ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗಕ್ಕೆ ಹೊಸ ಯೋಜನೆ; ನೈಋತ್ಯ ರೈಲ್ವೆ
ಬೆಂಗಳೂರು, ಆಗಸ್ಟ್ 25: ಹುಬ್ಬಳ್ಳಿ-ಅಂಕೋಲಾ ನಡುವಿನ ಬ್ರಾಡ್ ಗೇಜ್ ರೈಲು ಮಾರ್ಗದ ಯೋಜನೆಯ ಕುರಿತಂತೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಅಭಿಪ್ರಾಯದಂತೆ ರೈಲು ಮಾರ್ಗದ ಕುರಿತು ಪರಿಷ್ಕೃತ ಯೋಜನೆಯನ್ನು ಸಲ್ಲಿಸಲಾಗುವುದು ಎಂದು ನೈಋುತ್ಯ ರೈಲ್ವೆ ವಲಯ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ.
ಇದರಿಂದಾಗಿ ನ್ಯಾಯಾಲಯ ಯೋಜನೆಯನ್ನು ಪ್ರಶ್ನಿಸಿ ಪರಿಸರವಾದಿಗಳು ಸಲ್ಲಿಸಿದ್ದ ಅರ್ಜಿಯನ್ನು ವಿಲೇವಾರಿ ಮಾಡಿದೆ. ಕರ್ನಾಟಕ ಹೈಕೋರ್ಟ್ ಪಿಐಎಲ್ ವಿಲೇವಾರಿ ಮಾಡಿರುವುದರಿಂದ ಈ ಮೊದಲು ನೀಡಿದ್ದ ಮಧ್ಯಂತರ ಆದೇಶ ತೆರವಾಗಲಿದೆ.

ಪ್ರಾಜೆಕ್ಟ್ ವೃಕ್ಷ ಫೌಂಡೇಷನ್ ಮತ್ತು ಗಿರಿಧರ್ ಕುಲಕರ್ಣಿ ಹುಬ್ಬಳ್ಳಿ-ಅಂಕೋಲಾ ನಡುವೆ 164.44 ಕಿ. ಮೀ. ಉದ್ದದ ರೈಲು ಮಾರ್ಗ ನಿರ್ಮಾಣಕ್ಕೆ ಕರ್ನಾಟಕ ವನ್ಯಜೀವಿ ಮಂಡಳಿ 2020ರ ಮಾ.20ರಂದು ಅನುಮತಿ ನೀಡಿರುವುದನ್ನು ಆಕ್ಷೇಪಿಸಿ ಸಲ್ಲಿಸಿರುವ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಮುಖ್ಯ ನ್ಯಾಯಮೂರ್ತಿ ಪಿ. ಬಿ. ವರಳೆ ನೇತೃತ್ವದ ವಿಭಾಗೀಯ ಪೀಠದ ಮುಂದೆ ಗುರುವಾರ ವಿಚಾರಣೆಗೆ ಬಂದವು.
ಆಗ ರೈಲ್ವೆ ಸಚಿವಾಲಯವನ್ನು ಪ್ರತಿನಿಧಿಸುವ ವಕೀಲರು, ನೈಋುತ್ಯ ರೈಲ್ವೆ ವಲಯದ ಡೆಪ್ಯೂಟಿ ಚೀಫ್ ಎಂಜಿನಿಯರ್ ಸಿ. ಪಿ. ರೆಡ್ಡಿ ಪರ ಪ್ರಮಾಣ ಪತ್ರ ಸಲ್ಲಿಸಿದರು. ಅದನ್ನು ದಾಖಲಿಸಿಕೊಂಡ ನ್ಯಾಯಪೀಠ ಪಿಐಎಲ್ ಅನ್ನು ಇತ್ಯರ್ಥಪಡಿಸಿತು.
2020ರ ಮಾ.20ರಂದು ರಾಜ್ಯ ವನ್ಯಜೀವಿ ಮಂಡಳಿ ಕೈಗೊಂಡಿರುವ ನಿರ್ಣಯ ಆಧರಿಸಿ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಯೋಜನೆ ಸಂಬಂಧ ಮುಂದಿನ ಕ್ರಮ ಜರುಗಿಸಬಾರದು ಎಂದು ಸರ್ಕಾರಕ್ಕೆ ಸೂಚಿಸಿ 2020ರ ಜೂ.18ರಂದು ಹೈಕೋರ್ಟ್ ಮಧ್ಯಂತರ ಆದೇಶ ಮಾಡಿತ್ತು. ನಂತರ ಮಧ್ಯಂತರ ಆದೇಶ ಹೈಕೋರ್ಟ್ ವಿಸ್ತರಿಸುತ್ತಾ ಬಂದಿತ್ತು.
ಪ್ರಮಾಣಪತ್ರದ ಸಾರಾಂಶವೇನು?; ನೈಋುತ್ಯ ರೈಲ್ವೆ ವಲಯ ಯೋಜನೆಯನ್ನು 1996-97ರಲ್ಲಿಯೇ ಅನುಮೋದಿಸಿತ್ತು. ಆದರೆ ಹಲವು ವರ್ಷಗಳು ಕಳೆದರೂ ಅದನ್ನು ಪೂರ್ಣಗೊಳಿಸಲಾಗಿಲ್ಲ. ಇದರಿಂದ ಉತ್ತರ ಕರ್ನಾಟಕ ಭಾಗ ಅಭಿವೃದ್ಧಿಯಾಗುತ್ತಿಲ್ಲ ಮತ್ತು ಯೋಜನಾ ವೆಚ್ಚ ಹೆಚ್ಚಾಗುತ್ತಿದೆ.
ಹುಬ್ಬಳ್ಳಿಯಿಂದ 34 ಕಿ. ಮೀ. ದೂರದವರೆಗೆ ಅರಣ್ಯ ಪ್ರದೇಶವಿಲ್ಲದ ಜಾಗದಲ್ಲಿ100 ಕೋಟಿ ರೂ. ವೆಚ್ಚದಲ್ಲಿಯೋಜನೆಯನ್ನು ಜಾರಿಗೊಳಿಸಿದೆ. ಉಳಿದ ಮಾರ್ಗ ಅರಣ್ಯದಲ್ಲಿ ಹಾದು ಹೋಗುವುದರಿಂದ ಯೋಜನೆ ಜಾರಿಗೆ ನೈಋುತ್ಯ ರೈಲ್ವೆ ವಲಯ ಅಗತ್ಯ ಕಡ್ಡಾಯ ಅನುಮತಿಗಳಿಗಾಗಿ ಕಾಯುತ್ತಿದೆ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ.
ಅಲ್ಲದೆ, ಹೈಕೋರ್ಟ್ ಆದೇಶದಂತೆ ರಾಷ್ಟ್ರೀಯ ವನ್ಯಜೀವಿ ಮಂಡಳಿ (ಎನ್‌ಬಿಡ್ಲೂಎಲ್) ಸಮಿತಿ ರಚನೆ ಮಾಡಿತ್ತು, ಆ ಸಮಿತಿ ಸ್ಥಳ ಪರಿಶೀಲನೆ ನಡೆಸಿ ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸಿದೆ. ಆ ಸಮಿತಿ ನಡೆಸಿದ ಸಭೆಯಲ್ಲಿ ರೈಲ್ವೆ ಸಚಿವಾಲಯದ ಅಧಿಕಾರಿಗಳೂ ಸಹ ಭಾಗವಹಿಸಿದ್ದರು ಮತ್ತು ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗದ ಕುರಿತು ರೈಲ್ವೆ ಪರವಾಗಿ ಪ್ರಸ್ತಾವ ಮಂಡಿಸಲಾಗಿದೆ. ಆ ಸಮಿತಿಯ ಶಿಫಾರಸುಗಳಂತೆ ರೈಲ್ವೆಗೆ ಪರಿಷ್ಕೃತ ಯೋಜನಾ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಲಾಗಿದೆ.
ಹುಬ್ಬಳ್ಳಿಯ ನೈಋುತ್ಯ ರೈಲ್ವೆ ವಲಯ, ರಾಷ್ಟ್ರೀಯ ವನ್ಯಜೀವಿ ಮಂಡಳಿಯ ನಿರ್ದೇಶನಗಳನ್ನು ಪಾಲನೆ ಮಾಡಬೇಕಿದೆ ಮತ್ತು ಡೆಹ್ರಾಡೂನ್‌ನ ಭಾರತೀಯ ವನ್ಯಜೀವಿ ಕೇಂದ್ರದ ಜತೆ ಸಮಾಲೋಚನೆ ನಡೆಸಿ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಯ ಮಿಟಿಗೇಷನ್ ಪ್ಲಾನ್ ಅನ್ನು ಸಿದ್ಧಪಡಿಸಬೇಕು ಮತ್ತು ಎನ್‌ಬಿಡಬ್ಲೂಎಲ್, ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಹಾಗೂ ಹವಾಮಾನ ವೈಪರೀತ್ಯ ಸಚಿವಾಲಯದ ನಿರ್ದೇಶನಗಳನ್ನು ಪಾಲಿಸಲಾಗುವುದು ಮತ್ತು ಅಗತ್ಯ ಅನುಮತಿಗಳನ್ನು ಪಡೆದ ನಂತರವೇ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ರೈಲ್ವೆ ತಿಳಿಸಿದೆ.












Click it and Unblock the Notifications