ಲೋಕಸಭೆ: 52 ವರ್ಷದಲ್ಲಿ ರಾಜ್ಯದಲ್ಲಿ ಉಪಚುನಾವಣೆಗಳೆಷ್ಟು?
ಬೆಂಗಳೂರು, ಏ. 1: ನಿರ್ಲಜ್ಜ ರಾಜಕಾರಣಿಗಳ ಸ್ವಾರ್ಥ ಸಾಧನೆಗಾಗಿ ಕರ್ನಾಟಕದಲ್ಲಿ ಇತ್ತೀಚೆಗೆ ಉಪಚುನಾವಣೆ/ಮರು ಚುನಾವಣೆಗಳು ಯಾವುದೇ ಎಗ್ಗುಸಿಗ್ಗಿಲ್ಲದೆ ಅವ್ಯಾಹತವಾಗಿ ನಡೆದಿದೆ. ಅದು ವಿಧಾನಸಭೆಯೂ ಆಗಬಹುದು/ ಅಥವಾ ಲೋಕಸಭಾ ಚುನಾವಣೆಯಾದರೂ ಆಗಬಹುದು.
ಈಗ 16ನೇ ಲೋಕಸಭೆಯ ಚುನಾವಣಾ ಪರ್ವವಾಗಿರುವುದರಿಂದ ಲೋಕಸಭೆಗೆ ಕಳೆದ 52 ವರ್ಷಗಳಲ್ಲಿ ಕರ್ನಾಟಕದಲ್ಲಿ ಎಷ್ಟು ಉಪಚುನಾವಣೆಗಳು ನಡೆದಿವೆ? ಎಂಬ ಪ್ರಶ್ನೆ ಮುಂದಿಟ್ಟುಕೊಂಡು ನೋಡಿದಾಗ ಕೆಲ ಕುತೂಹಲಕಾರಿ ಅಂಶಗಳು ಪತ್ತೆಯಾಗುತ್ತವೆ. ಹಾಲಿ ಸಂಸದರ ಸಾವಿನಿಂದಾಗಿ ಉಪಚುನಾವಣೆ ನಡೆದರೆ ಅದು ಅನಿವಾರ್ಯ. ಆದರೆ ಈಗಾಗಲೇ ಚುನಾಯಿತರಾದ ಜನಪ್ರತಿನಿಧಿಗಳು ಸ್ವಾರ್ಥ ಸಾಧನೆಗಾಗಿ ಕ್ಷೇತ್ರ ತೆರವು ಗೊಳಿಸಿ, ಮರು ಚುನಾವಣೆಗೆ ವೇದಿಕೆಯೊದಗಿಸುವುದು ಎಷ್ಟು ಸಮಂಜಸ ಎಂಬುದು ಡೇ-1 ನಿಂದ ಜಿಜ್ಞಾಸೆ ಮೂಡಿಸಿದೆ.

ರಾಜ್ಯದಲ್ಲಿ ಮೊದಲ ಉಪಚುನಾವಣೆ ನಡೆದಿದ್ದು 1962ರ ಜೂನ್ ತಿಂಗಳಲ್ಲಿ. ಅಂದಿನ ಕಾಂಗ್ರೆಸ್ ಸಂಸದ ಎಂವಿ ಕೃಷ್ಣಪ್ಪ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ಮೊದಲ ಬಾರಿಗೆ ಉಪಚುನಾವಣೆ ನಡೆದಿತ್ತು. ಅಲ್ಲಿಂದೀಚೆಗೆ ಇದುವರೆಗೂ 18 ಉಪಚುನಾವಣೆಗಳು ನಡೆದಿವೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
1962-67 ಅವಧಿಯ ಲೋಕಸಭೆಗೆ ಗರಿಷ್ಠ ಬಾರಿಗೆ ಅಂದರೆ 5 ಬಾರಿ ಉಪಚುನಾವಣೆಗಳು ನಡೆದಿವೆ. ಇನ್ನು, 4 ಮತ್ತು 15ನೆಯ ಲೋಕಸಭೆಗೆ ತಲಾ 3 ಬಾರಿ ಉಪಚುನಾವಣೆಗಳು ನಡೆದಿವೆ. 5 ಮತ್ತು 14ನೆಯ ಲೋಕಸಭೆಗೆ ತಲಾ 2 ಉಪಚುನಾವಣೆಗಳು ನಡೆದಿವೆ. (ಮತ್ತೆ ಕಣಕ್ಕಿಳಿದ ಎಚ್ಡಿಕೆ ಸಂಸದೀಯ ಸಾಧನೆ ಏನು?)
ದಾಖಲಾರ್ಹ ಸಂಗತಿಯೆಂದರೆ 1952, 1957, 1984, 1989, 1991 ಮತ್ತು 1996ರ ಲೋಕಸಭೆಗೆ ಒಂದೇ ಒಂದು ಉಪಚುನಾವಣೆಯೂ ನಡೆಯಲಿಲ್ಲ! 1980ರಲ್ಲಿ ಗುಲ್ಬರ್ಗಾ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಎನ್ ಧರಂ ಸಿಂಗ್ ಅವರು ಜಯ ಸಾಧಿಸಿದ ಮರುಘಳಿಗೆಯಲ್ಲೇ ಸಂಸದನ ಸ್ಥಾನಕ್ಕೆ ರಾಜೀನಾಮೆ ನೀಡಿ, ಪಕ್ಷ ನಿಷ್ಠೆ ಮೆರೆದಿದ್ದರು.
ಹೆಚ್ಚು ಹೆಚ್ಚು ಉಪಚುನಾವಣೆಗಳನ್ನು ಕಂಡ ಕ್ಷೇತ್ರಗಳೆಂದರೆ ಮಂಡ್ಯ (3 ಬಾರಿ), ತುಮಕೂರು (2 ಬಾರಿ), ಗುಲ್ಬರ್ಗಾ (2 ಬಾರಿ) ಮತ್ತು ಚಿಕ್ಕಮಗಳೂರು (2 ಬಾರಿ). ಹಾಗೆಯೇ, ಬೀದರ್, ಬೆಂಗಳೂರು, ಬಿಜಾಪುರ, ಚಿಕ್ಕಬಳ್ಳಾಪುರ, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ ಮತ್ತು ಮಧುಗಿರಿ ಕ್ಷೇತ್ರಗಳಲ್ಲಿ ತಲಾ ಒಂದು ಬಾರಿ ಉಪಚುನಾವಣೆಗಳು ನಡೆದಿವೆ.












Click it and Unblock the Notifications