ಬೆಳಗಾವಿ ಗಡಿ ಸಮಸ್ಯೆ: ಪ್ರಾಧಿಕಾರದ ಅಧ್ಯಕ್ಷರ ನೇಮಿಸಿ, ರಾಜ್ಯೋತ್ಸವಕ್ಕೆ ಹೆಚ್ಚಿನ ಅನುದಾನ ನೀಡಿ: ಹುಕ್ಕೇರಿ ಶ್ರೀಗಳು
ಬೆಳಗಾವಿ, ಅಕ್ಟೋಬರ್ 22: ಮೈಸೂರು ದಸರಾ ಉತ್ಸವದಂತೆ ಉತ್ತರ ಕರ್ನಾಟಕದ ಆಚರಣೆಗಳಿಗೂ ಹೆಚ್ಚಿನ ಅನುದಾನ ನೀಡಬೇಕು. ಜತೆಗೆ ಸರ್ಕಾರ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ನೇಮಕ ಮಾಡಬೇಕು. ಗಡಿ ಸಮಸ್ಯೆಗೆ ಪರಿಹಾರಕ್ಕೆ ತಕ್ಷಣವೇ ಕಾರ್ಯಪ್ರವೃತ್ತರಾಗಬೇಕು ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಸ್ವಾಮೀಜಿ ಒತ್ತಾಯಿಸಿದ್ದಾರೆ.
ಚಿಕ್ಕೋಡಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಬೆಳಗಾವಿ ಗಡಿ ಸಮಸ್ಯೆ ಕುರಿತು ಸರ್ಕಾರದ ನಿರ್ಲಕ್ಷ್ಯಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಗಡಿ ರಕ್ಷಣೆಗಾಗಿ ಗಡಿ ಪ್ರಾಧಿಕಾರ ಅಧ್ಯಕ್ಷರ ನೇಮಿಸಬೇಕು. ಇನ್ನೂ ಉತ್ತರ ಕರ್ನಾಟಕದ ಉತ್ಸವಗಳಿಗೆ ಹೆಚ್ಚಿನ ಅನುದಾನ ದೊರೆಯುತ್ತಿಲ್ಲ. ಮೈಸೂರಿನಲ್ಲಿ ದಸರಾ ಆಚರಣೆ ಅದ್ಭುತವಾಗಿ ನಡೆಯಲಿದೆ. ಇದಕ್ಕೆ ನಮಗೂ ಹೆಮ್ಮೆ ಇದೆ. ಬೆಳಗಾವಿಯಲ್ಲಿ ನಡೆಯುವ ರಾಜ್ಯೋತ್ಸವಕ್ಕೆ ಹೆಚ್ಚು ಅನುದಾನ ನೀಡಿದರೆ, ಕನ್ನಡಿಗರಲ್ಲಿ ಮತ್ತಷ್ಟು ಉತ್ಸಾಹ ಹೆಚ್ಚಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕನ್ನಡ ರಾಜ್ಯೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಕನ್ನಡ ರಾಜ್ಯೋತ್ಸವ ಹೊಸ್ತಿಲಲ್ಲೇ ಮಹಾರಾಷ್ಟ್ರ ಸರ್ಕಾರ ಮತ್ತೆ ಕ್ಯಾತೆ ತೆಗೆಯುತ್ತಿದೆ. ಬೆಳಗಾವಿಯಲ್ಲಿ ರಾಜಕೀಯ ಅಸ್ತಿತ್ವ ಕಳೆದುಕೊಂಡು ಸೋತು ಸುಣ್ಣವಾಗಿದ್ದ MES ಪುಂಡರಿಗೆ ಬಲ ತುಂಬುವ ಕಾರ್ಯದಲ್ಲಿ ಮಹಾರಾಷ್ಟ್ರ ಸಜ್ಜಾಗಿದೆ.
ಸರ್ಕಾರ ಕೂಡಲೇ ಪರಿಹಾರ ಕ್ರಮ ಕೈಗೊಳ್ಳಿ
ರಾಜ್ಯದ ಗಡಿ ಭಾಗಗಳು ಸಭದ್ರವಾಗಿರಬೇಕು. ಈ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರ ಗಟ್ಟಿಯಾಗಿ ನಿರ್ಧರಿಸಿದೆ. ಸರ್ಕಾರ ಬೇಗ ಎಚ್ಚೆತ್ತುಕೊಳ್ಳಬೇಕು. ಪದೇ ಪದೆ ಈ ಸಮಸ್ಯೆ ಸೃಷ್ಟಿಯಾಗುತ್ತಿದೆ. ರಾಜ್ಯದ ಗಡಿ ಸಮಸ್ಯೆ ಗಂಭೀರವಾಗಿ ಪರಗಣಿಸಿ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಮಹಾರಾಷ್ಟ್ರ ಗಡಿಯಲ್ಲಿ ಆರೋಗ್ಯ ಯೋಜನೆ ಸೇರಿದಂತೆ ಸಿಎಂ ಪರಿಹಾರ ನಿಧಿ, ವೈದ್ಯಕೀಯ ಕಾಲೇಜುಗಳಲ್ಲಿ ಗಡಿಭಾಗದ ಮರಾಠಿ ಭಾಷಿಕ ವಿದ್ಯಾರ್ಥಿಗಳಿಗೆ ಮೀಸಲಾತಿ ಸೇರಿದಂತೆ ಯೋಜನೆಗಳನ್ನು ಮಹಾರಾಷ್ಟ್ರ ಘೋಷಣೆ ಆಗಿದೆ. ಚಂದಗಡ್ದಲ್ಲಿ ಗಡಿಭಾಗದ ಮರಾಠಿ ಭಾಷಿಕರಿಗೆ ಕಚೇರಿ ಸ್ಥಾಪಿಸಲು ಮುಂದಾಗಿದೆ. ಇದೆಲ್ಲ ಬೆಳವಣಿಗೆಗಳಿಗೂ ಗಡಿ ಭಾಗದಲ್ಲಿ ಮಹಾರಾಷ್ಟ್ರದಿಂದ ನಡೆಯುತ್ತಿದ್ದರೂ ರಾಜ್ಯ ಸರ್ಕಾರ ಸುಮ್ಮನಿರುವುದು ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದೆ.












Click it and Unblock the Notifications