Karnataka Trains: ಬಾಗಲಕೋಟೆ, ಯಲಹಂಕದ ರೈಲುಗಳ ಸಂಚಾರ ರದ್ದು, 'ವಿಬಿ' ರೈಲು ಸಮಯ ಬದಲು
ಹುಬ್ಬಳ್ಳಿ, ಸೆಪ್ಟಂಬರ್ 24: ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ಕೂಡಗಿ ರೈಲ್ವೆ ಯಾರ್ಡ್ ಇಂಜಿನಿಯರಿಂಗ್ ಕಾಮಗಾರಿ ಕೈಗೊಂಡ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಿಂದ ಹೊರಡುವ ಕೆಲ ರೈಲುಗಳು ರದ್ದಾಗಿವೆ. ಕೆಲ ರೈಲುಗಳನ್ನು ನಿಯಂತ್ರಿಸಲಾಗುತ್ತಿದೆ. ಇದರೊಂದಿಗೆ ದಕ್ಷಿಣ ರೈಲ್ವೆಯ ಎರ್ನಾಕುಲಂ-ಯಲಹಂಕ ರೈಲು ರದ್ದುಗೊಳಿಸಲಾಗಿದೆ. ಇತ್ತ ಬೆಳಗಾವಿ ಮತ್ತು ಧಾರವಾಡದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ವೇಳಾಪಟ್ಟಿ ಪರಿಷ್ಕರಣೆ ಮಾಡಲಾಗಿದೆ.
ಯಲಹಂಕ-ಎರ್ನಾಕುಲಂ ಟ್ರೈ-ವೀಕ್ಲಿ ಸ್ಪೆಷಲ್ ರೈಲು ರದ್ದು
* ಎರ್ನಾಕುಲಂ-ಯಲಹಂಕ-ಎರ್ನಾಕುಲಂ ಸ್ಪೆಷಲ್ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 06101/06102) ವಾರದಲ್ಲಿ ಮೂರು ಟ್ರಿಪ್‌ಗಳನ್ನು ರದ್ದುಗೊಳಿಸಲಾಗಿದೆ. ಪ್ರಯಾಣಿಕರ ಕೊರತೆಯಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ದಕ್ಷಿಣ ರೈಲ್ವೆ ತಿಳಿಸಿದೆ.

* ಸೆಪ್ಟೆಂಬರ್ 25, 27 ಮತ್ತು 29 ರಂದು ಓಡಿಸಲು ನಿರ್ಧರಿಸಿದ್ದ ಎರ್ನಾಕುಲಂ-ಯಲಹಂಕ ಟ್ರೈ ವೀಕ್ಲಿ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 06101) ವಿಶೇಷ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ.
* ಯಲಹಂಕ-ಎರ್ನಾಕುಲಂ ಟ್ರೈ-ವೀಕ್ಲಿ ಎಕ್ಸ್‌ಪ್ರೆಸ್ ಸ್ಪೆಷಲ್ ರೈಲು (ಸಂಖ್ಯೆ 06102) ಸೆಪ್ಟೆಂಬರ್ 26, 28 ಮತ್ತು 30 ರಂದು ಸಂಚಾರ ರದ್ದುಗೊಳಿಸಲಾಗಿದೆ.
ವಂದೇ ಭಾರತ್ ಎಕ್ಸ್‌ಪ್ರೆಸ್‌ನ ವೇಳಾಪಟ್ಟಿ ಪರಿಷ್ಕರಣೆ
ಇತ್ತೀಚೆಗೆ ಕಾರ್ಯಾಚರಣೆ ಆರಂಭಿಸಿರುವ ಪುಣೆ-ಎಸ್ಎಸ್ಎಸ್ ಹುಬ್ಬಳ್ಳಿ ಟ್ರೈ-ವೀಕ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 06102) ವೇಳಾಪಟ್ಟಿ ಪರಿಷ್ಕರಿಸಲಾಗಿದೆ. ಬೆಳಗಾವಿ ಮತ್ತು ಧಾರವಾಡ ನಿಲ್ದಾಣಗಳಲ್ಲಿ ಅಕ್ಟೋಬರ್ 3 ರಿಂದ ಈ ಪರಿಷ್ಕೃತ ವೇಳಾಪಟ್ಟಿ ಜಾರಿಗೆ ಬರಲಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
* ವಂದೇ ಭಾರತ್ ರೈಲು ಬೆಳಗಾವಿಗೆ ರಾತ್ರಿ 8:35/8:40 ಗಂಟೆಯ ಆಗಮಿಸುವ ಬದಲಾಗಿ ರಾತ್ರಿ 8:15/8:20 ಗಂಟೆಗೆ ಆಗಮಿಸಿ/ನಿರ್ಗಮಿಸಲಿದೆ.
* ವಂದೇ ಭಾರತ್ ರೈಲು ಧಾರವಾಡ ನಿಲ್ದಾಣಕ್ಕೆ ರಾತ್ರಿ 10:20/10:22 ಗಂಟೆಯ ಬದಲು ರಾತ್ರಿ 10:13/10:15 ಗಂಟೆಗೆ ಆಗಮಿಸಿ/ನಿರ್ಗಮಿಸಲಿದೆ.
ಹುಬ್ಬಳ್ಳಿ ವಿಭಾಗದಲ್ಲಿ ರದ್ದಾದ ರೈಲುಗಳ ಪಟ್ಟಿ
* ಹುಬ್ಬಳ್ಳಿ- ವಿಜಯಪುರ ಪ್ಯಾಸೆಂಜರ್ ವಿಶೇಷ ರೈಲು (ಸಂಖ್ಯೆ 06919) ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 2 ಬಾಗಲಕೋಟೆವರೆಗೆ ಮಾತ್ರ ಸಂಚರಿಸಲಿದೆ. ಈ ರೈಲು ಬಾಗಲಕೋಟೆ-ವಿಜಯಪುರ ನಿಲ್ದಾಣಗಳ ಮಧ್ಯೆ ಸಂಚಾರ ರದ್ದುಗೊಂಡಿದೆ.
* ವಿಜಯಪುರ-ಎಸ್‌ಎಸ್‌ಎಸ್ ಹುಬ್ಬಳ್ಳಿ ಪ್ಯಾಸೆಂಜರ್ ವಿಶೇಷ ರೈಲು (ಸಂಖ್ಯೆ 06920) ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 2ರವರೆಗೆ ವಿಜಯಪುರದ ಬದಲು ಬಾಗಲಕೋಟೆ ನಿಲ್ದಾಣದಿಂದ ನಿಗದಿತ ಸಮಯದಲ್ಲಿ ಹೊರಡಲಿದೆ. ವಿಜಯಪುರ ಮತ್ತು ಬಾಗಲಕೋಟೆ ನಿಲ್ದಾಣಗಳ ಮಧ್ಯೆ ಸಂಚಾರ ರದ್ದಾಗಿದೆ.
* ಮಂಗಳೂರು ಸೆಂಟ್ರಲ್-ವಿಜಯಪುರ ಎಕ್ಸ್‌ಪ್ರೆಸ್ ವಿಶೇಷ ರೈಲು (ಸಂಖ್ಯೆ 07378) ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 1 ರವರೆಗೆ ಬಾಗಲಕೋಟೆ ವರೆಗೆ ಮಾತ್ರ ಸಂಚರಿಸಲಿದೆ. ಬಾಗಲಕೋಟೆ- ವಿಜಯಪುರ ನಿಲ್ದಾಣಗಳ ಮಧ್ಯೆ ಸಂಚರಿಸುವುದಿಲ್ಲ.
* ವಿಜಯಪುರ-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ವಿಶೇಷ ರೈಲು (ಸಂಖ್ಯೆ 07377) ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 2ರವರೆಗೆ ರೈಲು ವಿಜಯಪುರ ಬದಲಿಗೆ ಬಾಗಲಕೋಟೆ ನಿಲ್ದಾಣದಿಂದ ಸಂಚರಿಸುತ್ತದೆ. ವಿಜಯಪುರ ಮತ್ತು ಬಾಗಲಕೋಟೆ ನಿಲ್ದಾಣಗಳ ಮಧ್ಯದ ಸಂಚಾರ ರದ್ದಾಗಿದೆ.
* ಮೈಸೂರು- ಬಾಗಲಕೋಟೆ ಬಸವ ಎಕ್ಸ್ ಪ್ರೆಸ್ ರೈಲು (ರೈಲು ಸಂಖ್ಯೆ 17307) ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 1ರವರೆಗೆ ವಿಜಯಪುರವರೆಗೆ ಮಾತ್ರ ಸಂಚರಿಸಲಿದೆ. ಬಾಗಲಕೋಟೆವರೆಗೆ ರದ್ದುಗೊಳಿಸಲಾಗಿದೆ.
* ಬಾಗಲಕೋಟ-ಮೈಸೂರು ಬಸವ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 17308) ಸೆಪ್ಟೆಂಬರ್ 29ರಿಂದ ಅಕ್ಟೋಬರ್ 2ರವರೆಗೆ ಬಾಗಲಕೋಟೆ ನಿಲ್ದಾಣದ ಬದಲು ವಿಜಯಪುರ ನಿಲ್ದಾಣದಿಂದ ನಿಗದಿತ ಸಮಯಕ್ಕೆ ಹೊರಡಲಿದೆ. ಬಾಗಲಕೋಟೆ ಮತ್ತು ವಿಜಯಪುರ ನಿಲ್ದಾಣಗಳ ಮಧ್ಯೆ ಸಂಚರಿಸುವುದಿಲ್ಲ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications