ಯಾರ ಕೈಕಾಲು ಕೂಡ ಹಿಡಿಲ್ಲ, 2028ಕ್ಕೆ ನಾನೇ ಸಿಎಂ ಆಗುತ್ತೇನೆ : ಯತ್ನಾಳ್ ಸ್ಫೋಟಕ ಹೇಳಿಕೆ
ವಿಜಯಪುರ, ಏಪ್ರಿಲ್ 02: ಸ್ವಪಕ್ಷದ ನಾಯಕರ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸಿದ ಕಾರಣಕ್ಕೆ ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರಿಗೆ ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ನೀಡಿದ್ದ ನೋಟಿಸ್ ಗೆ ಉತ್ತರಿಸದ ಹಿನ್ನೆಲೆಯಲ್ಲಿ ಯತ್ನಾಳ್ ಅವರನ್ನು ಪಕ್ಷದಿಂದ 6 ವರ್ಷಗಳ ಕಾಲ ಉಚ್ಚಾಟನೆ ಮಾಡಿ ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ಕ್ರಮ ಕೈಗೊಂಡಿತ್ತು. ಆದರೆ ಯಾವುದಕ್ಕೂ ಜಗ್ಗದೆ ಶಾಸಕ ಯತ್ನಾಳ್ ಬಿಎಸ್ ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಮಾತನಾಡಿ, 2028 ರಲ್ಲಿ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂದು ಸ್ಪೋಟಕವಾದ ಹೇಳಿಕೆ ನೀಡಿದ್ದಾರೆ. ಮಂತ್ರಿ ಆಗಿ ಎಂದು ಆಗ ಬಸವರಾಜ ಬೊಮ್ಮಾಯಿ ಹೇಳಿದ್ದರು. ಆಗ ನಾನು ಅಭಿವೃದ್ಧಿಗೆ ಹಣ ಕೊಡಿ ಮಂತ್ರಿಗಿರಿ ಬೇಡ ಎಂದು ನಾನು ಅವರಿಗೆ ಹೇಳಿದ್ದೆ. ಕಾರಿನ ಮೇಲೆ ಕೆಂಪು ಗೂಟ ಹಾಕಿಕೊಂಡು ಓಡಾಡುವ ಶೋಕಿ ನನಗೆ ಇಲ್ಲ ಪಕ್ಷಕ್ಕೆ ವಾಪಸ್ ಸೇರಿಸಿಕೊಳ್ಳಿ ಎಂದು ನಾನು ಕೈ ಮುಗಿಯುವುದಿಲ್ಲ. ನಾನು ಬಿಜೆಪಿಗೆ ಸೇರಿಸಿಕೊಳ್ಳಿ ಎಂದು ಯಾರ ಕೈಕಾಲು ಕೂಡ ಹಿಡಿಯುವುದಿಲ್ಲ. ನನ್ನ ಪರವಾಗಿ ಸಾಕಷ್ಟು ಜನರು ನಿಂತಿದ್ದಾರೆ ಎಂದು ವಿಜಯಪುರದಲ್ಲಿ ಶಾಸಕ ಯತ್ನಾಳ್ ಹೇಳಿಕೆ ನೀಡಿದರು.

ಜನ ಸೇವೆ ಮಾಡದೆ, ಪ್ರಜೆಗಳ ಕಷ್ಟ ಕಾರ್ಪಣ್ಯಕ್ಕೆ ಧ್ವನಿಯಾಗದೆ, ತಮ್ಮ ರಾಜಕೀಯ ಅಭ್ಯುದಯಕ್ಕೆ ಹೊಂದಾಣಿಕೆ ರಾಜಕಾರಣ ಮಾಡುವವರ ವಿರುದ್ಧ ನನ್ನ ಹೋರಾಟ ಮುಂದುವರೆಯುತ್ತದೆ. ಮಹಾಭಾರತದಲ್ಲಿ ಜಯಗಳಿಸಿದ್ದು ಕೃಷ್ಣಾರ್ಜುನರೆ ಹೊರತು ಶಕುನಿ ಹಾಗೂ ಧೃತರಾಷ್ಟ್ರರಲ್ಲ ಎಂದು ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಹೇಳಿದರು.
ರಾಜ್ಯದಲ್ಲಿ ಹೊಂದಾಣಿಕೆ ರಾಜಕಾರಣದ ವಿರುದ್ಧ ನಮ್ಮೆಲ್ಲರ ಹೋರಾಟ ಆರಂಭವಾಗಲಿದೆ. ಅಲ್ಲದೆ ರಾಮ ರಾಜ್ಯ ಸ್ಥಾಪನೆ, ಉತ್ತರ ಕರ್ನಾಟಕದ ಅಭಿವೃದ್ಧಿ, ನೀರಾವರಿ, ಗೋ ರಕ್ಷಣೆ, ಕನ್ನಡ ಮಾಧ್ಯಮ ಪರೀಕ್ಷಾರ್ಥಿಗಳಿಗೆ ಆಗುತ್ತಿರುವ ಅನ್ಯಾಯ, ಬಾಣಂತಿಯರ ಸಾವು, ಲವ್ ಜಿಹಾದ್, ವಕ್ಫ್ ವಿರುದ್ಧ ನನ್ನ ಹೋರಾಟವನ್ನು ತೀಕ್ಷ್ಣಗೊಳಿಸಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಪ್ರಯತ್ನ ಮಾಡುತ್ತೇನೆ ಎಂದು ಯತ್ನಾಳ್ ಅವರು ಹೇಳಿದರು.
ಆರ್ಥಿಕವಾಗಿ ದಿವಾಳಿಯಾಗಿರುವ ರಾಜ್ಯಸರ್ಕಾರ ಕಸದ ಮೇಲೂ ಸೆಸ್ಸ್ ವಿಧಿಸುವಂತ ಪರಿಸ್ಥಿತಿಗೆ ಬಂದಿದೆ. ಹಾಲು, ವಿದ್ಯುತ್, ದಿನಬಳಕೆ ವಸ್ತುಗಳು ಗಗನಕ್ಕೇರಿವೆ. ಬೆಲೆ ಏರಿಕೆಯಿಂದ ಬಡವರು, ಮಧ್ಯಮ ವರ್ಗದವರು ಕಂಗಾಲಾಗಿದ್ದಾರೆ. ದುಂದುವೆಚ್ಚಗಳನ್ನು, ಬಿಟ್ಟಿ ಭಾಗ್ಯಗಳಿಗೆ ಕಡಿವಾಣ ಹಾಕಿ ಆರ್ಥಿಕ ಶಿಸ್ತನ್ನು ಕಾಪಾಡಬೇಕಾಗಿದ್ದ ಸರ್ಕಾರ ಘನ ತ್ಯಾಜ್ಯದ ಮೇಲೆ ಸೆಸ್ಸ್ ಹಾಕಿ ಹಣ ಹೊಂದಿಸುವ ಪರಿಸ್ಥಿತಿಗೆ ಬಂದಿದೆ. ಸ್ವಯಂಘೋಷಿತ ಆರ್ಥಿಕ ತಜ್ಞ, ಅತಿ ಹೆಚ್ಚು ಬಜೆಟ್ ಕೊಟ್ಟ ಮುಖ್ಯ ಮಂತ್ರಿಗಳು ಪಾಲಿಸುತ್ತಿರುವ 'ಆರ್ಥಿಕ ಶಿಸ್ತು' ಇದು ಎಂದು ಹೇಳಿದರು.












Click it and Unblock the Notifications