ಇವತ್ತು ಚುನಾವಣೆ ನಡೆದರೆ ಬಿಜೆಪಿ ಗೆಲ್ಲುವ ಸ್ಥಾನಗಳೆಷ್ಟು ಗೊತ್ತಾ? : ಬಿ ವೈ ವಿಜಯೇಂದ್ರ ಅವರ ಲೆಕ್ಕಾಚಾರ ಇಲ್ಲಿದೆ.
ಬೆಂಗಳೂರು, ಫೆಬ್ರವರಿ 08: ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡ ರಾಜ್ಯ ಬಿಜೆಪಿ, ಇದೀಗ ಲೋಕಸಭಾ ಚುನಾವಣೆ ಹಿನ್ನಲೆ ಫುಲ್ ಆಕ್ಟಿವ್ ಆಗಿದೆ. ಇತ್ತ ರಾಜ್ಯಾಧ್ಯಕ್ಷರಾದ ಬಳಿಕ ಬಿ ವೈ ವಿಜಯೇಂದ್ರ ಅವರು ರಾಜ್ಯ ಪ್ರವಾಸವನ್ನ ಕೈಗೊಂಡಿದ್ದು, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ಇವತ್ತೇ ಚುನಾವಣೆ ನಡೆದರೇ ಬಿಜೆಪಿಯೇ ಅಧಿಕಾರಕ್ಕೆ ಬರುವ ವಿಶ್ವಾಸವನ್ನ ವ್ಯಕ್ತಪಸಿದ್ದಾರೆ.
ಹೌದು, ಇಂಥ ಕ್ಷೇತ್ರ ಗೆದ್ದೇಗೆಲ್ಲುತ್ತೇವೆ ಎಂಬ ಕ್ಷೇತ್ರವನ್ನು ತೋರಿಸುವ ಸ್ಥಿತಿಯಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು ಇಲ್ಲ. ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ನಂತರ, ಅಯೋಧ್ಯೆಯಲ್ಲಿ ಬಾಲಕ ರಾಮನ ಪ್ರತಿಷ್ಠೆ ಆದ ಬಳಿಕ ಇಡೀ ದೇಶದಲ್ಲಿ ವಾತಾವರಣ ಬದಲಾಗಿದೆ. ಇದರ ಪರಿಣಾಮವೇ ಇವತ್ತು ರಾಜ್ಯದಲ್ಲಿ ನಾಳೆ ವಿಧಾನಸಭಾ ಚುನಾವಣೆ ನಡೆದರೂ ಕೂಡ ಬಿಜೆಪಿ 130-140 ಸ್ಥಾನಗಳನ್ನು ಗೆಲ್ಲುವ ಸ್ಥಿತಿಯಲ್ಲಿದೆ ಎಂದು ತಿಳಿಸಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ ಆಗಲು ಹಲವಾರು ಕಾರಣಗಳಿವೆ. ಆಗ ಇದ್ದ ವಾತಾವರಣ ಮತ್ತು ಇವತ್ತಿನ ವಾತಾವರಣಕ್ಕೆ ಅಜಗಜಾಂತರ ವ್ಯತ್ಯಾಸವಿದೆ. ರಾಜ್ಯದ ಕಾಂಗ್ರೆಸ್ ಸರಕಾರವು ಕೆಲವು ತಿಂಗಳ ಹಿಂದೆ 20-22 ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸದಲ್ಲಿತ್ತು.
ಈಗ ರಾಜ್ಯದಲ್ಲಿ ಸಂಪೂರ್ಣ ಬಿಜೆಪಿ ಪರವಾದ ವಾತಾವರಣವಿದೆ. ನರೇಂದ್ರ ಮೋದಿಜೀ ಅವರ ಪರವಾದ ಅಲೆ ಮತ್ತೊಮ್ಮೆ ಕಾಣುತ್ತಿದೆ. ಇದರ ಪರಿಣಾಮವಾಗಿ ಯಾವುದೇ ಸಂದರ್ಭದಲ್ಲಿ ಲೋಕಸಭಾ ಚುನಾವಣೆ ನಡೆದರೂ ಸಹ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಪಕ್ಷ ಒಂದು ಸೀಟು ಗೆಲ್ಲಲು ಕೂಡ ತಡಕಾಟದಲ್ಲಿ ಸಿಲುಕುವ ಸ್ಥಿತಿ ಇದೆ ಎಂದು ನುಡಿದರು.

ಮಾಡಾಳ್ ಮಲ್ಲಿಕಾರ್ಜುನ್ ಅವರನ್ನು ಅತಿ ಶೀಘ್ರವಾಗಿ ಬಿಜೆಪಿಗೆ ಸೇರಿಸಬೇಕೆಂದು ನಾನು ರಾಜ್ಯಾಧ್ಯಕ್ಷನಾದ ಬಳಿಕ ಒತ್ತಡ ಇತ್ತು. ಇವತ್ತು ಆ ಕಾರ್ಯ ಪೂರ್ಣಗೊಂಡಿದೆ. ಇತ್ತೀಚೆಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿದ್ದಾರೆ ಎಂದು ವಿವರಿಸಿದರು. ಬಿಜೆಪಿಗೆ ಶಕ್ತಿ ತುಂಬಲು, ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ದೊಡ್ಡ ಅಂತರದಲ್ಲಿ ಗೆಲ್ಲಿಸಿ ಮೋದಿಜೀ ಕೈಯನ್ನು ಬಲಪಡಿಸಲು ಮಾಡಾಳ್ ವಿರೂಪಾಕ್ಷಪ್ಪ, ಮಾಡಾಳ್ ಮಲ್ಲಿಕಾರ್ಜುನ್, ಡಾ. ರವಿಕುಮಾರ್, ಗುರುಸಿದ್ದನಗೌಡ ಅವರು ಬಿಜೆಪಿ ಸೇರಿದ್ದು ಸಂತಸ ತಂದಿದೆ ಎಂದು ತಿಳಿಸಿದರು.
ಇಂದು ಬಿಜೆಪಿ ದಾವಣಗೆರೆ ಜಿಲ್ಲಾಧ್ಯಕ್ಷರು ಜವಾಬ್ದಾರಿ ಸ್ವೀಕರಿಸುತ್ತಾರೆ. ಹಿರಿಯರು, ರೈತ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಮಾಜಿ ಡಿಸಿಎಂ ಈಶ್ವರಪ್ಪ ಅವರೂ ಪಾಲ್ಗೊಳ್ಳುತ್ತಾರೆ. ವಿಧಾನಪರಿಷತ್ ಅಭ್ಯರ್ಥಿಗಳು ಮತ್ತು ರಾಜ್ಯಸಭಾ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ನಾನು ದೆಹಲಿಗೆ ಹೋಗಲಿದ್ದೇನೆ ಎಂದು ತಿಳಿಸಿದರು. ನಾನು ಮುಂದಿನ ದಿನಗಳಲ್ಲಿ ದಾವಣಗೆರೆಗೆ ಬರುತ್ತೇನೆ ಎಂದು ತಿಳಿಸಿದರು.












Click it and Unblock the Notifications