ಜೆಡಿಎಸ್ ಪಕ್ಷ ನಾನು ಬಿಡ್ಲಿಲ್ಲ, ಅವರೇ ಹೊರಗೆ ಹಾಕಿದ್ರು ಎಂದ ಎಟಿ ರಾಮಸ್ವಾಮಿ ಹೇಳಿಕೆಗೆ ಕುಮಾರಸ್ವಾಮಿ ಹೇಳಿದ್ದೇನು?
ಬೆಂಗಳೂರು, ಮಾರ್ಚ್ 31: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಜೆಡಿಎಸ್ ಈಗಾಗಲೇ ಮೊದಲ ಪಟ್ಟಿಯನ್ನ ಬಿಡುಗಡೆ ಮಾಡಿದ್ದು, ಸಾಲು ಸಾಲು ಜೆಡಿಎಸ್ ಹಿರಿಯ ನಾಯಕರು ಪಕ್ಷದಿಂದ ಹೊರಹೋಗುತ್ತಿದ್ದಾರೆ. ಇನ್ನೂ ನಿರೀಕ್ಷೆಯಂತೆ ಅರಕಲಗೂಡು ಶಾಸಕ ಎಟಿ ರಾಮಸ್ವಾಮಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಈ ಕುರಿತು ಮಾತನಾಡಿ ಅವರು, ಜೆಡಿಎಸ್ ಪಕ್ಷ ನಾನು ಬಿಡಲಿಲ್ಲ. ಅವರೇ ಹೊರೆಗೆ ಹಾಕಿದ್ರು. ನಾನು ಯಾವತ್ತು ಜೆಡಿಎಸ್ ಪಕ್ಷ ಬಿಡ್ತೀನಿ ಅಂತ ಹೇಳಿಲ್ಲ. ಎಲ್ಲಾ ಪಕ್ಷದಲ್ಲಿ ಲೋಪದೋಷ ಇರುತ್ತವೆ. ನಾನು ಬಲಿಪಶುವಾದೆ. ಹಣದ ಮುಂದೆ ಬಲಿಪಶು ಆಗಿದ್ದೇನೆ. ಅಕ್ರಮವನ್ನು ಎತ್ತಿ ಹಿಡಿದಿದ್ದೇ ನನಗೆ ಮಾರಕವಾಗಿದೆ. ಅದನ್ನು ನಾನು ಸಂತೋಷವಾಗಿ ಸ್ವೀಕಾರ ಮಾಡುತ್ತೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಾನು ಯಾವತ್ತೂ ವೈಯಕ್ತಿಕ ಲಾಭಕ್ಕೆ ಕೆಲಸ ಮಾಡಿಲ್ಲ. ಜನತ ಹಿತಾಸಕ್ತಿ ಕಾಪಾಡಿದ ತೃಪ್ತಿ ನನಗೆ ಇದೆ. ತಪ್ಪನ್ನು ತಪ್ಪು, ಸರಿಯನ್ನು ಸರಿ ಅಂತ ಹೇಳಿದ್ದೇನೆ. ವಿರೋಧಗಳು ಕೂಡಾ ನನ್ನ ಭಾವನೆಗೆ ಸಹಕಾರ ಕೊಟ್ಟಿವೆ. ನನ್ನ ಇವತ್ತಿನ ವಿರೋಧಿಗಳು ಉತ್ತಮ ಆಶಯದೊಂದಿಗೆ ಒಳ್ಳೆಯದು ಮಾಡಲಿ. ಕಾಲಾಯ ತಸ್ಮೈ ನಮಃ. ಜನರಿಗಾಗಿ ಮತ್ತೆ ಚುನಾವಣೆಗೆ ನಿಲ್ಲಬೇಕು ಎಂಬ ಅಪೇಕ್ಷೆ ಇದೆ. ಅವಕಾಶ ಸಿಕ್ಕರೆ ನಿಲ್ಲುತ್ತೇನೆ. ಕಾಂಗ್ರೆಸ್ ಸೇರ್ಪಡೆ ಆಗೋ ಚರ್ಚೆ ಆಗಿದೆ. ಆದರೆ ಇನ್ನೂ ನಿರ್ಧಾರ ಆಗಿಲ್ಲ. ಆದಷ್ಟು ಬೇಗ ಮುಂದಿನ ತೀರ್ಮಾನ ತಿಳಿಸುತ್ತೇನೆ ಎಂದು ಹೇಳಿದ್ದಾರೆ.
ಇನ್ನೂ ಎಟಿ ರಾಮಸ್ವಾಮಿ ಆರೋಪದ ಕುರಿತು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮಾತನಾಡಿ, ಪಕ್ಷ ಬಿಟ್ಟ ಎ.ಟಿ.ರಾಮಸ್ವಾಮಿ ಅವರು ನನ್ನ ಮೇಲೆ ಆರೋಪ ಮಾಡುವುದಕ್ಕೆ ಹಾಸನದ ವಿಚಾರದಲ್ಲಿ ನಾನು ಯಾವುದೇ ನಿರ್ಣಯ ಮಾಡಿಲ್ಲ. ಎರಡು ಮೂರು ವರ್ಷದಲ್ಲಿ ಏನೆಲ್ಲ ನಡೆದಿದೆ ಎಂದು ಸೂಕ್ಷ್ಮವಾಗಿ ನೋಡಿದ್ದೇವೆ. ಇವತ್ತಿನ ಘಟನೆಗೆ ಏನಾದರೂ ಕಾರಣ ನೀಡಬೇಕಲ್ಲ, ಅದಕ್ಕೆ ಅವರು ಹಾಗೆ ಹೇಳಿದ್ದಾರೆ. ನಾನು ಅದಕ್ಕೆ ಸಮಜಾಯಿಷಿ ಕೊಡೋಕೆ ಹೋಗೊದಿಲ್ಲ ಎಂದು ಹೇಳಿದರು.
ಚನ್ನಪಟ್ಟಣ ಬಿಟ್ಟರೆ ಅನ್ಯ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಪುರುಚ್ಚರಿಸಿದ ಕುಮಾರಸ್ವಾಮಿ ಅವರು, ಅಲ್ಲಿ ಯಾವ ಪಕ್ಷದಿಂದ ಯಾರು ಅಭ್ಯರ್ಥಿ ಆಗುತ್ತಾರೆ ಎಂದು ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಅದು ಮುಖ್ಯ ಅಲ್ಲ ನನಗೆ ಎಂದರು.

ನಾನು ಈಗಾಗಲೇ ಚನ್ನಪಟ್ಟಣದಲ್ಲಿ ನಿಲ್ಲಬೇಕು ಎಂದು ಪಕ್ಷ, ಕಾರ್ಯಕರ್ತರು ತೀರ್ಮಾನ ಮಾಡಿದ್ದಾರೆ. ಬೇರೆ ಕ್ಷೇತ್ರದಲ್ಲಿ ಹೋಗಿ ಅರ್ಜಿ ಹಾಕಿಕೊಳ್ಳುವ ಪ್ರಶ್ನೆ ಇಲ್ಲ. ಚನ್ನಪಟ್ಟಣ ಹೊರತುಪಡಿಸಿ ಬೇರೆ ಕ್ಷೇತ್ರದಲ್ಲಿ ನಿಲ್ಲುವ ಮಾತಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ವರುಣಾ ಕ್ಷೇತ್ರದಿಂದ ವಿಜಯೇಂದ್ರ ಸ್ಪರ್ಧೆಗೆ ಬಿಎಸ್ ಯಡಿಯೂರಪ್ಪ ಅವರ ನಕಾರ ಹಿನ್ನೆಲೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಅದು ಅವರು ಮಾಡಿಕೊಂಡಿರುವ ತೀರ್ಮಾನ. ನಮ್ಮ ಅಭ್ಯರ್ಥಿ ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ. ಎಲ್ಲಾ ಕ್ಷೇತ್ರಗಳಿಗೆ ಹೋದಂತೆ ವರುಣಾಗೂ ಪ್ರಚಾರಕ್ಕೆ ಹೋಗ್ತೀನಿ.ವರುಣಾ ಕ್ಷೇತ್ರದಲ್ಲಿ ಯಾವ ರೀತಿ ತಂತ್ರಗಾರಿಕೆ, ಪ್ರಚಾರ ಮಾಡಬೇಕು ಎಂಬುದನ್ನ ಸ್ಥಳೀಯ ನಾಯಕರು ತೀರ್ಮಾನ ಮಾಡ್ತಾರೆ ಎಂದರು.
ಇನ್ನೂ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಅವರು ಜೆಡಿಎಸ್ ಸೇರ್ಪಡೆ ಆಗಿದ್ದಾರೆ. ಅವರ ಮನೆಗೆ ಅವರು ವಾಪಸ್ ಬಂದಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.












Click it and Unblock the Notifications