ಆಫ್‌ಲೈನ್ ಮೂಲಕವೂ ಅರ್ಜಿ ಸಲ್ಲಿಕೆಗೆ ಅವಕಾಶ?
ಬೆಂಗಳೂರು, ಫೆಬ್ರವರಿ 29; ವಾಹನಗಳಿಗೆ ಹೆಚ್ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಬಗ್ಗೆ ಅರಿವು ಮೂಡಿಸುವುದು ಸಾರಿಗೆ ಇಲಾಖೆ ಪಾಲಿಗೆ ಸವಾಲಿನ ಕೆಲಸವಾಗಿದೆ. ವಾಹನ ಸವಾರರ ಒತ್ತಡಕ್ಕೆ ಮಣಿದು ನಂಬರ್ ಪ್ಲೇಟ್ ಆಳವಡಿಕೆ ಮಾಡಲು ಇದ್ದ ಗಡುವು ವಿಸ್ತರಣೆ ಮಾಡಿದೆ. ಆದರೆ ಈ ಸಮಯದಲ್ಲೂ ಸಹ ಈ ಕಾರ್ಯ ಮುಗಿಯುವುದು ಅನಿವಾರ್ಯವಾಗಿದೆ.
ಹೆಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಲು ಇದ್ದ ಗಡುವನ್ನು ಸಾರಿಗೆ ಇಲಾಖೆ ಫೆಬ್ರವರಿ 17 ರಿಂದ ಮೇ 31, 2024ರ ತನಕ ವಿಸ್ತರಣೆ ಮಾಡಿದೆ. ಆದರೆ ಈ ವಿಚಾರದಲ್ಲಿ ಉಂಟಾಗಿರುವ ಹಲವು ಗೊಂದಲ, ತಾಂತ್ರಿಕ ಸಮಸ್ಯೆಗಳಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ.

ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಂಡು ರಾಜ್ಯದಲ್ಲಿ 1 ಏಪ್ರಿಲ್ 2019ಕ್ಕಿಂತ ಮೊದಲು ನೋಂದಣಿ ಮಾಡಿದ ಹಳೆಯ ವಾಹನಗಳು ಸುರಕ್ಷಿತ ನೋಂದಣಿ ಫಲಕ (ಹೆಚ್ಎಸ್ಆರ್‌ಪಿ) ಅಳವಡಿಕೆ ಮಾಡಬೇಕಿದೆ. ಸದ್ಯ ಇದಕ್ಕೆ ಮೇ 31ರ ತನಕ ಸಮಯವಿದೆ.
ಆಫ್‌ಲೈನ್‌ನಲ್ಲಿಯೂ ಅರ್ಜಿ: ವಾಹನ ಸವಾರರು ಹೆಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಆಳವಡಿಕೆ ಮಾಡಲು ಆನ್‌ಲೈನ್ ಮೂಲಕ ನೋಂದಣಿ ಮಾಡಿಸುವಾಗ ಹಲವು ತೊಂದರೆ ಅನುಭವಿಸುತ್ತಿದ್ದಾರೆ. ಸರ್ವರ್ ನಿಧಾನವಾಗಿರುವ ಕಾರಣ ಮತ್ತೆ ಮತ್ತೆ ನೋಂದಣಿಗೆ ಕೇಳುತ್ತಿದೆ.
ತಾಂತ್ರಿಕ ತೊಂದರೆಗಳು ಉಂಟಾದರೆ ಅದನ್ನು ಬಗೆಹರಿಸಲು ಸಾರಿಗೆ ಇಲಾಖೆ ಸಹಾಯವಾಣಿ ಆರಂಭಿಸಿದೆ. ಜನರು ಬೆಳಗ್ಗೆ 10 ರಿಂದ ಸಂಜೆ 5.30ರ ತನಕ 9449863429/26 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದು. ಅಲ್ಲದೇ ಈಗ ಸೈಬರ್ ಸೆಂಟರ್‌ಗಳಲ್ಲಿಯೂ ಹೆಚ್‌ಎಸ್‌ಆರ್‌ಪಿ ನೋಂದಣಿ ಮಾಡಿಕೊಡಲಾಗುತ್ತದೆ ಎಂಬ ಜಾಹೀರಾತು ಕಾಣಿಸುತ್ತಿದೆ.
ಜನರಲ್ಲಿ ಅರಿವು ಮೂಡಿಸಲು ವಿಫಲವಾಗಿರುವ ಸಾರಿಗೆ ಇಲಾಖೆ ಆನ್‌ಲೈನ್ ಮಾತ್ರವಲ್ಲ ಆಫ್‌ಲೈನ್ ಮೂಲಕವೂ ನೋಂದಣಿಗೆ ಅವಕಾಶ ಮಾಡಿಕೊಡಲು ಚಿಂತನೆ ನಡೆಸಿದೆ. ಪ್ರಾಯೋಗಿಕವಾಗಿ ಬೆಂಗಳೂರು ನಗರದ ಕೆಲವು ಬಡಾವಣೆಗಳಲ್ಲಿ ಇದು ಜಾರಿಗೆ ಬರುವ ನಿರೀಕ್ಷೆ ಇದೆ.
ಆನ್‌ಲೈನ್‌ನಲ್ಲಿ ಹೆಚ್‌ಎಸ್ಆರ್‌ಪಿ ಪ್ಲೇಟ್ ನೋಂದಣಿ ಸಮಯದಲ್ಲಿ ಆಗುವ ತೊಂದರೆ, ಜನರಿಗೆ ಅರಿವಿನ ಕೊರತೆ, ತಾಂತ್ರಿಕ ಸಮಸ್ಯೆಗಳ ಹಿನ್ನಲೆಯಲ್ಲಿ ಆಫ್‌ಲೈನ್ ಮೂಲಕವೂ ನೋಂದಣಿ ಮಾಡಿಕೊಳ್ಳಲು ಸಾರಿಗೆ ಇಲಾಖೆ ಮುಂದಾಗಿದ್ದು, ಶೀಘ್ರವೇ ಈ ಕುರಿತು ಆದೇಶ ಪ್ರಕಟವಾಗುವ ಸಾಧ್ಯತೆ ಇದೆ.
ಹೆಚ್‌ಎಸ್‌ಆರ್‌ಪಿ ನೋಂದಣಿ ಹೆಸರಿನಲ್ಲಿ ವಂಚನೆ ಮಾಡುವ ಹಲವಾರು ಲಿಂಕ್‌ಗಳು ಸಹ ಆನ್‌ಲೈನ್‌ನಲ್ಲಿ ಕಾಣಿಸುತ್ತಿವೆ. ಅಧಿಕಾರಿಗಳು http://transport.karnataka.gov.in ಅಥವ www.siam.in ವೆಬ್‌ಸೈಟ್‌ಗೆ ಮಾತ್ರ ಭೇಟಿ ನೀಡಿ ನಂಬರ್ ಪ್ಲೇಟ್ ಆಳವಡಿಕೆಗೆ ನೋಂದಣಿ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಅಧಿಕಾರಿಗಳಯ ಹೇಳುವಂತೆ ಈ ವೆಬ್‌ಸೈಟ್ ಮೂಲಕ ನೋಂದಣಿ ಮಾಡಿ ಆಳವಡಿಸಿದ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಮಾತ್ರ ಮಾನ್ಯತೆ ಹೊಂದಿರುತ್ತವೆ. ಇತರ ವೆಬ್ ಪೋರ್ಟಲ್ ಬಳಕೆ ಮಾಡಬಾರದು, ವಂಚನೆ ಬಗ್ಗೆ ಜನರು ಜಾಗೃತೆ ವಹಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾರಿಗೆ ಇಲಾಖೆ ಹೇಳಿರುವ ಮಾನ್ಯತೆ ಪಡೆದ ವೆಬ್‌ಸೈಟ್‌ಗೆ ಭೇಟಿ ನೀಡಿ ಜನರು ವಾಹನದ ವಿವರ ನೀಡಿ ನೋಂದಣಿ ಮಾಡಿಸಬೇಕು. ಫಲಕ ಅಳವಡಿಕೆ ದಿನಾಂಕ, ಮಾರಾಟ ಕೇಂದ್ರದ ಹೆಸರು, ವಿಳಾಸ ಖಚಿತಪಡಿಸಿಕೊಳ್ಳಬೇಕು. ಆನ್‌ಲೈನ್ ಮೂಲಕವೇ ನಿಗದಿತ ಶುಲ್ಕ ಪಾವತಿಸಬೇಕು.
ಗಡುವು ವಿಸ್ತರಣೆ ಮಾಡಿದರೂ ಸಹ ಇನ್ನೂ ಕೋಟ್ಯಾಂತರ ವಾಹನಗಳಿಗೆ ಹೆಚ್‌ಎಸ್ಆರ್‌ಪಿ ಪ್ಲೇಟ್ ಅಳವಡಿಕೆ ಬಾಕಿ ಇದೆ. ಅಲ್ಲದೇ ವಾಹನ ಸವಾರರ ನಿರಾಸಕ್ತಿ ಕಾರಣ ನೋಂದಣಿಯೂ ಸರಿಯಾಗಿ ಆಗುತ್ತಿಲ್ಲ. ಸಾರಿಗೆ ಇಲಾಖೆ ಈ ಬಾರಿ ನೀಡಿರುವ ಗಡುವು ಮುಗಿದರೆ ನಂಬರ್ ಪ್ಲೇಟ್ ಇಲ್ಲದ ವಾಹನಗಳಿಗೆ ದಂಡ ವಿಧಿಸುವ ನಿರೀಕ್ಷೆ ಇದೆ.












Click it and Unblock the Notifications