'ಕಿಂಗ್‌ಮೇಕರ್ ಕುಮಾರಣ್ಣ' ಎಂದ ಸಮೀಕ್ಷೆಗಳು: ರಾಷ್ಟ್ರೀಯ ಪಕ್ಷಗಳ ಅಬ್ಬರದ ನಡುವೆ ಜೆಡಿಎಸ್ ಜೀವಂತ- ಇಲ್ಲಿವೆ ಮಹತ್ವದ ಕಾರಣಗಳು
ಬೆಂಗಳೂರು, ಏಪ್ರಿಲ್ 25: ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಯು ರಾಷ್ಟ್ರದ ಗಮನ ಸೆಳೆದಿದೆ. ಭಾರತೀಯ ಜನತಾ ಪಕ್ಷ ( ಬಿಜೆಪಿ ), ಕಾಂಗ್ರೆಸ್ ಹಾಗೂ ಜೆಡಿಎಸ್ ತೀವ್ರ ಪೈಪೋಟಿಯಲ್ಲಿ ತೊಡಗಿವೆ. ಆಡಳಿತಾರೂಢ ಬಿಜೆಪಿ ಅಧಿಕಾರ ವಿರೋಧಿ ಅಲೆ ಎದುರಿಸುತ್ತಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್ ಎಲ್ಲ ರೀತಿಯ ಸಿದ್ದತೆಗಳನ್ನು ಮಾಡಿಕೊಂಡಿದೆ. ಈ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಸಂಕಷ್ಟ ತಂದೊಡ್ಡಲಿದೆ ಎಂಬ ಮಾತುಗಳು ಕೇಳಿಬಂದಿದೆ.
ಕರ್ನಾಟಕ ಚುನಾವಣೆ ಬಳಿಕ ರಾಜ್ಯ ರಾಜಕಾರಣವು ಬಹುದೊಡ್ಡ ಬೆಳವಣಿಗೆಯೊಂದಕ್ಕೆ ಮತ್ತೆ ಸಾಕ್ಷಿಯಾಗಲಿದೆ ಎಂಬುದನ್ನು ರಾಜಕೀಯ ಪರಿಣಿತರು ವ್ಯಕ್ತಪಡಿಸಿದ್ದಾರೆ. ಇದರ ಬಗೆಗಿನ ಕುತೂಹಲವೀಗ ಕನ್ನಡಿಗರಲ್ಲಿ ಮನೆ ಮಾಡಿದೆ. ಯಾವುದೇ ಪಕ್ಷಕ್ಕೆ ಸಂಪೂರ್ಣ ಬಹುಮತ ಸಿಗುವುದಿಲ್ಲ ಎಂಬುದನ್ನು ಮಹತ್ವದ ಸಮೀಕ್ಷೆಗಳು ಬಹಿರಂಗ ಪಡಿಸಿವೆ.

ಕಳೆದ ಬಾರಿಯಂತೆ ಈ ಬಾರಿಯೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕಿಂಗ್ ಮೇಕರ್ ಆಗಲಿದ್ದಾರೆ ಎಂಬುದನ್ನು ಪ್ರಮುಖ ಸಮೀಕ್ಷೆಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಎಲ್ಲರ ಗಮನ ಕುಮಾರಣ್ಣನ ಮೇಲೆ ನೆಟ್ಟಿರುವುದಂತೂ ಸುಳ್ಳಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳ ಭರಾಟೆಯ ನಡುವೆಯೂ ಜೆಡಿಎಸ್ ತನ್ನ ಪ್ರಸ್ತುತತೆಯನ್ನು ಕಳೆದುಕೊಳ್ಳದಿರುವುದಕ್ಕೆ ಹಲವು ಮಹತ್ವದ ಕಾರಣಗಳಿವೆ.
ರಾಜಕಾರಣದಲ್ಲಿ ಪ್ರಸ್ತುತತೆ ಕಳೆದುಕೊಳ್ಳದ ಜೆಡಿಎಸ್: ಕಾರಣಗಳೇನು?
ಜೆಡಿಎಸ್ ಪ್ರಾಬಲ್ಯ ಹೊಂದಿರುವ ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಪೈಪೋಟಿ ನೀಡುತ್ತಿದೆ. ಇದರೊಂದಿಗೆ ಬಿಜೆಪಿ ತನ್ನ ನೆಲೆಯನ್ನು ಕಂಡುಕೊಳ್ಳಲು ಸತತ ಪ್ರಯತ್ನ ಮಾಡುತ್ತಿದೆ. ಈ ಎರಡೂ ರಾಷ್ಟ್ರಗಳ ಅಬ್ಬರದ ನಡುವೆಯೂ ಜೆಡಿಎಸ್ ಈ ಪ್ರದೇಶದಲ್ಲಿ ಪ್ರಮುಖ ರಾಜಕೀಯ ಪಕ್ಷವಾಗಿ ಉಳಿದಿದೆ.
ಕಳೆದ ಎರಡು ದಶಕಗಳಲ್ಲಿ ಎರಡು ಬಾರಿ 'ಕಿಂಗ್ ಮೇಕರ್' ಆಗಿರುವ ಜೆಡಿಎಸ್ ಬಿಜೆಪಿ ಹಾಗೂ ಕಾಂಗ್ರೆಸ್ ಜೊತೆಗೂಡಿ ಸರ್ಕಾರಗಳನ್ನು ರಚಿಸಿದೆ. ಈ ಮೂಲಕ ರಾಜ್ಯ ರಾಜಕಾರಣದಲ್ಲಿ ಗುರುತರ ಪಾತ್ರವನ್ನು ವಹಿಸಿದೆ.

ಕರ್ನಾಟಕದ ಪ್ರಮುಖ ಭೂಮಾಲಿಕ ಸಮುದಾಯವಾದ ಒಕ್ಕಲಿಗರನ್ನು ಹಿಡಿದಿಟ್ಟುಕೊಳ್ಳುವ ಮೂಲಕ ಜೆಡಿಎಸ್ ತನ್ನದೇ ಆದ ಪ್ರಸ್ತುತತೆಯನ್ನು ಹೊಂದಿದೆ. ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು ಹುಟ್ಟು ಹಾಕಿದ ಪಕ್ಷಕ್ಕೆ ಒಕ್ಕಲಿಗ ಅಸ್ಮಿತೆಯೇ ಗೆಲುವಿನ ಅಸ್ತ್ರವಾಗಿ ಪರಿಣಮಿಸಿದೆ. ದೇವೇಗೌಡರು ಒಕ್ಕಲಿಗ ಸಮುದಾಯದ ಅಗ್ರಗಣ್ಯ ನಾಯಕರು ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ.
ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಭದ್ರಕೋಟೆ
2018 ರಲ್ಲಿ ಕುಮಾರಣ್ಣನವರು 'ಕಿಂಗ್ ಮೇಕರ್' ಆಗಿ ಹೊರಹೊಮ್ಮಿದರು. ಅವರು ಕಾಂಗ್ರೆಸ್‌ನೊಂದಿಗೆ ಸೇರಿ 14 ತಿಂಗಳ ಕಾಲ ಸರ್ಕಾರ ನಡೆಸಿದರು. ಜೆಡಿಎಸ್ 37 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಅದರಲ್ಲಿ 30 ಸ್ಥಾನಗಳು ಮೈಸೂರು ಭಾಗದಿಂದ ಬಂದಿತ್ತು. ಜೆಡಿಎಸ್ ಪಡೆದ ಸ್ಥಾನಗಳ ಪೈಕಿ ಶೇ 79 ರಷ್ಟು ಮತಗಳು ಹಳೆ ಮೈಸೂರು ಪ್ರದೇಶದಿಂದ ಬಂದಿವೆ.
ಆದರೆ, 2013 ರ ಚುನಾವಣಾ ಅಂಕಿಅಂಶಕ್ಕಿಂತ ಅದರ ಒಟ್ಟು ಮತಗಳ ಪ್ರಮಾಣವು ಸುಮಾರು ಶೇ 2 ರಷ್ಟು ಕಡಿಮೆಯಾಗಿದೆ. 2004 ರಲ್ಲಿ ಜೆಡಿಎಸ್ ಅತ್ಯುತ್ತಮ ಪ್ರದರ್ಶನ ನೀಡಿತ್ತು. ಅದು 2004 ರಲ್ಲಿ 58 ಸ್ಥಾನಗಳನ್ನು ಗೆದ್ದಿತ್ತು. ಮೊದಲು ಕಾಂಗ್ರೆಸ್ ಮತ್ತು ನಂತರ ಬಿಜೆಪಿಯೊಂದಿಗೆ ಸರ್ಕಾರವನ್ನು ರಚಿಸಲು ಮೈತ್ರಿ ಮಾಡಿಕೊಂಡಿತ್ತು.

2018 ರಲ್ಲಿ ಸಿದ್ದರಾಮಯ್ಯ ವಿರೋಧಿ ನಿರೂಪಣೆ
2018ರಲ್ಲಿ ಸಿದ್ದರಾಮಯ್ಯ ವಿರೋಧಿ ಅಲೆಯನ್ನು ಜೆಡಿಎಸ್ ಬಳಕೆ ಮಾಡಿಕೊಂಡಿತ್ತು. ಕುರುಬ ಸಮುದಾಯದಿಂದ ಬಂದಿರುವ ಸಿದ್ದರಾಮಯ್ಯನವರು ಜೆಡಿಎಸ್‌ಗೆ ದ್ರೋಹ ಬಗೆದು ಕಾಂಗ್ರೆಸ್ ಸೇರಿದ್ದಾರೆ ಎಂಬ ನಿರೂಪಣೆಯನ್ನು 2013ರಿಂದ ಜೆಡಿಎಸ್ ಕಟ್ಟಿಕೊಡುತ್ತಲೇ ಬಂದಿದೆ. ಈ ನಿರೂಪಣೆಯನ್ನು ಕಳೆದ ಬಾರಿಯ ಚುನಾವಣೆಯಲ್ಲಿಯೂ ಜೆಡಿಎಸ್ ಬಳಸಿಕೊಂಡಿತ್ತು. ಸಿದ್ದರಾಮಯ್ಯನವರ ವಿರುದ್ಧದ ಒಕ್ಕಲಿಗ ಮತಗಳು ಜೆಡಿಎಸ್‌ಗೆ ಬರುವಂತೆ ನೋಡಿಕೊಳ್ಳಲಾಗಿತ್ತು. ಮಂಡ್ಯ ಮತ್ತು ಹಾಸನ ಜಿಲ್ಲೆಗಳ 14 ಸ್ಥಾನಗಳಲ್ಲಿ 13 ಸ್ಥಾನಗಳನ್ನು ಗೆದ್ದುಕೊಳ್ಳುವ ಮೂಲಕ ಕಾಂಗ್ರೆಸ್ ಅನ್ನು ಧೂಳಿಪಟ ಮಾಡಿತ್ತು.
ಜೆಡಿಎಸ್‌ಗೆ ಅಲ್ಪಸಂಖ್ಯಾತರ ಮನ್ನಣೆ
ಎರಡು ರಾಷ್ಟ್ರೀಯ ಪಕ್ಷಗಳಿಗೆ ಪೈಪೋಟಿ ನೀಡುತ್ತ ಬಂದಿರುವ ಜೆಡಿಎಸ್‌ಗೆ ಅಲ್ಪಸಂಖ್ಯಾತರ ಮನ್ನಣೆ ದೊರೆಯುತ್ತಲೇ ಬಂದಿದೆ. ಮುಸ್ಲಿಂ ಸಮುದಾಯಕ್ಕೆ ಸಕಾರಾತ್ಮಕ ಸಂಕೇತಗಳನ್ನು ರವಾನಿಸಲು ಜೆಡಿಎಸ್ ಪ್ರಜ್ಞಾಪೂರ್ವಕವಾಗಿ ಕೆಲಸ ಮಾಡುತ್ತಿದೆ.
ಈ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದ ಸಿಎಂ ಇಬ್ರಾಹಿಂ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಲಾಗಿದೆ. ಅದಲ್ಲದೆ, ಪ್ರತಿ ಚುನಾವಣೆಗೂ ಮುನ್ನ ಕುಮಾರಸ್ವಾಮಿಯವರು ಧಾರ್ಮಿಕ ಮುಖಂಡರನ್ನು ಸಂಪರ್ಕಿಸುತ್ತಿದ್ದಾರೆ. ಅವರ ಬೆಂಬಲವನ್ನು ಕೋರುತ್ತಿರುವುದು ಜೆಡಿಎಸ್‌ಗೆ ಸಹಾಯ ಮಾಡಿದೆ.

ಕುಮಾರಸ್ವಾಮಿ ರೈತಪರ ಕೆಲಸ
ಎಚ್‌ಡಿ ಕುಮಾರಸ್ವಾಮಿ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ರೈತ ಪರ ಸಿಎಂ ಎಂದು ಬಿಂಬಿಸಿಕೊಳ್ಳಲು ಯತ್ನಿಸಿದರು. ಗ್ರಾಮ ವಾಸ್ತವ್ಯದಂತಹ ಮಹತ್ತರ ಯೋಜನೆಯನ್ನು ಕುಮಾರಸ್ವಾಮಿ ಹಮ್ಮಿಕೊಂಡಿದ್ದರು. ಇದು ಭಾರೀ ಜನಪ್ರೀಯತೆಯನ್ನು ಗಳಿಸಲು ಸಫಲವಾಗಿತ್ತು. ಎಚ್‌ಡಿಗೆ ಅವರು ರೈತರ ಪರವಾಗಿದ್ದಾರೆ ಎಂಬ ನಿರೂಪಣೆಯನ್ನು ಬಿತ್ತುವಲ್ಲಿ ಸಫಲವಾಗಿತ್ತು.
ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ರೈತ ಸಾಲ ಮನ್ನಾ ಮಾಡುವ ನಿರ್ಧಾರ ತೆಗೆದುಕೊಂಡಿದ್ದರು. ಇದು ರೈತ ಸಮುದಾಯದಲ್ಲಿ ಬಹುದೊಡ್ಡ ಸಂಚಲನವನ್ನೇ ಸೃಷ್ಟಿ ಮಾಡಿತು. ಈಗಲೂ ಕುಮಾರಸ್ವಾಮಿ ಅವರು ರೈತ ಪರ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಮಂಡ್ಯ, ಹಾಸನ, ಮೈಸೂರು ಭಾಗಗಳಲ್ಲಿ ಒಕ್ಕಲಿಗರು ಹೆಚ್ಚಿದ್ದಾರೆ. ಅವರು ರೈತ ಹಾಗೂ ಭೂಮಾಲಿಕರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಜನರು ಕುಮಾರಸ್ವಾಮಿ ಅವರ ಬೆನ್ನಿಗೆ ನಿಂತಿದ್ದಾರೆ ಎಂಬುದು ಕಂಡುಬಂದಿದೆ.












Click it and Unblock the Notifications