ಆರೋಪಿ ಘಟನಾ ಸ್ಥಳದಲ್ಲಿ ಇರಲಿಲ್ಲವೆಂದರೆ ಕೃತ್ಯದ ಕಾರಣಕ್ಕೆ ಒತ್ತಡ ಹೇರುವಂತಿಲ್ಲ- ಹೈಕೋರ್ಟ್
ಬೆಂಗಳೂರು, ಏ.30. ಅಪರಾಧ ನಡೆದ ಸ್ಥಳದಲ್ಲಿ ಆರೋಪಿಯ ಉಪಸ್ಥಿತಿ ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾದರೆ ಆಗ ಆರೋಪಿಗೆ ಕೃತ್ಯಕ್ಕೆ ಕಾರಣ ನೀಡೆಂದು ಒತ್ತಡ ಹೇರುವಂತಿಲ್ಲವೆಂದು ನ್ಯಾಯಾಲಯ ಆದೇಶಿದೆ.
ಕೊಲೆ ಪ್ರಕರಣವೊಂದರಲ್ಲಿ ನ್ಯಾಯಪೀಠ, ಆರೋಪಿ ಘಟನಾ ಸ್ಥಳದಲಿಲ್ಲವೆಂದ ಮೇಲೆ ಭಾರತೀಯ ಸಾಕ್ಷ್ಯ ಕಾಯ್ದೆಯ ಸೆಕ್ಷನ್ 114ರ ಪ್ರಕಾರ ಆತನ ವಿರುದ್ಧ ಯಾವುದೇ ಪ್ರತಿಕೂಲ ತೀರ್ಮಾನ ತೆಗೆದುಕೊಳ್ಳುವುದು ಸೂಕ್ತವಲ್ಲ ಹಾಗೂ ಅಪರಾಧದ ಕಾರಣ ಬಹಿರಂಗಪಡಿಸುವಂತೆ ಆರೋಪಿಯನ್ನು ಕೇಳಲು ನ್ಯಾಯಾಲಯವು ಕಾಯ್ದೆಯ ಸೆಕ್ಷನ್ 106 ಅನ್ವಯಿಸಲು ಸಾಧ್ಯವಿಲ್ಲ ಎಂದು ಆದೇಶಿಸಿದೆ.
ಪತ್ನಿಯನ್ನು ಕೊಲೆ ಮಾಡಿದ ಆರೋಪದಡಿ ಸುರೇಶ್ ಎಂಬುವನಿಗೆ ಅಧೀನ ನ್ಯಾಯಾಲಯ ವಿಧಿಸಿದ ಜೀವಾವಧಿ ಶಿಕ್ಷೆ ರದ್ದುಪಡಿಸಿದ ನ್ಯಾಯಮೂರ್ತಿ ಬಿ.ವೀರಪ್ಪ ಮತ್ತು ನ್ಯಾಯಮೂರ್ತಿ ಎಸ್.ರಾಚಯ್ಯ ಅವರಿದ್ದ ವಿಭಾಗೀಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಕೋರ್ಟ್ ಆದೇಶವೇನು?
ಹೆಂಡತಿ ಕೊಲೆ ಮಾಡಿದ ಆರೋಪದಲ್ಲಿ ಸುರೇಶ್ ಗೆ ಜೀವಾವಧಿ ಶಿಕ್ಷೆ ರದ್ದುಪಡಿಸಿದೆಯಾದರೂ ವರದಕ್ಷಿಣೆ ಕಿರುಕುಳ ಆರೋಪದಡಿ ಒಂದು ಜೈಲು ಶಿಕ್ಷೆ ವಿಧಿಸಿದೆ.
"ಕೊಲೆ ನಡೆದ ಸ್ಥಳದಲ್ಲಿ ಆರೋಪಿ ಇದ್ದ ಎಂಬುದನ್ನು ಪ್ರಾಸಿಕ್ಯೂಷನ್ ಸಾಬೀತುಪಡಿಸಬೇಕು. ಈ ಪ್ರಕರಣದಲ್ಲಿ ಕೊಲೆಯಾದ ಸ್ಥಳದಲ್ಲಿ ಪತಿ ಸುರೇಶ್ ಹಾಜರಿದ್ದ ಎಂಬುದನ್ನು ಪ್ರಾಸಿಕ್ಯೂಷನ್ ಸಾಕ್ಷ್ಯಧಾರದೊಂದಿಗೆ ಸಾಬೀತುಪಡಿಸಿಲ್ಲ. ಹಾಗಿದ್ದಾಗ ಪತ್ನಿಯನ್ನು ಆರೋಪಿಯೇ ಕೊಲೆ ಮಾಡಿದ್ದಾನೆಂಬ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ.'' ಎಂದು ನ್ಯಾಯಪೀಠ ಹೇಳಿದೆ.
ಅಲ್ಲದೆ, ಭಾರತೀಯ ಸಾಕ್ಷ್ಯ ಕಾಯ್ದೆಯ ಸೆಕ್ಷನ್ 114 ರ ಪ್ರಕಾರ ಆತನ ವಿರುದ್ಧ ಯಾವುದೇ ಪ್ರತಿಕೂಲವಾದ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ. ಅಲ್ಲದೆ, ಪತ್ನಿಯನ್ನು ಕೊಲೆ ಮಾಡಿರುವುದಕ್ಕೆ ಕಾರಣ ಬಹಿರಂಗಪಡಿಸುವಂತೆ ಕಾಯ್ದೆಯ ಸೆಕ್ಷನ್ 106ರ ಪ್ರಕಾರ ಆರೋಪಿ ನ್ಯಾಯಾಲಯ ಕೇಳಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ;
2012ರ ಡಿ.14ರಂದು ಮಗಳ ಕೊಲೆಯಾಗಿದೆಯೆಂದು ಸುರೇಶ್ ಮಾವ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸುರೇಶ್ ಸದಾ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ. ಜೊತೆಗೆ ಆಕೆಯ ಶೀಲ ಶಂಕಿಸುತ್ತಿದ್ದ. ಈ ಸಂಬಂಧ ಸಾಕಷ್ಟು ಬಾರಿ ಹಿರಿಯರು ರಾಜಿ ಸಂಧಾನ ನಡೆಸಿದ್ದರು. ನಂತರ ಸುರೇಶ್ ಮತ್ತು ಪತ್ನಿ ಪ್ರತ್ಯೇಕ ಮನೆಯಲ್ಲಿ ವಾಸ ಮಾಡಿದ್ದರು. ಅಂತಿಮವಾಗಿ ಸುರೇಶ್ ಪತ್ನಿಯನ್ನು ಕೊಲೆ ಮಾಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ಅದನ್ನು ಆಧರಿಸಿ ಸುರೇಶ್ ವಿರುದ್ಧ ಕೊಲೆ, ವರದಕ್ಷಿಣೆ ಕಿರುಕುಳ ಮತ್ತು ಕೌಟುಂಬಿಕ ದೌರ್ಜನ್ಯ ಆರೋಪದಡಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ವಿಚಾರಣಾ ನ್ಯಾಯಾಲಯ ಸುರೇಶ್‌ಗೆ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಮತ್ತು 50 ಸಾವಿರ ದಂಡ, ವರದಕ್ಷಿಣೆ ಕಿರುಕುಳ ಆರೋಪಕ್ಕೆ ಒಂದು ವರ್ಷ ಜೈಲು ಮತ್ತು ಐದು ಸಾವಿರ ದಂಡ ವಿಧಿಸಿತ್ತು. ಈ ಆದೇಶ ರದ್ದು ಕೋರಿ ಸುರೇಶ್ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದನು.












Click it and Unblock the Notifications