'ಪುಟ್ಟಣ್ಣಯ್ಯ ಸೋಪು ಬಳಸಿದ್ದರೆ ಹಾಲಿವುಡ್‌ನಲ್ಲಿ ಮಿಂಚುತ್ತಿದ್ದರು'
ಬೆಂಗಳೂರು, ಫೆ. 12 : ವಿಧಾನಮಂಡಲ ಅಧಿವೇಶನದ ಜಂಟಿ ಅಧಿವೇಶನದ ಎರಡು ದಿನಗಳ ಕಲಾಪ ಬಾಕಿ ಇದೆ. ಬುಧವಾರದ ಕಲಾಪದಲ್ಲಿ ಗಂಭೀರ ವಿಷಯಗಳ ಜೊತೆ ಕೆಲವು ಸ್ವಾರಸ್ಯಕರ ಚರ್ಚೆಗಳು ನಡೆದವು. ಅವುಗಳ ಸಂಕ್ಷಿಪ್ತ ಚಿತ್ರಣ ಇಲ್ಲಿದೆ ನೋಡಿ.
ಬ್ರಾಂದಿ ಬೇಕು, ಗಾಂಧಿ ಬೇಡ : ಸರ್ವೋದಯ ಪಕ್ಷದ ಶಾಸಕರಾದ ಕೆ.ಎಸ್.ಪುಟ್ಟಣ್ಣಯ್ಯ ಅವರು ಸದನದಲ್ಲಿ ಗಾಂಧಿ ಬಗ್ಗೆ ಬುಧವಾರ ವಿಷಯ ಪ್ರಸ್ತಾಪಿಸಿದರು. ಕಾಂಗ್ರೆಸ್ ಮತ್ತು ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳು ಗಾಂಧೀಜಿ ಫೋಟೊ ಹಾಕಿಕೊಳ್ಳುತ್ತವೆ. ಆದರೆ ಯಾವ ಪಕ್ಷಗಳು ಗಾಂಧಿ ತತ್ವ ಪಾಲನೆ ಮಾಡುತ್ತಿಲ್ಲ. ಗಾಂಧಿ ಬೇಡ, ಬ್ರಾಂದಿ ಬೇಕು ಎನ್ನುತ್ತಾರೆ ಎಂದು ಹೇಳಿದರು.

ಪುಟ್ಟಣ್ಣಯ್ಯ ಹಾಲಿವುಡ್‌ನಲ್ಲಿರುತ್ತಿದ್ದರು : ಶಾಸಕರಾದ ಕೆ.ಎಸ್.ಪುಟ್ಟಣ್ಣಯ್ಯ ಅವರು ಸೋಪು ಬಳಿಸಿದ್ದರೆ ಹಾಲಿವುಡ್‌ನಲ್ಲಿ ಮಿಂಚುತ್ತಿದ್ದರು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ವಿಧಾನಸಭೆಯಲ್ಲಿ ಹಾಸ್ಯ ಚಟಾಕಿ ಹಾರಿಸಿದರು.[ಬುಧವಾರದ ವಿಧಾನಸಭೆ ಕಲಾಪದಲ್ಲಿ ಏನೇನಾಯ್ತು?]
ಕೆ.ಎಸ್.ಪುಟ್ಟಣ್ಣಯ್ಯ ಅವರು ಎಚ್.ಕೆ.ಪಾಟೀಲರು 'ಗೌರವ ಯೋಜನೆ'ಯಡಿ ಶಾಂಪು ಕೊಡುತ್ತೇನೆ ಎಂದು ಹೇಳುತ್ತಿದ್ದಾರೆ. ನಾನು 45 ವರ್ಷದಿಂದ ಸೋಪು ಬಳಸಿಲ್ಲ. ನನ್ನ ಮುಖ ಚೆನ್ನಾಗಿಲ್ಲವೇ? ಎಂದು ಪ್ರಶ್ನಿಸಿದರು. ಆಗ ಉತ್ತರ ನೀಡಿದ ಸಚಿವರು, ಪುಟ್ಟಣ್ಣಯ್ಯ ಸೋಪು ಬಳಸಿದ್ದರೆ ಹಾಲಿವುಡ್‌ನಲ್ಲಿ ಮಿಂಚುತ್ತಿದ್ದರು ಎಂದರು. ['ಈಶ್ವರಪ್ಪ ಆರತಕ್ಷತೆ ಗುಂಗಿನಲ್ಲಿಯೇ ಇದ್ದಾರೆ']
5 ಗಂಟೆಗೆ ಬಾರ್ ಯಾಕೆ ಓಪನ್ : ಬೆಂಗಳೂರು ನಗರದಲ್ಲಿ ಬೆಳಗ್ಗೆ 5 ಗಂಟೆಗೆ ಮದ್ಯದಂಗಡಿಗಳು ಯಾಕೆ ತೆರೆಯಬೇಕು? ಎಂಬ ಬಗ್ಗೆ ಸದನದಲ್ಲಿ ಬುಧವಾರ ಚರ್ಚೆ ನಡೆಯಿತು. ಪಕ್ಷಭೇದ ಮರೆತು ಸದಸ್ಯರು ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ಅಖಂಡ ಶ್ರೀನಿವಾಸಮೂರ್ತಿ ಈ ವಿಷಯವನ್ನು ಪ್ರಸ್ತಾಪಿಸಿದರು. ಬೆಳಗ್ಗೆ 5 ಗಂಟೆಗೆ ಕೂಲಿಯವರು ಮದ್ಯದ ಅಂಗಡಿ ಮುಂದೆ ನಿಂತಿರುತ್ತಾರೆ. ಅಬಕಾರಿ ಇಲಾಖೆಯವರು ಈ ಸಮಯದಲ್ಲಿ ಎದ್ದಿರುವುದೇ ಇಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಸಿದ್ದರಾಮಯ್ಯ ಅವರಿಗೆ ಹಿತ ಶತ್ರುಗಳ ಕಾಟ : 'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪಕ್ಷದಲ್ಲಿ ಹಿತಶತ್ರುಗಳ ಕಾಟ ಹೆಚ್ಚಾಗಿದೆ' ಎಂದು ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದ ಮಾತು ಸದನದಲ್ಲಿ ವಾಗ್ವಾದಕ್ಕೆ ಕಾರಣವಾಯಿತು. ಬುಧವಾರದ ಕಲಾಪದ ವೇಳೆ 'ಸಿದ್ದರಾಮಯ್ಯನವರು ಇನ್ನೂ ಮೂರು ವರ್ಷ ಮುಖ್ಯಮಂತ್ರಿ ಆಗಿ ಮುಂದುವರಿಯದಂತೆ ಕಾಂಗ್ರೆಸ್ ಶಾಸಕರೇ ಹುಳಿ ಹಿಂಡುತ್ತಿದ್ದಾರೆ' ಎಂದು ಈಶ್ವರಪ್ಪ ಹೇಳಿದರು.












Click it and Unblock the Notifications