ಹುಬ್ಬಳ್ಳಿಯಲ್ಲಿ ಮನೆ ಹಂಚಿಕೆ ಕಾರ್ಯಕ್ರಮ: 1.35 ಲಕ್ಷ ಮಂದಿಗೆ ರುಚಿಕರ ಊಟದ ವ್ಯವಸ್ಥೆ
ಹುಬ್ಬಳ್ಳಿ: ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿಯಿಂದ ಹುಬ್ಬಳ್ಳಿಯಲ್ಲಿ ಆಯೋಜಿಸಿರುವ ಮನೆ ಹಂಚಿಕೆಯ ಕಾರ್ಯಕ್ರಮವು ಸರಿಸುಮಾರು ಎರಡು ಲಕ್ಷಕ್ಕೂ ಅಧಿಕ ಜನಸ್ತೋಮ ಸಾಕ್ಷಿಯಾಗಿದ್ದು, ಕಾರ್ಯಕ್ರಮಕ್ಕೆ ಆಗಮಿಸಿದ ಸಾರ್ವಜನಿಕರಿಗೆ ಕಲ್ಪಿಸಲಾದ ಆಹಾರ ವ್ಯವಸ್ಥೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಭಾರೀ ಜನಸಂದಣಿ ನಡುವೆಯೂ ಬಂದವರಿಗೆ ರುಚಿಕರವಾದ, ಶುಚಿ ಹಾಗೂ ಶಿಸ್ತುಬದ್ಧ ಆಹಾರ ಉಣಬಡಿಸಲಾಯಿತು. ಇದನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಹಿನ್ನೆಲೆ 1.35 ಲಕ್ಷಕ್ಕೂ ಅಧಿಕ ಜನರು ಸಂತೃಪ್ತರಾದರು.
124 ಕೌಂಟರ್‌ಗಳಲ್ಲಿ ವಿತರಣೆ
ಕಾರ್ಯಕ್ರಮಕ್ಕೆ ಆಗಮಿಸಿದವರಿಗೆ ಬೆಳಿಗ್ಗೆಯಿಂದಲೇ ವ್ಯವಸ್ಥಿತವಾಗಿ ಉಪಹಾರ ಮತ್ತು ಮಧ್ಯಾಹ್ನದ ಊಟ ವಿತರಣೆ ಮಾಡಲು ಸಿದ್ಧತೆ ಕೈಗೊಳ್ಳಲಾಗಿತ್ತು. ಜನಸಂದಣಿ ಹೆಚ್ಚಿದ್ದರೂ ಯಾವುದೇ ಗೊಂದಲ ಉಂಟಾಗದಂತೆ ಆಹಾರ ವಿತರಣೆಗೆ ಒಟ್ಟು 124 ಕೌಂಟರ್‌ಗಳನ್ನು ಸ್ಥಾಪಿಸಲಾಗಿತ್ತು. ಬೆಳಗಿನ ಉಪಹಾರವಾಗಿ ಸುಮಾರು 30 ಸಾವಿರಕ್ಕೂ ಹೆಚ್ಚು ಜನರಿಗೆ ರುಚಿಕರವಾದ ಉಪ್ಪಿಟ್ಟು ವಿತರಣೆ ಮಾಡಲಾಯಿತು.

ನಂತರ ಮಧ್ಯಾಹ್ನದ ಊಟವಾಗಿ ಪಲಾವ್, ಮೊಸರನ್ನ, ಮೈಸೂರು ಪಾಕ್ ಹಾಗೂ ಸೇವರು ಸೇರಿದಂತೆ ಪೌಷ್ಟಿಕ ಮತ್ತು ರುಚಿಕರ ಆಹಾರವನ್ನು ಶಿಸ್ತುಬದ್ಧವಾಗಿ ವಿತರಿಸಲಾಯಿತು. ಒಟ್ಟು 1.50 ಲಕ್ಷಕ್ಕೂ ಹೆಚ್ಚು ಜನರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿದ್ದು, ಜೊತೆಗೆ ಸುಮಾರು 2 ಲಕ್ಷ ಜನರಿಗೆ ಕುಡಿಯುವ ನೀರಿನ ಬಾಟಲ್ ವ್ಯವಸ್ಥೆ ಮಾಡಲಾಗಿತ್ತು.
600ಕ್ಕೂ ಹೆಚ್ಚು ಸಿಬ್ಬಂದಿ
ಆಹಾರ ಸಿದ್ಧತೆಗಾಗಿ 300 ಜನ ಸಿಬ್ಬಂದಿ, ವಿತರಣೆಗೆ 200 ಸಿಬ್ಬಂದಿ ಹಾಗೂ ಸ್ವಚ್ಛತಾ ಕಾರ್ಯಕ್ಕಾಗಿ 150 ಕಾರ್ಮಿಕರನ್ನು ನಿಯೋಜಿಸಲಾಗಿತ್ತು. ಊಟದ ನಂತರ ಕೈ ತೊಳೆಯಲು ಅನುಕೂಲವಾಗುವಂತೆ 20 ನೀರಿನ ಟ್ಯಾಂಕರ್‌ಗಳನ್ನು ಸ್ಥಳದಲ್ಲೇ ನಿಯೋಜಿಸಿ, ಸಾರ್ವಜನಿಕರಿಗೆ ಅಗತ್ಯ ಸೌಲಭ್ಯ ಒದಗಿಸಲಾಯಿತು. ಆಹಾರ ತಯಾರಿಕೆಯಿಂದ ಹಿಡಿದು ವಿತರಣೆಯವರೆಗೆ ಶುದ್ಧತೆ ಮತ್ತು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ವಿವಿಧ ವಿಭಾಗದ ಕಾರ್ಮಿಕರ ಸಮನ್ವಯದಿಂದ ಕಾರ್ಯಗಳು ಸುಗಮವಾಗಿ ನಡೆದವು.

ಭಾರೀ ಜನಸಂದಣಿ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಯಶಸ್ವಿಯಾಗಿ ಭದ್ರತೆ ಒದಗಿಸಿದರು. ಸಹಾಯಕ ಪೊಲೀಸ್ ಆಯುಕ್ತ ಮಂಜುನಾಥ ಬಳಗಾನೂರಮಠ ಹಾಗೂ ಕರ್ನಾಟಕ ಕೊಳಚೆ ಅಭಿವೃದ್ಧಿ ನಿಗಮದ ಕಾರ್ಯಪಾಲಕ ಅಭಿಯಂತರರಾದ ಪ್ರಸನ್ನಕುಮಾರ, ಜವಾಹರ ಜೋಗಿ, ಚೇತನಕುಮಾರ ಅವರ ನೇತೃತ್ವದಲ್ಲಿ ಆಹಾರ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ, ಶಿಸ್ತುಬದ್ಧವಾಗಿ ನಿರ್ವಹಿಸಲಾಗಿದ್ದು, ಅದ್ಭುತ ಕಾರ್ಯಕ್ರಮ ಹಾಗೂ ರುಚಿಕರ ಆಹಾರದಿಂದ ತೃಪ್ತರಾದ ಸಾರ್ವಜನಿಕರು ಆಯೋಜನೆಯನ್ನು ಶ್ಲಾಘಿಸಿದರು.
46,000 ಮನೆಗಳ ಹಸ್ತಾಂತರ
ವಸತಿ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಗೃಹಮಂಡಳಿ ವತಿಯಿಂದ ಇಂದು ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗೃಹ ಮಂಡಳಿ ನಿರ್ಮಿಸಿರುವ 42,345 ಮನೆಗಳು ಹಾಗೂ ಕೊಳಗೇರಿ ಅಭಿವೃದ್ಧಿ ಮಂಡಳಿಯ 46,000 ಮನೆಗಳನ್ನು ವಸತಿ ರಹಿತ ಅರ್ಹ ಫಲಾನುಭವಿಗಳಿಗೆ ಸಿಎಂ ಸಿದ್ದರಾಮಯ್ಯ ವಿತರಿಸಿದರು. ಹೊಸ ಸೂರಿನಡಿ ನೆಮ್ಮದಿಯ ಬದುಕು ಕಟ್ಟಿಕೊಳ್ಳುವಂತೆ ಶುಭ ಹಾರೈಸಿದರು.
ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ವಸತಿ ಸಚಿವರಾದ ಜಮೀರ್ ಅಹ್ಮದ್ ಖಾನ್, ಸಚಿವರಾದ ಸತೀಶ್ ಜಾರಕಿಹೊಳಿ, ಹೆಚ್.ಸಿ.ಮಹದೇವಪ್ಪ, ಹೆಚ್.ಕೆ.ಪಾಟೀಲ್, ಕೆ.ಹೆಚ್.ಮುನಿಯಪ್ಪ, ಸಂತೋಷ್ ಲಾಡ್, ಶಾಸಕರು, ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರೂ ಆದ ಪ್ರಸಾದ್ ಅಬ್ಬಯ್ಯ, ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಸಲೀಂ ಅಹ್ಮದ್ ಸೇರಿದಂತೆ ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.












Click it and Unblock the Notifications