Darshan Thoogudeepa: ಇನ್ನೂ 7 ದಿನ ದರ್ಶನ್‌ಗೆ ಮನೆಯೂಟದ ಭಾಗ್ಯವಿಲ್ಲ

ಬೆಂಗಳೂರು, ಜುಲೈ 20: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್‌ ಮನೆಯಿಂದ ಊಟ ಹಾಗೂ ಹಾಸಿಗೆ ಸೌಲಭ್ಯ ಪಡೆಯುವುದಕ್ಕೆ ಅವರು ಹೈಕೋರ್ಟ್‌ಗೆ ರಿಟ್ ಅರ್ಜಿ ಹಾಕಿದ್ದರು. ಈ ಕುರಿತು ಒಪ್ಪಿಗೆ ನೀಡಲು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಮೇಲ್ವಿಚಾರಕರಿಗೆ ಸೂಚಿಸಬೇಕು ಎಂದು ಕೋರಿ ಅವರು ಈಗ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬೇಕಿದೆ.

ನಟ ದರ್ಶನ್ ಮನೆಯಿಂದ ಊಟ ಹಾಗೂ ಹಾಸಿಗೆ ಪಡೆಯಲು ತನಗೆ ಅನುಮತಿ ನೀಡಲು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಮೇಲ್ವಿಚಾರಕರಿಗೆ ಸೂಚಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯು ನ್ಯಾಯಮೂರ್ತಿ ಎಸ್‌. ಆರ್‌. ಕೃಷ್ಣ ಕುಮಾರ್ ಅವರ ಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ಬಂದಿತ್ತು. ಹೈಕೋರ್ಟ್‌ ನಿರ್ದೇಶನದಂತೆ ಅವರ ಪರ ವಕೀಲರು ಶನಿವಾರ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಮನೆ ಊಟಕ್ಕೆ ಮನವಿ ಮಾಡಲಿದ್ದಾರೆ.

Home Food For Actor Darshan Application To Filed Before Magistrate Court

ಕೆಲ ಕಾಲ ದರ್ಶನ್‌ ಮತ್ತು ಸರ್ಕಾರದ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರು ತಮ್ಮ ಮನವಿ ಕುರಿತಂತೆ ಶನಿವಾರವೇ (ಜುಲೈ 20) ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ ಅರ್ಜಿ ಸಲ್ಲಿಸಬೇಕು. ಆ ಕುರಿತಂತೆ ಒಂದು ವಾರದ (ಜುಲೈ 27) ಒಳಗೆ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ವಿಚಾರಣೆ ನಡೆಸಿ, ನಿರ್ಧಾರ ಪ್ರಕಟಿಸಬೇಕು ಎಂದು ನಿರ್ದೇಶಿಸಿ ವಿಚಾರಣೆಯನ್ನು ಜುಲೈ 29ಕ್ಕೆ ಮುಂದೂಡಿತು.

ಕಾನೂನಿನಲ್ಲಿ ಅವಕಾಶ: ದರ್ಶನ್‌ ಪರ ಹಿರಿಯ ವಕೀಲ ಕೆ. ಎನ್‌. ಫಣೀಂದ್ರ ವಾದ ಮಂಡಿಸಿ, ಕರ್ನಾಟಕ ಬಂಧೀಖಾನೆ ಕಾಯ್ದೆ-1963ರ ಸೆಕ್ಷನ್ 30ರ ಪ್ರಕಾರ ವಿಚಾರಣಾಧೀನ ಕೈದಿ ಮನೆ ಊಟ ಮತ್ತು ಇತ್ಯಾದಿ ಸಲವತ್ತು ಪಡೆಯುವುದಕ್ಕೆ ಯಾವುದೇ ನಿರ್ಬಂಧವಿಲ್ಲ.

2022ರ ಕಾರಾಗೃಹ ಕೈಪಿಡಿಯ ಪ್ಯಾರಾ 295ರಲ್ಲಿ ಹೇಳಿರುವಂತೆ ವಿಚಾರಣಾಧೀನ ಕೈದಿ ಮನೆ ಊಟ, ಹಾಸಿಗೆ, ಊಟದ ಪರಿಕರ ಹಾಗೂ ದಿನಪತ್ರಿಕೆ ಪಡೆಯಲು ಅವಕಾಶವಿದೆ. ಅದರಂತೆ ದರ್ಶನ್‌ ಸಹ ಮನೆಯಿಂದ ಊಟ ಹಾಗೂ ಇನ್ನಿತರ ಸವಲತ್ತು ಪಡೆಯಲು ಅರ್ಹರಿದ್ದಾರೆ ಎಂದು ವಾದಿಸಿದರು.

ಫುಡ್ ಪಾಯಿಸನ್ ಆಗಿಲ್ಲ: ಸರ್ಕಾರದ ಪರವಾಗಿ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಭಾನು ಪ್ರಕಾಶ್‌ ವಾದ ಮಂಡಿಸಿ, ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ 5 ಸಾವಿರ ಕೈದಿಗಳು ದಿನವೂ ಊಟ ಮಾಡುತ್ತಿದ್ದಾರೆ. ಬೇರೆ ಯಾವುದೇ ಕೈದಿಗೂ ಫುಡ್ ಪಾಯಿಸನ್‌ ಆಗಿಲ್ಲ. ದರ್ಶನ್‌ ಸಹ ಫುಡ್ ಪಾಯಿಸನ್‌ ಆಗಿರುವ ಬಗ್ಗೆ ವೈದ್ಯರಿಗೆ ಹೇಳಿಲ್ಲ ಎಂದು ಆಕ್ಷೇಪಿಸಿದರು.

ಅಂತಿಮವಾಗಿ ನ್ಯಾಯಮೂರ್ತಿಗಳು, ಕರ್ನಾಟಕ ಬಂಧೀಖಾನೆ ಕಾಯ್ದೆ-1963ರ ಸೆಕ್ಷನ್ 30ರ ಅಡಿಯಲ್ಲಿ ಮನೆಯಿಂದ ಊಟ ಪಡೆಯಲು ವಿಚಾರಣಾಧೀನ ಕೈದಿಗೆ ಅವಕಾಶವಿದೆ ಎಂದು ಆದೇಶ ನೀಡಿದರೆ, ಅದು ಎಲ್ಲಾ ಕೈದಿಗಳಿಗೆ ಹಕ್ಕು ಆಗಿಬಿಡುತ್ತದೆ.

ವಿಚಾರಣಾಧೀನ ಕೈದಿಗಳಿಗೆ ಮನೆ ಊಟ ಪಡೆಯುವುದು ಮೂಲಭೂತ ಹಕ್ಕಾಗುತ್ತದೆಯೇ ಎಂಬ ಬಗ್ಗೆ ಕಾನೂನುಗಳ ಪರಾಮರ್ಶೆ ಅಗತ್ಯವಿದೆ. ಹೈಕೋರ್ಟ್‌ ನೀಡುವ ತೀರ್ಪು ಇತರೆ ಕೈದಿಗಳಿಗೆ ಅನ್ವಯವಾಗುತ್ತದೆ. ಹಾಗಾಗಿ, ಪ್ರಕರಣದಲ್ಲಿ ನಾನು ಮಧ್ಯಂತರ ಆದೇಶ ನೀಡುವುದಿಲ್ಲ. ಸಂಪೂರ್ಣ ವಾದ ಮಂಡನೆ ಆಲಿಸಿದ ನಂತರವೇ ಅಂತಿಮ ತೀರ್ಮಾನ ಕೈಗೊಳ್ಳುತ್ತೇನೆ. ಅದಕ್ಕೆ ಮತ್ತಷ್ಟು ಕಾಲಾವಕಾಶ ಬೇಕಾಗುತ್ತದೆ ಎಂದು ತಿಳಿಸಿದರು.

ಹೈಕೋರ್ಟ್‌ ಪ್ರಕರಣದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವರೆಗೆ ಪರ್ಯಾಯವಾಗಿ ಅರ್ಜಿದಾರರು ತಮ್ಮ ಮನವಿ ಕುರಿತಂತೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಮ್ಯಾಜಿಸ್ಟ್ರೇಟ್ ಮುಂದೆಯೇ ಅರ್ಜಿ ಸಲ್ಲಿಸುವುದು ಸೂಕ್ತ.

ಅದರಂತೆ ಅವರು ಶನಿವಾರವೇ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಅರ್ಜಿ ಸಲ್ಲಿಸಬಹುದು. ಸೋಮವಾರ ಸರ್ಕಾರ ಆಕ್ಷೇಪಣೆ ಸಲ್ಲಿಸಲಿ. ಅರ್ಜಿದಾರರ ಮನವಿ ಕುರಿತು ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಜುಲೈ 27ರ ಒಳಗೆ ತೀರ್ಮಾನ ಕೈಗೊಳ್ಳಬೇಕು ಎಂದು ನ್ಯಾಯಮೂರ್ತಿಗಳು ಸೂಚಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+