ತಪ್ಪು ಮಾಡಿದವರನ್ನು ಶಿಕ್ಷಿಸಿ, ನಾನೇ ಬಂದು ಕಾಲಿಗೆ ನಮಸ್ಕಾರ ಮಾಡುತ್ತೇನೆ: ಪ್ರತಾಪ್ ಸಿಂಹ ಹೀಗೆ ಹೇಳಿದ್ಯಾಕೆ
ಮೈಸೂರು, ಮೇ 25: ಬಿಜೆಪಿ ಸರ್ಕಾರದ ಮೇಲೆ 40% ಕಮಿಷನ್, ಬಿಟ್ ಕಾಯಿನ್ ಬಗ್ಗೆ ಕಾಂಗ್ರೆಸ್ ಆರೋಪ ಮಾಡಿತ್ತು. ಈಗ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬಂದಿದೆ, ಈಗ ನೀವೇ ಅಧಿಕಾರಕ್ಕೆ ಬಂದಿದ್ದಿರಾ ತನಿಖೆ ಮಾಡಿ.ತಪ್ಪು ಮಾಡಿದವರನ್ನು ಶಿಕ್ಷಿಸಿ, ನಾನೇ ಬಂದು ಕಾಲಿಗೆ ಬಂದು ನಮಸ್ಕಾರ ಮಾಡುತ್ತೇನೆ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 40% ಕಮೀಷನ್ ಸರ್ಕಾರ ಅಂತಾ ಊರೂರು ತಿರುಗಿ ಪ್ರಚಾರ ಮಾಡಿದ್ದೀರಾ. ಈಗ ನೀವೇ ಅಧಿಕಾರಕ್ಕೆ ಬಂದಿದ್ದಿರಾ ತನಿಖೆ ಮಾಡಿ, ಕಮಿಷನ್ ಪಡೆವರನ್ನು ಜೈಲಿಗೆ ಕಳುಹಿಸುವ ಜವಾಬ್ದಾರಿ ನಿಮ್ಮದು. ಈ ಜವಾಬ್ದಾರಿ ನಿಭಾಯಿಸದೇ ಇದ್ದರೆ ನೀವು ಹೇಳಿದ್ದು ಸುಳ್ಳು ಅಂತಾ ಆಗುತ್ತದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ದ ಕಿಡಿಕಾರಿದರು.

ನಾನು ಅಂತರಾಳದಿಂದಲೇ ನಮ್ಮ ಕಾರ್ಯಕರ್ತರ ಕ್ಷಮೆ ಕೇಳಿದ್ದೇನೆ. ನಮ್ಮ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುವುದು ನಿಧಾನವಾಗಿ ಶುರುವಾಗಿದೆ, ಬಿಜೆಪಿ ಕಾರ್ಯಕರ್ತರು ಈಗ ಅಪಾಯದಲ್ಲಿದ್ದಾರೆ. ನಮ್ಮ ಕಾರ್ಯಕರ್ತರನ್ನು ಅಪಾಯಕ್ಕೆ ತಳ್ಳಿದ್ದಕ್ಕೆ ನಾನು ಕ್ಷಮೆ ಕೇಳಿದ್ದೇನೆ, ನಮ್ಮ ಕಾರ್ಯಕರ್ತರು ನಿಜವಾಗಿಯೂ ನೊಂದಿದ್ದಾರೆ. ದೇಶ, ಧರ್ಮ ಅಂತ ನಮ್ಮ ಕಾರ್ಯಕರ್ತರು ದುಡಿಯುತ್ತಾರೆ, ನಮ್ಮಲ್ಲಿ ಗುತ್ತಿಗೆದಾರಿಕೆ ಮಾಡುವ ಕಾರ್ಯಕರ್ತರೇ ಕಡಿಮೆ. ಪಕ್ಷಕ್ಕಾಗಿ ದುಡಿಯುವ ಕಾರ್ಯಕರ್ತರು ನಮ್ಮಲ್ಲಿ ಹೆಚ್ಚಿದ್ದಾರೆ ಎಂದು ಹೇಳಿದರು.
ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡುವುದನ್ನು ರಾಜ್ಯ ಸರ್ಕಾರ ತಡೆ ಹಿಡಿದಿರುವ ವಿಚಾರವಾಗಿ ಮಾತನಾಡಿ, ಎಷ್ಟು ಪರ್ಸೆಂಟ್ ಕಮಿಷನ್ ವೈಟ್ ಮಾಡುತ್ತಿದ್ದೀರಾ? ಪರ್ಸೆಂಟೇಜ್ ಗಾಗಿ ನೀವು ಇಂತಹ ಆದೇಶ ಮಾಡಿದ್ದೀರಾ? ಆಡಳಿತ ನಡೆಸುವವರು ಬದಲಾಗುತ್ತಾರೆ, ಆದರೆ ಆಡಳಿತ ವ್ಯವಸ್ಥೆ ಬದಲಾಗುವುದಿಲ್ಲ. ವ್ಯವಸ್ಥೆಯೇ ಹೀಗಿರುವಾಗ ಕಾಮಗಾರಿಗೆ ಹಣ ಬಿಡುಗಡೆ ಮಾಡದೇ ಯಾಕೆ ತಡೆ ಹಿಡಿದಿದ್ದೀರಾ? ಎಂದು ರಾಜ್ಯ ಸರ್ಕಾರಕ್ಕೆ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದರು.

ವಿಧಾನಸಭಾ ಚುನಾವಣೆಯ ಫಲಿತಾಂಶ ಮುಂಬರುವ ಲೋಕಸಭಾ ಚುನಾವಣೆ ಮೇಲೆ ಯಾವುದೇ ಬೀರುವುದಿಲ್ಲ. ದೇಶಕ್ಕೆ ಎಂತಹ ನಾಯಕ ಬೇಕು ಎಂದು ಕನ್ನಡಿಗರಿಗೆ ಗೊತ್ತಿದೆ. ಒಂದು ಚುನಾವಣೆಗೂ ಮತ್ತೊಂದು ಚುನಾವಣೆಗೂ ವ್ಯತ್ಯಾಸವಿದೆ, ಕಾಂಗ್ರೆಸ್ ನ ಗ್ಯಾರಂಟಿ ಕಾರ್ಡ್ ವಿಚಾರದಲ್ಲಿ ಬಿಜೆಪಿ ಎಚ್ಚೆತ್ತು ಕೊಳ್ಳಬೇಕಿತ್ತು. ಎಚ್ಚೆತ್ತು ಕೊಂಡಿದ್ದರೆ ಬಿಜೆಪಿಗೆ ಇವತ್ತು ಈ ಸ್ಥಿತಿ ಬರುತ್ತಿರಲಿಲ್ಲ. ಗ್ಯಾರಂಟಿ ಸ್ಕೀಂ ಪರ ನಾನು ಸಹ ಇದ್ದೇನೆ. ಆದಾಯದ ಆಧಾರದ ಮೇಲೆ ಖರ್ಚು ಮಾಡಬೇಕು ಎಂಬ ನಿಯಮ ವಿಧಾನಸಭೆಯಲ್ಲಿ ಇದೆ. ಮುಂದಿನ ತಲೆ ಮಾರನ್ನು ಅಪಾಯಕ್ಕೆ ತಳ್ಳಬೇಡಿ. ಗ್ಯಾರಂಟಿ ಕಾರ್ಡ್ ನಲ್ಲಿ ಕಂಡೀಷನ್ ಅಪ್ಲೈ ಅಂತಾ ಎಲ್ಲೂ ಹಾಕಿಲ್ಲ. ಎಲ್ಲಾ ಮನೆಯ ಯಜಮಾನಿಗೆ 2 ಸಾವಿರ ಕೊಡಬೇಕು, ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕೊಡಬೇಕು. ಜೂನ್ 1 ರವರೆಗೆ ಕಾಯುತ್ತೇನೆ, ಜೂನ್ 1 ರಿಂದ 200 ಯೂನಿಟ್ ಒಳಗೆ ವಿದ್ಯುತ್ ಬಿಲ್ ಬಂದರೆ ಬಿಲ್ ಕಟ್ಟಬೇಡಿ ಎಂದು ಹೇಳಿದರು.
ಮೈಸೂರಿನ ಅಭಿವೃದ್ಧಿಗಾಗಿ ನಾನು ಯಾರ ಕಾಲು ಬೇಕಾದರೂ ಹಿಡಿಯುತ್ತೇನೆ. ಮೈಸೂರು-ಕೊಡಗು ಅಭಿವೃದ್ಧಿ ಗಾಗಿ ಯಾರ ಕೈ, ಕಾಲು ಬೇಕಾದರೂ ಹಿಡಿಯುತ್ತೇನೆ, ಅಂಗಲಾಚುತ್ತೇನೆ, ಚುನಾವಣೆ ಬಂದಾಗ ರಾಜಕಾರಣ ಮಾಡೋಣ, ಉಳಿದ ಸಮಯದಲ್ಲಿ ಅಭಿವೃದ್ಧಿ ರಾಜಕಾರಣ ಮಾಡೋಣ, ಸಿದ್ದರಾಮಯ್ಯ ಅವರನ್ನು ಸಹ ಭೇಟಿ ಮಾಡುತ್ತೇನೆ, ಅಭಿವೃದ್ಧಿ ಪರ ಇರುವವರನ್ನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಿ. ಅಭಿವೃದ್ಧಿ ವಿಚಾರದಲ್ಲಿ ನಾನು ಸಿಎಂ ಮನೆಗೆ ಹೋಗುತ್ತೇನೆ ಎಂದು ತಿಳಿಸಿದರು.












Click it and Unblock the Notifications