'ರಾಮಮಂದಿರ ನಿರ್ಮಾಣಕ್ಕೆ ನಾನು 10 ಲಕ್ಷ ಕೊಟ್ಟಿದ್ದೇನೆ, ಆದರೂ ನನ್ನನ್ನು ಕರೆದಿಲ್ಲ'- ಲಕ್ಷ್ಮಣ ಸವದಿ
ಅಥಣಿ ಜನವರಿ 2: ರಾಮಮಂದಿರ ನಿರ್ಮಾಣಕ್ಕೆ ನಾನು 10 ಲಕ್ಷ ಹಣ ಕೊಟ್ಟಿದ್ದೇನೆ, ಆದರೂ ನನ್ನನ್ನು ಕರೆದಿಲ್ಲ ಎಂದು ಶಾಸಕ ಲಕ್ಷ್ಮಣ ಸವದಿ ಬೇಸರ ವ್ಯಕ್ತಪಡಿಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅಥಣಿ ಶಾಸಕ ಲಕ್ಷ್ಮಣ ಸವದಿ ಅವರು ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಆಹ್ವಾನಿಸದೇ ಇದ್ದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ''ರಾಮಮಂದಿರ ನಿರ್ಮಾಣ ಮಾಡುವಾಗ ಎಲ್ಲರೂ ನೆನಪಾದರು. ಸ್ಥಳೀಯ ಆರ್ಎಸ್‌ಎಸ್ ಮುಖಂಡರು ಬಂದು ನನ್ನ ಬಳಿ ಹಣ ತೆಗೆದುಕೊಂಡು ಹೋದರು. ನಾನು ರಾಮಮಂದಿರ ನಿರ್ಮಾಣಕ್ಕೆ 10 ಲಕ್ಷ ಹಣ ಕೊಟ್ಟಿದ್ದೇನೆ. ಮಂದಿರ ನಿರ್ಮಿಸಿದ ಮೇಲೆ ಯಾರೂ ನೆನಪಿಗೆ ಬರಲಿಲ್ಲ'' ಎಂದು ಬಿಜೆಪಿಗೆ ಕುಟುಕಿದ್ದಾರೆ.

''ಇದುವರೆಗೆ ನನಗೆ ಜನವರಿ 22ರಂದು ಉದ್ಘಾಟನೆ ಇದೆ ಎನ್ನುವ ಮಾತೇ ಹೇಳಿಲ್ಲ. ನಮ್ಮನ್ನು ಯಾವುದಕ್ಕೂ ಆಹ್ವಾನ ನೀಡಿಲ್ಲ'' ಎಂದು ರಾಮ ಮಂದಿರ ಉದ್ಘಾಟನೆಗೆ ಆಹ್ವಾನ ನೀಡದ್ದಕ್ಕೆ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಬೇಸರ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಅವರಿಗೂ ಇಲ್ಲ ಆಹ್ವಾನ
ರಾಮಮಂದಿರ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ಅವರಿಗೂ ಆಹ್ವಾನಿಸಲಾಗಿಲ್ಲ. ಈ ಬಗ್ಗೆ ಮಾತನಾಡಿದ ಅವರು, ' ರಾಮಮಂದಿರ ಉದ್ಘಾಟನೆಗೆ ಯಾರಿಗೆ ಆಹ್ವಾನ ಕೊಟ್ಟಿದ್ದಾರೆ, ಯಾರಿಗೆ ಬಿಟ್ಟಿದ್ದಾರೆಂದು ನನಗೆ ಗೊತ್ತಿಲ್ಲ. ಯಾರಿಗೆ ಕೊಟ್ಟಿದ್ದಾರೋ ಅವರು ಹೋಗಲಿ, ಯಾರಿಗೆ ಬಿಡುತ್ತಾರೋ ಬಿಡಲಿ. ಯಾರಿಗೆ ಆಹ್ವಾನ ಕೊಡುತ್ತಾರೆಂದು ಅವರಿಗೆ ಸೇರಿದ್ದು ಎಂದು ಕೊಪ್ಪಳದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಸಿದ್ದರಾಮಯ್ಯನೇ ರಾಮ, ಮತ್ತೆಯಾಕೆ ರಾಮನ ಪೂಜಿಸಬೇಕು?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಶ್ರೀರಾಮ, ಮತ್ತೆಯ್ಯಾಕೆ ಆ ರಾಮನಿಗೆ ಹೋಗಿ ಶ್ರೀರಾಮನನ್ನು ಪೂಜಿಸಬೇಕು ಎಂದು ಮಾಜಿ ಸಚಿವ ಹೆಚ್ ಆಂಜನೇಯ ಹೇಳಿದ್ದರು.

ಚಿತ್ರದುರ್ಗ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು " ರಾಮಮಂದಿರ ಉದ್ಘಾಟನೆಗೆ ಸಿಎಂ ಸಿದ್ಧರಾಮಯ್ಯಗೆ ಆಹ್ವಾನವಿಲ್ಲದ ವಿಚಾರಕ್ಕೆ ಉತ್ತರಿಸಿದ ಅವರು ರಾಮಮಂದಿರ ಉದ್ಘಾಟನೆಗೆ ಕರೆಯದಿದ್ದದ್ದೇ ಒಳ್ಳೆಯದಾಯಿತು. ಸ್ವತಃ ಸಿದ್ಧರಾಮಯ್ಯ ಅವರೇ ರಾಮ, ಆ ರಾಮಗೇಕೆ ಹೋಗಿ ಪೂಜಿಸಬೇಕು. ಸಿದ್ಧರಾಮನಹುಂಡಿಯಲ್ಲಿ ರಾಮನ ದೇವಸ್ಥಾನ ಇದೆ, ಪೂಜಿಸುತ್ತಾರೆ. ಅಯೋಧ್ಯೆಯಲ್ಲಿರುವುದು ಬಿಜೆಪಿ ರಾಮ ಅದು ಬಿಜೆಪಿ ಅವರನ್ನು ಕರೆಸಿಕೊಂಡು ಭಜನೆ ಮಾಡುತ್ತಾರೆ'' ಎಂದು ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ಬಗ್ಗೆ ವ್ಯಂಗ್ಯವಾಡಿದ್ದಾರೆ.
ನಮ್ಮ ರಾಮ ಎಲ್ಲಾ ಕಡೆಗೂ ಇದ್ದಾನೆ, ನಾನು ಆಂಜನೇಯ ನಾವೆಲ್ಲಾ ಶ್ರೀರಾಮನ ಭಕ್ತರು, ನಮ್ಮ ಸಮುದಾಯದವರು ರಾಮ, ಆಂಜನೇಯ, ಹನುಮಂತ ಹೆಸರಿಟ್ಟು ಕೊಳ್ಳುತ್ತಾರೆ. ರಾಮ, ಆಂಜನೇಯ ನಮ್ಮ ವರ್ಗಕ್ಕೆ ಸೇರಿದವರು ಬಿಜೆಪಿ ಅವರದ್ದು ಧರ್ಮಗಳನ್ನು ಒಡೆದಾಳುವ ನೀತಿ ಎಂದರು.
ಒಂದು ಧರ್ಮದ ವಿರುದ್ಧ ಟೀಕಿಸಿ ಮತ ಬ್ಯಾಂಕ್ ಸೃಷ್ಠಿಯ ಭ್ರಮೆ ಬಿಜೆಪಿಗಿದೆ. ಬಿಜೆಪಿ ಆಡಳಿತದಲ್ಲಿ ಯಾರಿಗೆ ಅನುಕೂಲ ಆಗಿದೆ ? ಎಂದು ಪ್ರಶ್ನಿಸಿದರು. ಹಿಂದೂ ಯುವಕರಿಗೆ ಬಿಜೆಪಿ ಆಡಳಿತದಿಂದ ಅನುಕೂಲ ಆಗಿದೆಯೆ ?. ಎಂದು ಮತ್ತೊಮ್ಮೆ ಪ್ರಶ್ನೆ ಹಾಕಿದರು. ನಾವೆಲ್ಲಾ ಹಿಂದೂಗಳೇ, ಹಿಂದೂ, ಹಿಂದೂ ಧರ್ಮವನ್ನ ಬಿಜೆಪಿ ಕೊಂಡುಕೊಂಡಿಲ್ಲ.
ಧರ್ಮದಲ್ಲಿನ ಮೇಲು ಕೀಳು, ಶೋಷಣೆಗೆ ಪರಿಹಾರ ನೀಡಿದ್ದಾರೆಯೇ?ಮಂದಿರ ನಿರ್ಮಾಣ ಸಾಕು, ಮನೆ-ಮನ ಕಟ್ಟುವ ಕೆಲಸ ಆಗಬೇಕು. ದೇಶದ ಜನ ನಾಯಿ ನರಿ ವಾಸಿಸಲು ಯೋಗ್ಯವಲ್ಲದ ಸ್ಥಳದಲ್ಲಿ ವಾಸವಾಗಿದ್ದಾರೆ. ಅಂಥವರ ಕಣ್ಣಿರೊರೆಸಿ ಸೂರುಕೊಟ್ಟು ರಕ್ಷಣೆ ಮಾಡುವ ಕೆಲಸವಾಗಬೇಕಿದೆ.ಸೂರಿಲ್ಲದವರಿಗೆ ಮನೆ ಕಟ್ಟಿಸಿ ರಾಮಮಂದಿರ ಅಂತ ಹೆಸರಿಡಿ ಆಗ ನಿಜವಾದ ರಾಮ ಬಂದು ಆಶೀರ್ವದಿಸುತ್ತಾನೆ. ಓಟಿನ ರಾಮ ಅಲ್ಲ, ಓಟಿಗಾಗಿ ಬಿಜೆಪಿ ರಾಮನ ಮಾಡುವುದು ಬೇಡ ಎಂದು ಮಾಜಿ ಸಚಿವ ಹೆಚ್ ಆಂಜನೇಯ ತಿಳಿಸಿದರು.












Click it and Unblock the Notifications