ಸಂಪುಟ ಸರ್ಕಸ್; ಮಂತ್ರಿ ಆಗಿ ಇರೋತ್ತೇನೋ ಇಲ್ಲವೋ ಗೊತ್ತಿಲ್ಲ: ಜಮೀರ್ ಅಹ್ಮದ್ ಖಾನ್
ಬೆಂಗಳೂರು, ಜುಲೈ 30: ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ರಚನೆಯಾದ ದಿನದಿಂದಲೂ ಕೈ ಪಾಳಯದಲ್ಲಿ ಸಚಿವ ಸ್ಥಾನ ಕೈ ತಪ್ಪಿದವರಿಂದ ಬಹಿರಂಗವಾಗಿಯೇ ಅಸಮಾಧಾನಗಳು ಕೇಳಿಬರುತ್ತಿವೆ. ಲೋಕಸಭಾ ಚುನಾವಣೆ ಬಳಿಕ ಸಚಿವ ಸಂಪುಟ ಪುನರ್ ರಚನೆ ಕುರಿತು ಕಾಂಗ್ರೆಸ್ ಪಾಳಯದಲ್ಲಿ ಚರ್ಚೆ ನಡೆಯುತ್ತಿದೆ.
ಸಚಿವ ಸಂಪುಟ ಪುನರ್ ರಚನೆ ಕುರಿತು ಚರ್ಚೆ ನಡೆಯುತ್ತಿರುವ ಹೊತ್ತಲ್ಲೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಪಕ್ಷದ ಹೈಕಮಾಂಡ್ ಭೇಟಿಗೆ ದೆಹಲಿಗೆ ಮುಂದಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಸಚಿವ ಜಮೀರ್ ಅಹ್ಮದ್ ಖಾನ್ ಅವರ ಹೇಳಿಕೆ ಹಲವು ಪ್ರಶ್ನೆಗಳು ಹುಟ್ಟುವಂತೆ ಮಾಡಿದೆ.

ಮುಂದೆ ನಾನು ಮಂತ್ರಿ ಆಗಿಯೇ ಇರ್ತೀನೋ ಗೊತ್ತಿಲ್ಲ. ಜೀವಂತವಾಗಿ ಇರುತ್ತೇನೋ ಇಲ್ಲವೋ ಗೊತ್ತಿಲ್ಲ. ದೇವರು ಹಣೆಬರಹ ಬರೆದಿರುತ್ತಾರೆ. ಈಗ ನನ್ನನ್ನ ಅಲ್ಪಸಂಖ್ಯಾತ ಸಚಿವರಾಗಿ ಮಾಡಿದ್ದಾರೆ. ಮುಂದಿನ ನಾಲ್ಕು ವರ್ಷ ನಮ್ಮ ಸರ್ಕಾರ ಇರುತ್ತದೆ. ನಾನೇ ಅಲ್ಪಸಂಖ್ಯಾತ ಮಂತ್ರಿ ಆಗಿ ಇರುತ್ತೇನೆ ಎನ್ನುವ ವಿಶ್ವಾಸ ಇದೆ ಎಂದು ಮಾರ್ಮಿಕವಾಗಿ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಇರುವುದನ್ನು ಸಹಿಸಲು ಸಾಧ್ಯವಾಗದೆ ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಸಚಿವ ಜಮೀರ್ ಅಹ್ಮದ್ ಖಾನ್ ವಾಗ್ದಾಳಿ ನಡೆಸಿದ್ದು, 'ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರೆ ಯಾವತ್ತೂ ಸಿಎಂ ಆಗುವ ಅವಕಾಶ ತಮಗೆ ಸಿಗಲ್ಲ ಎನ್ನುವುದು ಬಿಜೆಪಿಗೂ, ಕುಮಾರಸ್ವಾಮಿಗೂ ಗೊತ್ತು. ಅದಕ್ಕಾಗಿ ಇಲ್ಲದ ವಿಚಾರವನ್ನು ಕೆಣಕುತ್ತಿದ್ದಾರೆ ಎಂದು ಹೇಳಿದರು.
ಇನ್ನೂ ಮುಡಾ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಮುಡಾ ವಿಚಾರದಲ್ಲಿ ಮುಖ್ಯಮಂತ್ರಿಯವರ ಪಾತ್ರ ಏನಿಲ್ಲ. ಜಮೀನಿನ ಬದಲಿಗೆ ಪರ್ಯಾಯ ನಿವೇಶನಗಳನ್ನು ಕೊಟ್ಟಿರುವುದು ಬಿಜೆಪಿ ಸರ್ಕಾರದ ಅವಧಿಯಲ್ಲಿ. ಇದರಲ್ಲಿ ಸಿದ್ದರಾಮಯ್ಯ ಏನು ತಪ್ಪು ಮಾಡಿದ್ದಾರೆ? ಈಗಲೂ ಅವರ ಮೇಲೆ ಕಪ್ಪುಚುಕ್ಕೆ ಇಲ್ಲ. ಯಾಕೆ ರಾಜೀನಾಮೆ ಕೊಡುತ್ತಾರೆ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಪ್ರಶ್ನಿಸಿದರು.
ಕಾಂಗ್ರೆಸ್ ವಿರುದ್ಧ ಮಾತನಾಡಲು ಬಿಜೆಪಿಯವರಿಗೆ ಬೇರೆ ವಿಷಯಗಳಿಲ್ಲ. ಆದ್ದರಿಂದ ಮುಡಾ ವಿಚಾರದ ಹಿಂದೆ ಬಿದ್ದಿದ್ದಾರೆ. ಅದಕ್ಕೆ ಕುಮಾರಸ್ವಾಮಿ ಬೆನ್ನೆಲುಬಾಗಿ ನಿಂತಿದ್ದಾರೆ. ಈ ಪ್ರಕರಣದಲ್ಲಿ ತಮ್ಮ ಯಾವುದೇ ಪಾತ್ರವಿಲ್ಲ ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದರು.












Click it and Unblock the Notifications