ಸರ್ಕಾರದಲ್ಲಿ ಡಿಕೆಗೆ ಪೈಪೋಟಿ!? ಮತ್ತೆ ಮೂರು ಡಿಸಿಎಂ ಗೆ ಒತ್ತಡ: ರಾಜಣ್ಣ ಹೇಳಿದ್ದೇನು?
ಹಾಸನ, ಜನವರಿ 06: ಆಡಳಿತ ಪಕ್ಷದಲ್ಲಿನ ಕೆಲವು ಬೆಳವಣಿಗೆಗಳು ಸರ್ಕಾರವನ್ನು ಮೇಲಿಂದ ಮೇಲೆ ಇಕ್ಕಟ್ಟಿಗೆ ಸಿಲುಕಿಸುತ್ತಲೇ ಇವೆ. ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ರಾಜ್ಯ ಕಾಂಗ್ರೆಸ್ ಲೋಕಸಭಾ ಚುನಾವಣೆಯತ್ತ ಗಮನ ಹರಿಸಿದ್ರೆ, ಇದೀಗ ಮೂವರು ಉಪಮುಖ್ಯಮಂತ್ರಿ ಸ್ಥಾನ ಸೃಷ್ಟಿಸಬೇಕೆಂದು ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ತರುವ ಪ್ರಯತ್ನ ಆರಂಭವಾಗಿದೆ.
ಪ್ರಸ್ತುತ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಒಂದೇ ಒಂದು ಡಿಸಿಎಂ ಹುದ್ದೆ ಸೃಷ್ಟಿಸಿದ್ದು, ಡಿ.ಕೆ.ಶಿವಕುಮಾರ್ ನಿಭಾಯಿಸುತ್ತಿದ್ದಾರೆ. ಇದೇ ಕಾರಣಕ್ಕೆ ರಾಜಣ್ಣ ಅವರ ಒತ್ತಾಯ ಪಕ್ಷದಲ್ಲಿ ಮಹತ್ವ ಪಡೆದುಕೊಂಡಿದೆ. ಈ ಕುರಿತು ಸಚಿವ ರಾಜಣ್ಣ ಮಾತನಾಡಿ, ನಾನು ಯಾರದ್ದೇ ಪರ ವಿರುದ್ಧ, ಯಾರೇ ಹೇಳಿ ಕೊಟ್ಟು ಹೇಳುಸ್ತಾರೆ ಆತರ ಅಲ್ಲ. ಡಿಸಿಎಂ ಮೂರು ಜನ ಮಾಡಿದ್ರೆ ಮುಂದೆ ಬರುವ ಲೋಕಸಭಾ ಚುನಾವಣೆಗೆ ಸಹಾಯ ಆಗುತ್ತೆ ಎನ್ನುವ ದೃಷ್ಟಿಯಿಂದ ನಾನು ಹೇಳಿರುವುದು. ಮಾಡೋದು ಬಿಡೋದು ಹೈಕಮಾಂಡ್‌ಗೆ ಬಿಟ್ಟಿದ್ದು ಎಂದು ಹೇಳಿದರು.

ನಾನು ಮೂವರು ಡಿಸಿಎಂ ಅಂತ ಹೇಳಿದ ತಕ್ಷಣ ಆಗಿ ಬಿಡುತ್ತೆ ಅಂತ ಅಲ್ಲಾ. ನಾನು ಹೈಕಮಾಂಡ್‌ಗೆ ಮನವಿ ಮಾಡಿದ್ದೇನೆ, ಅಂತಿಮವಾಗಿ ಅವರೇ ತಾನೇ ತೀರ್ಮಾನ ಮಾಡೋದು. ಮೊನ್ನೆ ಮೂರು ರಾಜ್ಯಗಳಲ್ಲಿ ಛತ್ತಿಸ್‌ಘಡ್, ರಾಜ್ಯಸ್ಥಾನ, ಮಧ್ಯಪ್ರದೇಶದಲ್ಲಿ ಬಿಜೆಪಿ ಮುಖ್ಯಮಂತ್ರಿ ಬಂದರು. ಮೂರು ರಾಜ್ಯದಲ್ಲೂ ಮೂರು ಉಪಮುಖ್ಯಮಂತ್ರಿಗಳನ್ನ ಅವರು ಮಾಡಿದ್ದಾರೆ. ಆದ್ದರಿಂದ ನಮ್ಮಲ್ಲೂ ಮಾಡಿ ಅಂತ ಸಲಹೆ ಅಷ್ಟೇ ಎಂದು ಹೇಳಿದರು.
ನಂದಗೊಂಡನಹಳ್ಳಿ ಮರ ಕಡಿತ ಪ್ರಕರಣ ಸಂಬಂಧ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿ, ಕುಮಾರಸ್ವಾಮಿ ಮಾಜಿಮುಖ್ಯಮಂತ್ರಿಗಳು, ಬಹಳ ಹಿರಿಯರು. ಅವರು ಹೇಳಿದ ಮಾತುಗಳು ಏನಿದ್ದಾವೆ ಅದನ್ನು ನಿಮ್ಮ ಪರಿಶೀಲನೆಗೆ, ತಿಳುವಳಿಕೆಗೆ ಬಿಡ್ತಿನಿ. ಅವರು ಸಿಎಂ ಇದ್ದಾಗ ಮಾಡುಸ್ತಾ ಇದ್ರೇನೋ, ಬೇರೆಯವರು ಯಾರೇ ಮುಖ್ಯಮಂತ್ರಿ ಆಗಲಿ ಆ ಮಟ್ಟಕ್ಕೆ ಇಳಿದು ನಡೆದುಕೊಳ್ತಾರೆ ಅಂತ ನಾವ್ಯಾರೂ ಊಹೆ ಮಾಡಲು ಸಾಧ್ಯವಿಲ್ಲ. ಅದು ಬಹಳ ಬಾಲಿಶವಾದಂತಹ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ತಿರುಗೇಟು ನೀಡಿದರು.
ಅವರು ಯಾರ ಪರ, ಯಾರ ವಿರುದ್ಧ ಮಾತಾಡ್ತಾರೆ ಅವರಿಗೆ ಸೇರಿದ್ದು. ಇದೇ ದೇವೇಗೌಡರು, ಇದೇ ಕುಮಾರಸ್ವಾಮಿ, ಇದೇ ರೇವಣ್ಣ ಯಾವ್ಯಾವ ಸಂದರ್ಭದಲ್ಲಿ ಯಾರನ್ನ ಹೆಂಗೆಂಗೆ ಟೀಕೆ ಮಾಡಿದ್ದಾರೆ. ಯೂಟ್ಯೂಬ್‌ನಲ್ಲಿ ಸಿಕ್ತಾವೆ ನೋಡಿಕೊಳ್ಳಿ. ನಾವ್ಯಾಕೇ ಹೇಳಲು ಹೋಗಬೇಕು ಎಂದು ಹೇಳಿದರು.
ಕನ್ನಡ ಪರ ಹೋರಾಟಗಾರ ನಾರಾಯಣಗೌಡ ಬಂಧನ ವಿಚಾರವಾಗಿ ಮಾತನಾಡಿ, ತಮಿಳುನಾಡಿನಲ್ಲಿ ಯಾರೂ ತಮಿಳುಪರ ಹೋರಾಟ ಮಾಡಲ್ಲ. ಕೇರಳದಲ್ಲಿ ಯಾರು ಮಲೆಯಾಳ ಪರ ಯಾವುದೇ ಸಂಘಟನೆ ಇಲ್ಲ, ಆದರೆ ಕರ್ನಾಟಕದಲ್ಲಿ ಮಾತ್ರ ಕನ್ನಡಕ್ಕಾಗಿ ಹೋರಾಟ ಮಾಡುವ ಹೋರಾಟಗಾರರು ಬಹಳಷ್ಟು ಜನ ಇದಾರೆ, ಹೋರಾಟಗಾರರು ಯಾರೂ ಕೂಡ ಕಾನೂನು ಕೈಗೆತ್ತಿಕೊಳ್ಳಬಾರದು. ಹೋರಾಟದಿಂದ ಆಸ್ತಿ ಹಾನಿ ಆಗಿದ್ದು ಕೂಡ ಕನ್ನಡಿಗರದ್ದೇ, ನಾವು ಕನ್ನಡದ ಹೆಸರಿನಲ್ಲಿ ಕನ್ನಡಿಗರ ಆಸ್ತಿ ನಾಶ ಮಾಡೋದು ಎಷ್ಟರಮಟ್ಟಿಗೆ ಸರಿ? ಎಂದು ಪ್ರಶ್ನಿಸಿದರು.
ಹೋರಾಟಗಾರರಿಗೆ ಕೆಲ ಹಿಡನ್ ಅಜೆಂಡಾ ಇರುತ್ತದೆ. ಆ ಹಿಡನ್ ಅಜೆಂಡಾ ಈಡೇರದಿದ್ದಾಗ ಹೀಗೆ ಹೋರಾಟ ಆಗುತ್ತೆ. ಆ ಬೋರ್ಡ್ ನೆನ್ನೆ ಮೊನ್ನೆ ಹಾಕಿದ್ದ, ಒಂದೇ ದಿನಕ್ಕೆ ಒಂದೇ ತಿಂಗಳಿಗೆ ಇಂತಹ ಬೋರ್ಡ್ ಹಾಕುತ್ತಾರಾ ನಿನ್ನೆ ಸಚಿವ ಸಂಪುಟದಲ್ಲಿ ಕನ್ನಡಕ್ಕೆ ಶೇಕಡಾ 60 ಕನ್ನಡ ಇರುವಂತೆ ತೀರ್ಮಾನ ಮಾಡಲಾಗಿದೆ ಎಂದು ಸಚಿವ ರಾಜಣ್ಣ ಹೇಳಿದರು.












Click it and Unblock the Notifications