನಗೆ ರಾಜ್ಯದ ಮೂವತ್ತು ಜಿಲ್ಲೆಗಳು ಒಂದೇ, ಮೈಸೂರಿನ ಮೇಲಿರುವಷ್ಟು ಪ್ರೀತಿ ನನಗೆ ಹುಬ್ಬಳ್ಳಿ-ಧಾರವಾಡ, ರಾಯಚೂರು, ಹಾಸನ, ಚಿಕ್ಕಬಳ್ಳಾಪುರದ ಮೇಲೆಯೂ ಇದೆ. ಯಾವ ಜಿಲ್ಲೆಯಲ್ಲಿ ಐಐಟಿ ಸ್ಥಾಪನೆಯಾದರೂ ನನಗೆ ಸಂತೋಷ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಭಾನುವಾರ ನವದೆಹಲಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 'ಕರ್ನಾಟಕದದಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಯನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಈ ಕುರಿತು ರಾಜ್ಯ ಸರ್ಕಾರ ಶೀಘ್ರ ಪ್ರಸ್ತಾವನೆಯನ್ನು ಕಳಿಸಲಿದೆ' ಎಂದು ಹೇಳಿದರು.[ಐಐಟಿ ಸ್ಥಾಪನೆ ಸ್ಪರ್ಧೆಗೆ ಸೇರಿಕೊಂಡ ಮೈಸೂರು]

'ಐಐಟಿಯನ್ನು ಯಾವ ಜಿಲ್ಲೆಯಲ್ಲಿ ಸ್ಥಾಪಿಸಬೇಕು? ಎಂಬ ಬಗ್ಗೆ ಇನ್ನೂ ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿಲ್ಲ. ನಾವು ಪ್ರಸ್ತಾಪ ಕಳಿಸುತ್ತೇವೆ. ಕೇಂದ್ರ ಸರ್ಕಾರ ಆರಿಸಿಕೊಂಡ ಸ್ಥಳವನ್ನು ಒಪ್ಪಿಕೊಳ್ಳುತ್ತೇವೆ' ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. [ರಾಯಚೂರಲ್ಲಿ ಐಐಟಿ ಸ್ಥಾಪನೆಗೆ ಬೇಡಿಕೆ ಇಟ್ಟ ಖರ್ಗೆ]
ಶೆಟ್ಟರ್‌ಗೆ ತಿರುಗೇಟು : 'ಐಐಟಿ ಸ್ಥಾಪನೆ ವಿಚಾರದಲ್ಲಿ ಮೈಸೂರಿನ ಪ್ರೇಮವನ್ನು ಮುಖ್ಯಮಂತ್ರಿಗಳು ಕೈಬಿಡಬೇಕು' ಎಂಬ ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ್ ಆರೋಪದಲ್ಲಿ ಹುರುಳಿಲ್ಲ. ರಾಜ್ಯದ ಮುಖ್ಯಮಂತ್ರಿಯಾಗಿ ಮೈಸೂರಿನ ಮೇಲಿರುವಷ್ಟೇ ಪ್ರೇಮ ಉಳಿದ ಜಿಲ್ಲೆಗಳ ಮೇಲಿದೆ, ಮೂವತ್ತು ಜಿಲ್ಲೆಗಳೂ ನನಗೆ ಒಂದೇ ಎಂದು ಸಿದ್ದರಾಮಯ್ಯ ಶೆಟ್ಟರ್‌ಗೆ ತಿರುಗೇಟು ಕೊಟ್ಟರು. [ಅಸಲಿಗೆ, ಕರ್ನಾಟಕಕ್ಕೆ ಐಐಟಿ ಅಗತ್ಯವಿದೆಯಾ?]
ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಐಐಟಿ ಸ್ಥಾಪನೆಗೆ ಅಗತ್ಯವಿರುವ ಜಮೀನು ಲಭ್ಯವಿದೆ. ಮೈಸೂರು, ಹುಬ್ಬಳ್ಳಿ-ಧಾರವಾಡ, ರಾಯಚೂರು, ಚಿಕ್ಕಬಳ್ಳಾಪುರ ಹಾಗೂ ಹಾಸನದಲ್ಲಿ ಜಮೀನು ಇದೆ. ಜಮೀನಿನ ಜೊತೆ ರೈಲ್ವೆ, ವಿಮಾನ ಸಂಪರ್ಕ, ನೀರು ಮುಂತಾದ ಇತರೆ ಮೂಲಸೌಲಭ್ಯಗಳು ಬೇಕು ಎಂದು ಸಿದ್ದರಾಮಯ್ಯ ಹೇಳಿದರು.
ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ರಾಜ್ಯದಲ್ಲಿ ಐಐಟಿ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದೆ. ಅಂದಿನಿಂದ ಐಐಟಿ ತಮ್ಮ ಜಿಲ್ಲೆಗೆ ಬರಲಿ ಎಂದು ಜನಪ್ರತಿನಿಧಿಗಳು ಸಿದ್ದರಾಮಯ್ಯ ಮತ್ತು ಕೇಂದ್ರ ಸಚಿವರಿಗೆ ಮನವಿ ಸಲ್ಲಿಸುತ್ತಿದ್ದಾರೆ. ರಾಯಚೂರಿನಲ್ಲಿ ಐಐಟಿ ಸ್ಥಾಪನೆ ಮಾಡಿ ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಕಳೆದ ವಾರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದರು. [ಪಿಟಿಐ ಚಿತ್ರ]












Click it and Unblock the Notifications