ಸಿದ್ದರಾಮಯ್ಯ ಮನೇಲಿ ಕುಳಿತು ಗೆದ್ದರೆ, ನಾವು ಮನೇಲಿ ಮಲಗಿಕೊಂಡೇ ಗೆಲ್ತೀವಿ: ಎಂಟಿಬಿ ನಾಗರಾಜ್
ಬೆಂಗಳೂರು, ಡಿಸೆಂಬರ್ 19: ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸಿವೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಪೈಪೋಟಿ ನಡೆಸಲಿವೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು ಸಹ ಈ ಬಾರಿ ತನ್ನ ಅದೃಷ್ಟವನ್ನು ಪರೀಕ್ಷೆಗೆ ಒಳಪಡಿಸಲಿದೆ.
ಪ್ರಧಾನಿ ಮೋದಿ ಅವರ ವರ್ಚಸ್ಸನ್ನು ಬಿಜೆಪಿ ನೆಚ್ಚಿಕೊಂಡಿದೆ. ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಜನಪ್ರಿಯತೆ ಹಾಗೂ ಆಡಳಿತ ವಿರೋಧಿ ಅಲೆ ಸಹಾಯ ಮಾಡಲಿದೆ ಎಂಬ ಮಾತುಗಳು ಕೇಳಿಬಂದಿವೆ. ಪಂಚರತ್ನ ಯಾತ್ರೆ ಕೈಗೊಂಡಿರುವ ಜೆಡಿಎಸ್ ಒಕ್ಕಲಿಗರ ಮತಗಳನ್ನು ಹೆಚ್ಚಾಗಿ ನೆಚ್ಚಿಕೊಂಡಿದೆ.
ಚುನಾವಣೆಗೆ ನಾಲ್ಕೈದು ತಿಂಗಳು ಬಾಕಿ ಇರುವಾಗಲೇ ರಾಜಕೀಯ ಮುಖಂಡರ ನಡುವಿನ ಮಾತಿನ ಜಟಾಪಟಿ ಜೋರಾಗಿಯೇ ನಡೆಯುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಕಟ್ಟಿ ಹಾಕಲು ಬಿಜೆಪಿ ನಾಯಕರು ಶತಾಯುಗತಾಯ ಪ್ರಯತ್ನ ನಡೆಸಿದ್ದಾರೆ.

ಮನೆಯಲ್ಲಿ ಕುಳಿತರು ಗೆಲ್ಲುತ್ತೇವೆ ಎಂದ ಮಾಜಿ ಸಿಎಂ
ವಿರೋಧ ಪಕ್ಷದ ನಾಯಕರೂ ಆಗಿರುವ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇದ್ದಾರೆ. ಮುಂದಿನ ಬಾರಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳಲಿದೆ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ಮಾತುಗಳನ್ನು ಸಿದ್ದರಾಮಯ್ಯ ಹೇಳಿದ್ದಾರೆ.
ಮುಂದಿನ ಚುನಾವಣೆಯಲ್ಲಿ ನಾವು ಮನೆಯಲ್ಲಿ ಕುಳಿತರೂ ಗೆಲ್ಲುತ್ತೇವೆ ಎಂಬ ಮಾತನ್ನು ಸಿದ್ದರಾಮಯ್ಯ ನುಡಿದಿದ್ದಾರೆ. ಗೆಲುವಿನ ಉತ್ಸಾಹದಲ್ಲಿರುವ ಅವರು, ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬುದೀಗ ಕುತೂಹಲದ ಸಂಗತಿಯಾಗಿ ಉಳಿದುಕೊಂಡಿದೆ.

ಸಿದ್ದರಾಮಯ್ಯಗೆ ಎಂಟಿಬಿ ತಿರುಗೇಟು
'ನಾವು ಮನೆಯಲ್ಲಿ ಕುಳಿತರೂ ಗೆಲ್ಲುತ್ತೇವೆ' ಎಂಬ ಸಿದ್ದರಾಮಯ್ಯ ಮಾತಿಗೆ ಬಿಜೆಪಿ ಎಂಎಲ್‌ಸಿ ಎಂಟಿಬಿ ನಾಗರಾಜ್ ತಿರುಗೇಟು ನೀಡಿದ್ದಾರೆ. ಈ ವಿಚಾರವಾಗಿ ಚಿಕ್ಕಬಳ್ಳಾಪುರದಲ್ಲಿ ಮಾತಿನಾಡಿದ ಅವರು, 'ಮಾಜಿ ಸಿಎಂ ಸಿದ್ದರಾಮಯ್ಯ ಮನೆಯಲ್ಲಿ ಕುಳಿತರೂ ಗೆಲ್ಲುತ್ತೇವೆ ಎಂದು ಹೇಳಿದ್ದಾರೆ. ನಾವು ಮನೆಯಲ್ಲಿ ಮಲಗಿಕೊಂಡರೂ, ನಿದ್ರೆ ಮಾಡಿದರೂ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತೇವೆ' ಎಂದು ಹೇಳಿದ್ದಾರೆ.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷವೇ ಅಧಿಕಾರ ಬರಲಿದೆ. ಬಿಜೆಪಿಯವರೇ ಮುಖ್ಯಮಂತ್ರಿ ಆಗಲಿದ್ದಾರೆ. ಆದರೆ, ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬುದನ್ನು ಪಕ್ಷದ ವರಿಷ್ಠ ನಾಯಕರು ನಿರ್ಧರಿಸಲಿದ್ದಾರೆ ಎಂದು ಎಂಟಿಬಿ ತಿಳಿಸಿದ್ದಾರೆ.
ಹೊಸಕೋಟೆಯಲ್ಲಿ ಮಗನಿಗೆ ಬಿಜೆಪಿ ಟಿಕೆಟ್ ನೀಡಬೇಕೆಂಬುದು ನನ್ನ ಒತ್ತಾಸೆಯಾಗಿದೆ. ನನಗೀಗ 72 ವರ್ಷಗಳಾಗಿವೆ. ಮಗನಿಗೆ 36 ವರ್ಷಗಳಾಗಿವೆ. ಆತನನ್ನು ರಾಜಕೀಯಕ್ಕೆ ತರಬೇಕೆಂಬುದು ನನ್ನ ಬಯಕೆಯಾಗಿದೆ ಎಂದೂ ಅವರು ಹೇಳಿದ್ದಾರೆ.
ಕಾಂಗ್ರೆಸ್‌ನಿಂದ ಬಿಜೆಪಿಗೆ ಪಕ್ಷಾಂತರಗೊಂಡಿರುವ ಎಂಟಿಬಿ ನಾಗರಾಜ್ ಹೊಸಕೋಟೆ ವಿಧಾನಸಭೆಯ ಉಪ ಚುನಾವಣೆಯಲ್ಲಿ ಸೋಲು ಕಂಡಿದ್ದರು. ಆ ನಂತರ ಎಂಎಲ್‌ಸಿ ಆಗಿ ಸಚಿವರೂ ಸ್ಥಾನವನ್ನೂ ಅಲಂಕರಿಸಿದ್ದಾರೆ. ಎಂಟಿಬಿ ನಾಗರಾಜ್ ಒಂದು ಕಾಲದಲ್ಲಿ ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು.












Click it and Unblock the Notifications