Honeytrap Case: ಸಿಎಂಗೆ ಮಹತ್ವದ ದಾಖಲೆ ಸಲ್ಲಿಸಿದ ರಾಜಣ್ಣ ಪುತ್ರ: ಯಾರು ಇದರ ಹಿಂದಿರುವ ರಾಜಕಾರಣಿ?
ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇದೀಗ ಹನಿಟ್ರ್ಯಾಪ್ ತಲೆಬಿಸಿ ಎದುರಾಗಿದೆ. ಸಹಕಾರ ಸಚಿವ ಕೆ.ಎನ್.ರಾಜಣ್ಣ ಹಾಗೂ ಅವರ ಪುತ್ರ ರಾಜೇಂದ್ರ ಅವರಿಗೆ ಹನಿಟ್ರ್ಯಾಪ್ ಯತ್ನ ನಡೆದಿದೆ ಎಂಬ ವಿಚಾರ ಸದನದಲ್ಲೇ ಬಹಿರಂಗವಾದ ಬಳಿಕ ರಾಜ್ಯ ರಾಜಕೀಯವಲಯದಲ್ಲಿ ಸಂಚಲನ ಸೃಷ್ಟಿಯಯಾಗಿದೆ. ಹನಿಟ್ರ್ಯಾಪ್ ಹಿಂದಿರುವುದು ಕೂಡ ಪ್ರಭಾವಿ ರಾಜಕಾರಣಿ ಎಂದು ಹೇಳಲಾಗುತ್ತಿದ್ದು, ಈ ಸಂಬಂಧ ರಾಜಣ್ಣ ಅವರ ಪುತ್ರ ರಾಜೇಂದ್ರ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಹತ್ವದ ದಾಖಲೆ ನೀಡಿದ್ದಾರೆ.
ಹನಿಟ್ರ್ಯಾಪ್ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿಯಾಗಿರುವ ರಾಜೇಂದ್ರ ಅವರು ಈ ಮಹತ್ವದ ದಾಖಲೆ ನೀಡಿ ದೂರು ಕೂಡ ಕೊಟ್ಟಿದ್ದಾರೆ. ಈ ಆರೋಪ ಸಂಬಂಧ ತಮಗೆ ಸಿಕ್ಕಿರುವ ಎಲ್ಲ ಸಾಕ್ಷಿಗಳನ್ನು ಕೂಡ ಅವರು ಸಿಎಂ ಮುಂದೆ ಬಿಚ್ಚಿಟ್ಟಿದ್ದಾರೆ. ಈ ಸಂಬಂಧ ಅವರು ಪೊಲೀಸರಿಗೂ ದೂರು ನೀಡಲು ಮುಂದಾಗಿದ್ದಾರೆ. ರಾಜೇಂದ್ರ ಅವರು ಸಿಎಂ ನೀಡಿರುವ ಈ ಸಾಕ್ಷಿಗಳಲ್ಲಿ ಆ ಪ್ರಭಾವಿ ರಾಜಕಾರಣಿ ಯಾರು ಎಂದೂ ಉಲ್ಲೇಖಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಸಿಎಂ ಭೇಟಿ ಬಳಿಕ ಅವರು ಹನಿಟ್ರ್ಯಾಪ್ ವಿಚಾರವಾಗಿ ಕೆಲ ಮಹತ್ವದ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ತಮ್ಮ ಮೇಲೆ ಹನಿಟ್ರ್ಯಾಪ್ ಯತ್ನ ಸಂಬಂಧ ಎಲ್ಲ ಸಾಕ್ಷ್ಯಗಳೊಂದಿಗೆ ಸಿಎಂ ಅವರನ್ನು ಭೇಟಿಯಾಗಿ ತಿಳಿಸಿದ್ದೇನೆ. ಸೋಮವಾರ ಅಥವಾ ಮಂಗಳವಾರ ಐಜಿಪಿಗೂ ದೂರು ಕೊಡುತ್ತೇನೆ ಎಂದಿದ್ದಾರೆ.
ದೆಹಲಿಗೆ ಹೋಗಿ ಹೈಕಮಾಂಡ್ ಗಮನಕ್ಕೆ ತರುತ್ತೇವೆ
ನನ್ನ ಮೇಲೆ ಹನಿಟ್ರ್ಯಾಪ್ ನಡೆಸಲು ಕಳೆದ ಮೂರು ತಿಂಗಳಿನಿಂದ ಪ್ರಯತ್ನ ನಡೆದಿದೆ. ಕೆಲವರು ಹನಿಟ್ರ್ಯಾಪ್ ನಡೆಸಲು ನಮ್ಮ ಮಧುಗಿರಿ ನಿವಾಸಕ್ಕೆ ಹಾಗೂ ಬೆಂಗಳೂರಿನಲ್ಲಿರುವ ಸರ್ಕಾರಿ ನಿವಾಸಕ್ಕೂ ಬಂದಿದ್ದರು. ಆದರೆ ಅವರು ಯಾವ ಕಾರಣಕ್ಕೆ ಹನಿಟ್ರ್ಯಾಪ್‌ಗೆ ಯತ್ನಿಸಿದ್ದು ಎಂದು ನಮಗೂ ಗೊತ್ತಿಲ್ಲ. ಹನಿಟ್ರ್ಯಾಪ್ ಮಾಡಿದ್ದು ಯಾರು ಎಂದು ಹೇಗೆ ಹೇಳಲಿ? ಈ ಬಗ್ಗೆ ಎಲ್ಲವೂ ತನಿಖೆಯಿಂದಲೇ ಹೊರಬರಲಿದೆ ಎಂದು ರಾಜೇಂದ್ರ ಹೇಳಿದ್ದಾರೆ.
ಎಲ್ಲರ ಮನೆಯಲ್ಲೂ ಹೆಣ್ಣುಮಕ್ಕಳು ಇರ್ತಾರೆ. ಆದರೆ ಈ ರೀತಿ ಆದರೆ ಏನರ್ಥ? ನಮ್ಮ ತಂದೆ ಕೆಎನ್ ರಾಜಣ್ಣ ಅವರಿಗೆ ಮಾತ್ರವಲ್ಲ, ಬೇರೆ ಯಾರಿಗೂ ಈ ರೀತಿ ಆಗಬಾರದು. ಹಾಗಾಗಿ ಈ ಕೇಸ್ ಬಗ್ಗೆ ಹಿರಿಯ ಅಧಿಕಾರಿಗಳಿಗೆ ದೂರು ನೀಡುತ್ತೇನೆ. ಈ ಕೇಸ್‌ನ ತನಿಖೆ ಹೇಗೆ ನಡೆಯುತ್ತೆ ಎನ್ನುವುದು ಸಿಎಂ ಸಿದ್ದರಾಮಯ್ಯ ಹಾಗೂ ಗೃಹಸಚಿವ ಪರಮೇಶ್ವರ್ ಅವರಿಗೆ ಬಿಟ್ಟ ವಿಚಾರ. ಇದರ ಹಿಂದೆ ದೊಡ್ಡ ದೊಡ್ಡವರ ಕೈವಾಡವೇ ಇದ್ದು, ಎಲ್ಲದಕ್ಕೂ ದಾಖಲೆಯೂ ಇದೆ. ಇಲ್ಲಿ ದೂರು ಕೊಟ್ಟ ಬಳಿಕ ದೆಹಲಿಗೂ ಹೋಗಿ ಹೈಕಮಾಂಡ್ ನಾಯಕರ ಗಮನಕ್ಕೆ ತರುತ್ತೇವೆ ಎಂದು ರಾಜೇಂದ್ರ ಹೇಳಿದ್ದಾರೆ.

ಮತ್ತೊಂದೆಡೆ ಸಚಿವ ಸತೀಶ್ ಜಾರಕಿಹೊಳಿ ಅವರು ಹೊಸ ಬಾಂಬ್ ಸಿಡಿಸಿದ್ದಾರೆ. ಜಾರಕಿಹೊಳಿ ಅವರ ಪ್ರಕಾರ ಹನಿಟ್ರ್ಯಾಪ್‌ಗೆ ಒಳಗಾಗಿರುವುದು ಕೇವಲ 40 ಮಂದಿ ಅಲ್ಲ, ರಾಜ್ಯದಿಂದ ಮಾತ್ರವಲ್ಲ, ದೆಹಲಿಯ ಅನೇಕ ನಾಯಕರು ಹಾಗೂ ಅಧಿಕಾರಿಗಳನ್ನ ಕೂಡ ಹನಿಟ್ರ್ಯಾಪ್ ಮಾಡಲಾಗಿದ್ದು, ಕೇವಲ 40 ಮಂದಿ ಅಲ್ಲ, ಕನಿಷ್ಠ 400 ಜನರನ್ನು ಹನಿಟ್ರ್ಯಾಪ್ ಮಾಡಲಾಗಿದೆ ಎಂದು ಸಂಚಲನ ಸೃಷ್ಟಿಸಿದ್ದಾರೆ.












Click it and Unblock the Notifications