ಮೋದಿ ಮಾತು ಕೇಳಿದ್ದರೆ 5 ವರ್ಷವೂ ನಾನೇ ಸಿಎಂ: ಪ್ರಧಾನಿ ಜೊತೆಗಿನ ರಹಸ್ಯ ಬಿಚ್ಚಿಟ್ಟ ಹೆಚ್ ಡಿ ಕುಮಾರಸ್ವಾಮಿ
ಬೆಂಗಳೂರು, ಜುಲೈ 14: ಕಳೆದ ಐದು ವರ್ಷಗಳ ಪೂರ್ಣ ಅವಧಿಗೆ ನಾನೇ ಸಿಎಂ ಆಗಿರುತ್ತಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಸದನದಲ್ಲಿ ಗುರುವಾರ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಹೌದು, ಗುರುವಾರ ವಿಧಾನಸಭೆಯಲ್ಲಿ ರಾಜ್ಯಪಾಲ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡುತ್ತಿದ್ದ ಸಂದರ್ಭದಲ್ಲಿ ಆಪರೇಷನ್ ಕಮಲದ ಪ್ರಸ್ತಾಪ ಬಂದಾಗ ಮಧ್ಯಪ್ರವೇಶ ಮಾಡಿ ಮಾತನಾಡಿದ ಎಚ್ ಡಿ ಕುಮಾರಸ್ವಾಮಿ, ನಾವು ಕಾಂಗ್ರೆಸ್ ಜೊತೆಗೆ ಮೈತ್ರಿ ಸರ್ಕಾರ ನಡೆಸುತ್ತಿದ್ದ ಸಂದರ್ಭದಲ್ಲಿ ಲೋಕಸಭಾ ಚುನಾವಣೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಕರೆದು ಒಂದೂವರೆ ಗಂಟೆಗಳ ಕಾಲ ಚರ್ಚಿಸಿದ್ದರು. ಈ ವೇಳೆ ಮುಂದಿನ ನಾಲ್ಕು ವರ್ಷ ಯಾವುದೇ ಸಮಸ್ಯೆ ಇರಲ್ಲ, ಸರ್ಕಾರಕ್ಕೆ ಬೆಂಬಲ ಕೊಡುತ್ತೇವೆ ಎಂದು ಆಹ್ವಾನ ನೀಡಿದ್ದರು ಎಂದು ಅಚ್ಚರಿಯ ಸಂಭಾಷಣೆಯನ್ನ ಬಹಿರಂಗ ಪಡೆಸಿದ್ದಾರೆ.

ನಾನು ಈ ಹಿಂದೆ ಪ್ರಧಾನಿ ಮೋದಿ ಅವರ ಮಾತು ಕೇಳಿದ್ದರೆ ಕಳೆದ ಐದು ವರ್ಷಗಳ ಕಾಲ ನಾನೇ ಪೂರ್ಣ ಅವಧಿಗೆ ಮುಖ್ಯಮಂತ್ರಿ ಆಗಿರುತ್ತಿದ್ದೆ ಎಂದು ಸದನದಲ್ಲಿ ಅಚ್ಚರಿಯ ಹೇಳಿಕೆಯನ್ನ ನೀಡಿದ್ದು, ಆಪರೇಷನ್ ಕಮಲ ಎಂಬುದು ಇತ್ತು. ಆದರೆ ಮಾಧ್ಯಮಗಳಲ್ಲಿ ಕಳೆದ ಕೆಲವು ದಿನಗಳಲ್ಲಿ ಆಪರೇಷನ್ ಹಸ್ತ ಎಂಬ ಸುದ್ದಿ ಹೆಚ್ಚಾಗಿ ಬರುತ್ತಿವೆ ಎಂದು ಹೇಳಿದರು.
ಈ ವೇಳೆ ಕುಮಾರಸ್ವಾಮಿ ಅವರೇ ಏಕೆ ಅವರ ಜೊತೆ ಸೇರಿಕೊಂಡಿದ್ದೀರಾ? ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಮಾತನಾಡಿ, ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಲೋಕಸಭಾ ಚುನಾವಣೆಗಿಂತ 15 ದಿನ ಮೊದಲು ಪ್ರಧಾನಿ ನರೇಂದ್ರ ಮೋದಿ ಕರೆದು ಒಂದೂವರೆ ಗಂಟೆ ಚರ್ಚೆ ಮಾಡಿರುವುದು ಸತ್ಯ ಇದೆ. ಮುಂದಿನ ನಾಲ್ಕು ವರ್ಷ ಯಾವುದೇ ಸಮಸ್ಯೆ ಇರೊಲ್ಲ. ಸರ್ಕಾರಕ್ಕೆ ಬೆಂಬಲ ಕೊಡುತ್ತೇವೆ ಎಂದು ಆಹ್ವಾನ ಕೊಟ್ಟಿದ್ದರು. ಆದರೆ ನಾನು ಅದನ್ನು ತಿರಸ್ಕಾರ ಮಾಡಿ. ನಿಮ್ಮ ಜೊತೆಗೆ ಸರ್ಕಾರ ಮಾಡಿದೆ ಕಪ್ಪು ಚುಕ್ಕೆ ಬರಬಾರದು ಎಂಬ ಕಾರಣಕ್ಕಾಗಿ ಮುಂದುವರಿದೆ ಎಂದರು.
ಅವತ್ತು ದೇಶ ಪ್ರಧಾನಿ ಮಾತು ಕೇಳಿ ತೀರ್ಮಾನ ಮಾಡಿದ್ದರೆ ನಾನು ಕಳೆದ ಐದು ವರ್ಷಗಳ ಕಾಲ ಮುಖ್ಯಮಂತ್ರಿ ಆಗ್ತಿದ್ದೆ. ಪದೇ ಪದೇ ಬಿಜೆಪಿ ಬಿ ಟೀಂ ಎಂದು ಹೇಳುತ್ತಾ ನೀವೇ ಬಿಜೆಪಿ ಕಡೆ ತಳ್ಳುತ್ತೀರಿ. ನಾವೂ ರಾಜಕೀಯದಲ್ಲಿ ಉಳಿಯಬೇಕಲ್ವಾ? ನಾನು ಮಾಡೋದಾದರೆ ನೇರವಾಗಿ ಮಾಡ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತಿಗೆ ಟಾಂಗ್ ನೀಡಿದರು.
ನಾನು ಆಪರೇಷನ್ ಕಮಲದ ಮುಖ್ಯಮಂತ್ರಿ ಅಲ್ಲ, ರಾಜಕೀಯ ನಡೆತಿರುವುದೇ ಜಾತಿಯ ಮೇಲೆ, ಯಾವ ಜಾತಿಯ ಮೇಲೆ ಚರ್ಚೆ ಮಾಡುತ್ತೀರಾ. ರಾಜಕೀಯ ನಡೆಯುತ್ತಿರುವುದೇ ಜಾತಿಯ ಮೇಲೆ ಎಂದು ಕಾಂಗ್ರೆಸ್ ನಾಯಕರ ವಿರುದ್ದ ಕಿಡಿಕಾರಿದರು.












Click it and Unblock the Notifications