ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ದೇವೇಗೌಡ ಆಪ್ತ ಎಚ್.ಕೆ.ಕುಮಾರಸ್ವಾಮಿ ನೇಮಕ
Recommended Video
ಬೆಂಗಳೂರು, ಜುಲೈ 04: ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾಗಿ ಸಕಲೇಶಪುರ ಶಾಸಕ ಎಚ್.ಕೆ.ಕುಮಾರಸ್ವಾಮಿ ಅವರು ನೇಮಕಗೊಂಡಿದ್ದಾರೆ.
ಕಾರ್ಯಾಧ್ಯಕ್ಷ ಸ್ಥಾನಕ್ಕೆ ಮಧು ಬಂಗಾರಪ್ಪ ನೇಮಕಗೊಂಡಿದ್ದಾರೆ. ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷರಾಗಿ ನಿಖಿಲ್ ಕುಮಾರಸ್ವಾಮಿ ಅವರನ್ನು ನೇಮಿಸಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಅವರು ಆದೇಶ ಹೊರಡಿಸಿದ್ದಾರೆ.
ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ ಎಚ್.ವಿಶ್ವನಾಥ್ ಅವರ ರಾಜೀನಾಮೆ ಇಂದ ಸ್ಥಾನ ತೆರವಾಗಿತ್ತು. ಬಹು ದಿನಗಳ ನಂತರ ಇಂದು ದೇವೇಗೌಡ ಅವರು ರಾಜ್ಯಾಧ್ಯಕ್ಷ, ಕಾರ್ಯಾಧ್ಯಕ್ಷರನ್ನು ಆಯ್ಕೆ ಮಾಡಿದ್ದಾರೆ.
ಮಾಜಿ ಸಚಿವರಾದ ಎನ್.ಎಂ.ನಬಿ ಹಾಗೂ ಶಾಸಕ ಗೋಪಾಲಯ್ಯ ಅವರನ್ನು ಜೆಡಿಎಸ್‌ನ ಹಿರಿಯ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಹನೂರು ಆರ್.ಮಂಜುನಾಥ್ ಅವರನ್ನು ಜೆಡಿಎಸ್‌ನ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ನೂರ್ ಅಹ್ಮದ್ ಯುವ ಘಟಕದ ಕಾರ್ಯಾಧ್ಯಕ್ಷ
ಜೆಡಿಎಸ್ ಯುವ ಘಟಕದ ಕಾರ್ಯಾಧ್ಯಕ್ಷರಾಗಿ ನೂರ್ ಅಹ್ಮದ್ ಅವರನ್ನು ನೇಮಕ ಮಾಡಲಾಗಿದೆ. ಯುವ ಘಟಕದ ಮಹಾಪ್ರಧಾನ ಕಾರ್ಯದರ್ಶಿಯಾಗಿ ಶರಣ್ ಗೌಡ ಕುಂದನೂರ್, ಹಿರಿಯ ಉಪಾಧ್ಯಕ್ಷರಾಗಿ ನರಸಿಂಹಮೂರ್ತಿ ಅವರನ್ನು ನೇಮಿಸಲಾಗಿದೆ.

ರಾಜ್ಯ ಬೂತ್ ಸಮಿತಿ ಅಧ್ಯಕ್ಷ ಸಿ.ಬಿ.ಸುರೇಶ್ ಬಾಬು
ರಾಜ್ಯ ಬೂತ್ ಸಮಿತಿ ಅಧ್ಯಕ್ಷರಾಗಿ ಸಿ.ಬಿ.ಸುರೇಶ್ ಬಾಬು ಅವರನ್ನು, ಜೆಡಿಎಸ್ ರಾಜ್ಯ ಅಲ್ಪ ಸಂಖ್ಯಾತರ ವಿಭಾಗದ ಅಧ್ಯಕ್ಷರನ್ನಾಗಿ ನಾಸೀರ್ ಭಗವಾನ್ ಅವರನ್ನು ನೇಮಕ ಮಾಡಿ ದೇವೇಗೌಡ ಅವರು ಆದೇಶ ಹೊರಡಿಸಿದ್ದಾರೆ.

ಹಲವು ಹೆಸರುಗಳು ಕೇಳಿ ಬಂದಿದ್ದವು
ರಾಜ್ಯಾಧ್ಯಕ್ಷ ಸ್ಥಾನಕ್ಕೆ ವೈಎಸ್‌ವಿ.ದತ್ತ, ನಿಖಿಲ್ ಕುಮಾರಸ್ವಾಮಿ, ಬಸರವಾಜ ಹೊರಟ್ಟಿ, ಮಧು ಬಂಗಾರಪ್ಪ ಅವರ ಹೆಸರುಗಳು ಕೇಳಿಬಂದಿತ್ತು. ದೇವೇಗೌಡ ಅವರು ಎಸ್‌ಸಿ ಸಮುದಾಯಕ್ಕೆ ಸೇರಿದ ಎಚ್.ಕೆ.ಕುಮಾರಸ್ವಾಮಿ ಅವರ ಹೆಸರನ್ನು ಅಂತಿಮಗೊಳಿಸಿದ್ದಾರೆ.

ದೇವೇಗೌಡರ ಆಶೀರ್ವಾದ ಪಡೆದ ನಿಖಿಲ್ ಕುಮಾರಸ್ವಾಮಿ
ಇಂದು ನಡೆದ ಕಾರ್ಯಕ್ರಮದಲ್ಲಿ ವಿಶ್ವನಾಥ್ ಅವರು ಎಚ್.ಕೆ.ಕುಮಾರಸ್ವಾಮಿ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು. ದೇವೇಗೌಡ ಅವರು ಶಾಲು ಹೊದಿಸಿ, ಹಾರ ಹಾಕಿ ಕುಮಾರಸ್ವಾಮಿ ಅವರಿಗೆ ಅಭಿನಂದಿಸಿದರು. ಯುವ ಘಟಕದ ಅಧ್ಯಕ್ಷರಾಗಿ ಆಯ್ಕೆ ಆಗಿರುವ ನಿಖಿಲ್ ಕುಮಾರಸ್ವಾಮಿ ಅವರು, ತಾತ ದೇವೇಗೌಡ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು.

ಸಂಕಷ್ಟದ ಸ್ಥಿತಿಯಲ್ಲಿ ಜೆಡಿಎಸ್
ಲೋಕಸಭೆ ಚುನಾವಣೆಯಲ್ಲಿ ಅತ್ಯಂತ ಹೀನಾಯವಾಗಿ ನೆಲಕಚ್ಚಿರುವ ಜೆಡಿಎಸ್ ಪಕ್ಷವು ಬಹುತೇಕ ನೆಲಕಚ್ಚಿದ ಪರಿಸ್ಥಿತಿಯಲ್ಲಿದೆ, ಇಂತಹಾ ಸಂಕಷ್ಟದ ಪರಿಸ್ಥಿತಿಯಲ್ಲಿ ಎಚ್.ಕೆ.ಕುಮಾರಸ್ವಾಮಿ ಅವರು ರಾಜ್ಯಾಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಅವರ ಹೆಗಲ ಮೇಲೆ ಬಹುದೊಡ್ಡ ಜವಾಬ್ದಾರಿ ಇದೆ.












Click it and Unblock the Notifications