ಹಿಜಾಬ್ ಇಸ್ಲಾಂ ಅತ್ಯಗತ್ಯ ಧಾರ್ಮಿಕ ಆಚರಣೆ ಎಂಬುದಕ್ಕೆ ಪುರಾವೆ ಇಲ್ಲ: ಅಡ್ವೊಕೇಟ್ ಜನರಲ್
ಬೆಂಗಳೂರು, ಫೆ.21: ''ಹಿಜಾಬ್ ಧರಿಸುವುದು ಇಸ್ಲಾಂನ ಅತ್ಯಗತ್ಯ ಧಾರ್ಮಿಕ ಆಚರಣೆ ಎಂಬುದಕ್ಕೆ ಅರ್ಜಿದಾರರು ಯಾವುದೇ ಪುರಾವೆ ನೀಡಿಲ್ಲ,'' ಎಂದು ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ ಹೈಕೋರ್ಟ್‌ನಲ್ಲಿ ಸೋಮವಾರ ಪ್ರಬಲ ವಾದ ಮಂಡಿಸಿದರು.
ಸಮವಸ್ತ್ರದ ಜತೆ ಹಿಜಾಬ್‌ಗೆ ಅನುಮತಿ ಕೋರಿ ಸಲ್ಲಿಸಿರುವ ಅರ್ಜಿಗಳ ಕುರಿತು ಸಿಜೆ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್, ನ್ಯಾ.ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಅವರಿದ್ದ ಪೂರ್ಣ ಪೀಠ ಸುಮಾರು ಎರಡು ಗಂಟೆಗಳ ವಾದ ಆಲಿಸಿದ ಬಳಿಕ ವಿಚಾರಣೆಯನ್ನು ಮಂಗಳವಾರ ಮಧ್ಯಾಹ್ನಕ್ಕೆ ಮುಂದೂಡಿತು.
ಸರಕಾರದ ಪರ ಪ್ರಬಲ ವಾದ ಮಂಡಿಸಿದ, ಹಿಜಾಬ್ ಧರಿಸುವುದು ಇಸ್ಲಾಂನ ಭಾಗ ಹೇಗಾಯಿತು, ಅದು ಧರ್ಮ ಹುಟ್ಟಿದಂದಿನಿಂದ ಇದೆಯೇ ಅಥವಾ ಆನಂತರ ಆರಂಭವಾಯಿತೇ ಎಂಬುದು ಸೇರಿದಂತೆ ಯಾವುದೇ ಮಾಹಿತಿಯನ್ನು ಅರ್ಜಿದಾರರು ನ್ಯಾಯಾಲಯಕ್ಕೆ ನೀಡಿಲ್ಲ ಮತ್ತು ಅದು ಅಗತ್ಯ ಧಾರ್ಮಿಕ ಪದ್ದತಿ ಎಂಬುದನ್ನೂ ಸಹ ನಿರೂಪಿಸಿಲ್ಲ ಎಂದರು.
ಬಾಬ್ರಿ ಮಸೀದಿ ಪ್ರಕರಣದಲ್ಲಿ ಮಸೀದಿಯಲ್ಲಿ ಪ್ರಾರ್ಥನೆ ಮಾಡುವುದು ಧರ್ಮದ ಅಗತ್ಯ ಆಚರಣೆ ಎಂಬ ವಾದವನ್ನು ತಿರಸ್ಕರಿಸಿದೆ. ಅರ್ಜಿದಾರರು ಖುರಾನ್ ಉಲ್ಲೇಖಿಸಿದ್ದಾರೆ, ಆದರೆ ಅದಕ್ಕೆ ಪುರಾವೆಯನ್ನು ತೋರಿಸಿಲ್ಲ. ನಾಲ್ಕು ಪ್ರಕರಣಗಳಲ್ಲಿ ಖುರಾನ್ ಉಲ್ಲೇಖಿಸಲಾಗಿದೆ, ಅವುಗಳೆಲ್ಲದರಲ್ಲೂ ಸುಪ್ರೀಂಕೋರ್ಟ್ ವಾದವನ್ನು ತಿರಸ್ಕರಿಸಿದೆ, ಖುರೇಷಿ ಪ್ರಕರಣ, ಸಾಯಿರಾಬಾನು ಪ್ರಕರಣ, ತ್ರಿವಳಿ ತಲಾಖ್ ನಿಷೇಧ ಪ್ರಕರಣಗಳನ್ನು ಉಲ್ಲೇಖಿಸಿದ ಎಜಿ ಅವುಗಳೆಲ್ಲಾ ಖುರಾನ್ ಉಲ್ಲೇಖಿಸಲಾಗಿದೆ, ಆದರೆ ಆ ವಾದವನ್ನು ಕೋರ್ಟ್‌ಗಳು ಒಪ್ಪಿಲ್ಲ ಎಂದರು.

''ಮೂಲಭೂತ ಆಚರಣೆಗಳಷ್ಟೇ ಅತ್ಯಗತ್ಯ ಆಚರಣೆಗಳು. ಆ ಆಚರಣೆಗಳಿಲ್ಲದಿದ್ದರೆ ಧರ್ಮದ ಅಸ್ತಿತ್ವಕ್ಕೆ ಧಕ್ಕೆಯಾಗುವಂತಿರಬೇಕು. ಅಂತಹ ಆಚರಣೆಗಳಷ್ಟೇ ಅತ್ಯಗತ್ಯ ಆಚರಣೆಗಳು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಆಚರಣೆ ಇಲ್ಲವಾದರೆ ಧರ್ಮವೇ ಕಣ್ಮರೆಯಾಗುವಂತಿರಬೇಕು. ಆ ಆಚರಣೆಯೇ ಆ ಧರ್ಮಕ್ಕೆ ಬುನಾದಿಯಂತಿರಬೇಕು,'' ಎಂದು ಎಜಿ ಪ್ರತಿಪಾದಿಸಿದರು.
ಕೋರ್ಟ್‌ನಿಂದ ಘೋಷಣೆ ಬಯಕೆ: ಅರ್ಜಿದಾರರು ಕೋರ್ಟ್ ಇಸ್ಲಾಂ ಧರ್ಮವನ್ನು ಅನುಸರಿಸುವ ಎಲ್ಲ ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸಬೇಕೆಂದು ಘೋಷಣೆ ಮಾಡಬೇಕೆಂದು ಬಯಸಿದ್ದಾರೆ. ಹಾಗೆ ಮಾಡಿದರೆ ಆ ಘೋಷಣೆಯನ್ನು ಎಲ್ಲ ಮುಸ್ಲಿಂ ಮಹಿಳೆಯರು ಕಡ್ಡಾಯವಾಗಿ ಪಾಲಿಸಲೇಬೇಕಾಗುತ್ತದೆ ಎಂದು ಪ್ರಭುಲಿಂಗ ನಾವದಗಿ ಹೇಳಿದರು.
ಕಾಲೇಜುಗಳಿಗೆ ಅಧಿಕಾರ: ಸರ್ಕಾರದ ಆದೇಶದ ಬಗ್ಗೆ ಒಂದು ಸ್ಪಷ್ಟನೆ ಬೇಕಿದೆ. ಹಿಜಾಬ್ ಬಗ್ಗೆ ಸರ್ಕಾರ ಯಾವುದೇ ನಿರ್ದೇಶನ ನೀಡಿಲ್ಲ, ಸಮವಸ್ತ್ರ ಕುರಿತಂತೆ ಮಾತ್ರ ಸೂಚನೆ ನೀಡಲಾಗಿದೆ. ಇದು ಸರ್ಕಾರದ ನಿಲುವು ಅಲ್ಲವೇ ಎಂದು ಸಿಜೆ ಪ್ರಶ್ನಿಸಿದರು.
ಅದಕ್ಕೆ ಉತ್ತರಿಸಿದ ಎಜಿ, ಸರ್ಕಾರ ಶಿಕ್ಷಣ ಸಂಸ್ಥೆಗಳಿಗೆ ಸ್ವಾತಂತ್ರ್ಯ ನೀಡಿದೆ. ಸಮವಸ್ತ್ರದ ಬಗ್ಗೆ ಶಿಕ್ಷಣ ಸಂಸ್ಥೆ ನಿರ್ಧರಿಸಲಿದೆ. ಸರ್ಕಾರ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಿಲ್ಲ. ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರಣೆಯೇ ನಿರ್ಧರಿಸಬೇಕು. ಸಂಪೂರ್ಣ ವಿವಾದವೇ ಹಿಜಾಬ್‌ನ ಕುರಿತಾಗಿ ಉದ್ಭವಿಸಿದೆ. ಉಡುಪಿ ಕಾಲೇಜಿನ ಸಮಿತಿ ಹಿಜಾಬ್ ನಿರ್ಬಂಧಿಸಿದೆ. ಹೀಗಾಗಿ ಹೈಕೋರ್ಟ್ ಈ ಬಗ್ಗೆ ತೀರ್ಮಾನ ನೀಡುವ ಅಗತ್ಯವಿದೆ ಎಂದು ಎಜಿ ಪ್ರಭುಲಿಂಗ್ ನಾವದಗಿ ತಿಳಿಸಿದ್ದಾರೆ.
ಧಾರ್ಮಿಕ ಆಚರಣೆ, ಆತ್ಮಸಾಕ್ಷಿಯ ಆಚರಣೆಯಾಗುವುದೇ ಎಂದು ಸರ್ಕಾರಕ್ಕೆ ನ್ಯಾ.ಖಾಜಿ ಜೈಬುನ್ನೀಸಾ ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಎಜಿ, ಆತ್ಮಸಾಕ್ಷಿಯ ಅಭಿವ್ಯಕ್ತಿ ಅದು ಧಾರ್ಮಿಕವೇ ಅಲ್ಲವೇ ನಿರ್ಧರಿಸುತ್ತದೆ ಎಂದು ವಿವರಿಸಿದರು.
ಧಾರ್ಮಿಕ ಚಟುವಟಿಕೆಗಳಿಗೆ ಸಂವಿಧಾನ ರಕ್ಷಣೆಯಿಲ್ಲ: ವೆಂಕಟರಮಣ ದೇವರು ಪ್ರಕರಣದಲ್ಲಿಯೂ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಗೌಡ ಸಾರಸ್ವತ ಬ್ರಾಹ್ಮಣರ ಪೂಜೆಯ ಅಧಿಕಾರದ ಬಗ್ಗೆಯೂ ತೀರ್ಪಿದೆ. ಹೀಗಾಗಿ ಆಹಾರ, ಉಡುಪು ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ. ಈ ಬಗ್ಗೆಯೂ ಒಂದು ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಎಲ್ಲಾ ಧಾರ್ಮಿಕ ಚಟುವಟಿಕೆಗಳಿಗೂ ಸಂವಿಧಾನದ ರಕ್ಷಣೆಯಿಲ್ಲ ಎಂದು ಅಡ್ವೋಕೇಟ್ ಜನರಲ್ ಸುಪ್ರೀಂಕೋರ್ಟ್ ತೀರ್ಪು ಉಲ್ಲೇಖಿಸಿದರು.












Click it and Unblock the Notifications