ನೀರಿಗಾಗಿ ದೊಣ್ಣೆ, ಚಾಕುನಲ್ಲಿ ಕಿತ್ತಾಡಿದ ವೆಂಕಟೇನಹಳ್ಳಿ ಗ್ರಾಮಸ್ಥರು
ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ ಜಿಲ್ಲೆ), ಮಾರ್ಚ್ 6 : ಬೆಂಗಳೂರಿನ ಮಗ್ಗುಲಲ್ಲಿರುವ ಪುಟ್ಟ ಹಳ್ಳಿ ಇದು. ಊರಿನ ಜನರೆಲ್ಲ ಬೆರೆತು ಚೆನ್ನಾಗಿಯೇ ಇದ್ದರು. ಆದರೆ ಸೋಮವಾರ ರಾತ್ರಿ ಒಂದು ಕ್ಷುಲ್ಲಕ ಕಾರಣಕ್ಕೆ ನಡೆದ ಮಾತುಕತೆ ವಿಕೋಪಕ್ಕೆ ತಿರುಗಿದೆ. ಮಕ್ಕಳು, ಹೆಂಗಸರಿಂದ ಆರಂಭವಾದ ಗಲಾಟೆ ಚಾಕು ಇರಿಯುವ ತನಕ ತಲುಪಿ, ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವೆಂಕಟೇನಹಳ್ಳಿಯಲ್ಲಿ ಗ್ರಾಮದಲ್ಲಿ ಅಷ್ಟಕ್ಕೂ ಏನು ನಡೆಯಿತು? ಅಣ್ಣ- ತಮ್ಮಂದಿರಂತೆ ಒಂದಾಗಿದ್ದವರು ಹೊಡೆದಾಡಿದ್ದೇಕೆ ಅಂತಿರಾ? ಈ ವರದಿ ಓದಿ. ಅಂದಹಾಗೆ ಗಲಾಟೆಯಲ್ಲಿ ಗಂಭೀರವಾಗಿ ಗಾಯಗೊಂಡ ಗಾಯಾಳುಗಳು ಆಸ್ಪತ್ರೆಯಲ್ಲಿದ್ದಾರೆ

ಊರಿನ ರಸ್ತೆಯಲ್ಲಿ ದೊಣ್ಣೆ, ಇಟ್ಟಿಗೆಗಳು ಬಿದ್ದಿವೆ. ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಎರಡು ಗುಂಪುಗಳ ಮಧ್ಯೆ ನಡೆದ ಗಲಾಟೆ ಈ ಹಂತಕ್ಕೆ ತಲುಪಿದೆ. ವ್ಯಕ್ತಿಯೊಬ್ಬರಿಗೆ ಚಾಕುವಿನಿಂದ ಇರಿದಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗ್ರಾಮದಲ್ಲಿ ಪಂಚಾಯಿತಿಗೆ ಸೇರಿದ ಎರಡು ಬೋರ್ ವೆಲ್ ಗಳಿವೆ. ಆ ಪೈಕಿ ಒಂದು ಬೋರ್ ವೆಲ್ ಕೆಟ್ಟು ನಿಂತಿದೆ. ಕೆಟ್ಟಿದ್ದ ಬೋರ್ ವೆಲ್ ನಿಂದ ಊರಿನ ಬೀದಿಗಳಲ್ಲಿನ ನೀರಿನ ಟ್ಯಾಂಕರ್ ಗಳಿಗೆ ನೀರು ಬಿಡಲು ಸಾಧ್ಯವಾಗುತ್ತಿರಲಿಲ್ಲ. ಸರಿಯಿರುವ ಒಂದೇ ಬೋರ್ ವೆಲ್ ನಲ್ಲಿ ನೀರು ಬಿಟ್ಟಿದ್ದಾರೆ.

ಈ ವೇಳೆ ಕುಡಿಯುವ ನೀರು ಹಿಡಿಯಲು ಕೆಲ ಹೆಂಗಸರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಸೋಮವಾರ ನಡೆದ ಮಾತಿನ ಚಕಮಕಿ ಮಂಗಳವಾರ ಬೆಳಗ್ಗೆ ಸಹ ಮುಂದುವರಿದಿದೆ. ಇದು ವಿಕೋಪಕ್ಕೆ ತಿರುಗಿ, ಜಗಳದಲ್ಲಿ ಗಂಡಸರ ಪ್ರವೇಶವಾಗಿದೆ. ಗ್ರಾಮದ ಮುನಿಕೃಷ್ಣ ಎಂಬಾತನಿಗೆ ಚಾಕುವಿನಿಂದ ಅದೇ ಗ್ರಾಮದ ಚಂದ್ರು, ವೆಂಕಟಪತಿ ಎಂಬುವವರು ಸೇರಿ ಇರಿದಿದ್ದಾರೆ.
ಇನ್ನು ಮಂಜುನಾಥ್, ಮುನಿಕೃಷ್ಣಮ್ಮ ಹಾಗೂ ಮಧು ಎಂಬುವವರಿಗೆ ಗಂಭೀರವಾಗಿ ಗಾಯಗಳಾಗಿವೆ. ಆದರೆ ಹೊಡೆದವರು ಮಾತ್ರ ನಮ್ಮದು ತಪ್ಪೇ ಇಲ್ಲ ಅಂತಿದ್ದಾರೆ. ಒಟ್ಟಾರೆ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಮಾರಾಮಾರಿ ನಡೆದಿದೆ.












Click it and Unblock the Notifications