ಹಿಜಾಬ್ ವಿವಾದ: ಹೈಕೋರ್ಟ್‌ನಿಂದ ಹೊರಬಿದ್ದ ಮಧ್ಯಂತರ ಆದೇಶದಲ್ಲಿ ಏನಿದೆ?
ಬೆಂಗಳೂರು, ಫೆ.11: ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಗುರುವಾರ ವಿಚಾರಣೆ ನಡೆಸಿದ್ದ ಹೈಕೋರ್ಟ್ ತ್ರಿಸದಸ್ಯಪೀಠ ಮೌಖಿಕವಾಗಿ ಉಲ್ಲೇಖಿಸಿದ್ದ ಅಂಶಗಳನ್ನೇ ಒಳಗೊಂಡ ಅಧಿಕೃತ ಮಧ್ಯಾಂತರ ಆದೇಶವನ್ನು ಹೊರಡಿಸಿದೆ.
ಅದರಲ್ಲಿ ವಿಚಾರಣೆ ವೇಳೆ ಇಂಗಿತ ವ್ಯಕ್ತಪಡಿಸಿದ್ದಂತೆ ನ್ಯಾಯಪೀಠ, ಹೈಕೋರ್ಟ್ ಈ ಕುರಿತು ಅಂತಿಮ ಆದೇಶ ನೀಡುವವರೆಗೆ ವಿದ್ಯಾರ್ಥಿಗಳಿಗೆ ಶಾಲು, ಸ್ಕಾರ್ಫ್, ಹಿಜಾಬ್ ಸೇರಿದಂತೆ ಯಾವುದೇ ಧಾರ್ಮಿಕ ಸಂಕೇತಗಳನ್ನು ಧರಿಸಿ ಕಾಲೇಜಿಗೆ ಬರುವುದಕ್ಕೆ ನಿರ್ಬಂಧ ವಿಧಿಸಿದೆ.
ಗುರುವಾರ ನಡೆದ ವಿಚಾರಣೆ ವೇಳೆ ನಡೆದ ವಾದ-ಪ್ರತಿವಾದಗಳನ್ನು 7 ಪುಟಗಳ ಆದೇಶದಲ್ಲಿ ಉಲ್ಲೇಖಿಸಿರುವ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿಗಳಾದ ಕೃಷ್ಣ ಎಸ್ ದೀಕ್ಷಿತ್ ಮತ್ತು ನ್ಯಾ. ಖಾಜಿ ಜೈಬುನ್ನೀಸಾ ಅವರಿದ್ದ ತ್ರಿಸದಸ್ಯಪೀಠ, ಸೋಮವಾರ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ಹೇಳಿದೆ.

ಆದೇಶದಲ್ಲಿ ಏನಿದೆ?
"ಮೊದಲಿಗೆ ವಿಷಯ ನ್ಯಾಯಾಲಯದ ಮುಂದಿರುವಾಗ ಮತ್ತು ಮಹತ್ವದ ಸಾಂವಿಧಾನಿಕ ವಿಚಾರಗಳ ಬಗ್ಗೆ ಹಾಗೂ ಕಾನೂನಾತ್ಮಕ ಅಂಶಗಳ ಬಗ್ಗೆ ಗಂಭೀರವಾಗಿ ಚರ್ಚೆ ನಡೆಯುತ್ತಿರುವಾಗ ಕಳೆದ ಕೆಲವು ದಿನಗಳಿಂದ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಹಾಗೂ ಸಂಸ್ಥೆಗಳನ್ನು ಮುಚ್ಚಿರುವ ವಿಚಾರ ನೋವು ತಂದಿದೆ. ನಮ್ಮ ದೇಶ ಹಲವು ಸಂಸ್ಕೃತಿ, ಧರ್ಮ ಮತ್ತು ಭಾಷೆಗಳನ್ನು ಒಳಗೊಂಡಿರುವುದಾಗಿ ಎಂಬುದನ್ನು ಇಲ್ಲಿ ಉಲ್ಲೇಖಿಸಬೇಕಾಗಿದೆ''ಎಂದು ಕಳವಳ ವ್ಯಕ್ತಪಡಿಸಿದೆ.
"ನಮ್ಮದು ನಾಗರಿಕ ಸಮಾಜ. ಧರ್ಮ, ಸಂಸ್ಕೃತಿ ಹೆಸರಲ್ಲಿ ಶಾಂತಿ, ಸಾಮರಸ್ಯಕ್ಕೆ ಧಕ್ಕೆ ಸರಿಯಲ್ಲ. ಯಾವುದೇ ವ್ಯಕ್ತಿಗೆ ಇಂತಹ ಕೃತ್ಯ ನಡೆಸಲು ಅವಕಾಶವಿಲ್ಲ. ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಧರ್ಮ ಪಾಲನೆಗೆ ಅವಕಾಶವಿದೆ. ಆದರೆ ಆ ಹಕ್ಕು ಸಂಪೂರ್ಣವಲ್ಲ, ಭಾರತೀಯ ಸಂವಿಧಾನದಲ್ಲಿ ಕೆಲವೊಂದು ಅರ್ಥಪೂರ್ಣ ನಿಯಂತ್ರಣಗಳನ್ನು ಒಡ್ಡಬೇಕಾಗುತ್ತದೆ. ಆ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಹಾಗೂ ಹಲವು ಹೈಕೋರ್ಟ್ ಗಳ ಆದೇಶಗಳನ್ನು ಪರಾಮರ್ಶಿಸಬೇಕಾಗುತ್ತದೆ, ಅವುಗಳ ಬಗ್ಗೆ ಗಂಭೀರವಾಗಿ ಪರಿಶೀಲಿಸಬೇಕಾಗಿದೆ'' ಎಂದು ನ್ಯಾಯಾಲಯ ಹೇಳಿದೆ.
ಶಾಂತಿ ಸುವ್ಯವಸ್ಥೆ ಕಾಯ್ದುಕೊಳ್ಳಿ: "ತಡೆಯಿರದ ಪ್ರತಿಭಟನೆಗಳಿಂದ ಶಾಲಾ-ಕಾಲೇಜುಗಳು ಬಂದ್ ಆಗಬಾರದು. ಶಿಕ್ಷಣ ಸಂಸ್ಥೆಗಳು ಅನಿರ್ದಿಷ್ಟ ಕಾಲ ಬಂದ್ ಆಗುವುದು ಸಂತೋಷದ ವಿಷಯಲ್ಲ. ಈ ಪ್ರಕರಣದ ವಿಚಾರಣೆಯನ್ನು ತುರ್ತು ಆಧಾರದ ಮೇಲೆ ನಡೆಸಲಾಗುವುದು, ಶೈಕ್ಷಣಿಕ ವರ್ಷವನ್ನು ವಿಳಂಬಿಸುವುದರಿಂದ ವಿದ್ಯಾರ್ಥಿಗಳ ಹಿತಕ್ಕೆ ಧಕ್ಕೆಯಾಗುತ್ತದೆ. ಪ್ರಸಕ್ತ ಶೈಕ್ಷ ಕ್ಷಣಿಕ ವರ್ಷ ಇನ್ನೇನು ಅಂತ್ಯವಾಗುತ್ತಿದೆ. ಸಂಬಂಧಪಟ್ಟವರೆಲ್ಲಾ ಶಾಂತಿ ಸುವ್ಯವಸ್ಥೆಯನ್ನು ಕಾಯ್ದುಕೊಳ್ಳಬೇಕು. ಹೀಗಾಗಿ ಶಿಕ್ಷಣ ಸಂಸ್ಥೆ ತೆರೆದು ವಿದ್ಯಾರ್ಥಿಗಳು ಮರಳಲು ಅವಕಾಶ ನೀಡುವಂತೆ ರಾಜ್ಯ ಸರ್ಕಾರ ಮತ್ತು ಸಂಬಂಧಪಟ್ಟವರಿಗೆ ಈ ಮೂಲಕ ಮನವಿ ಮಾಡುತ್ತಿದ್ದೇವೆ'' ಎಂದು ನ್ಯಾಯಪೀಠ ಹೇಳಿದೆ.
"ಈ ಹಿನ್ನೆಲೆಯಲ್ಲಿ ಸರ್ಕಾರ ಆದಷ್ಟು ಬೇಗ ಶಾಲಾ-ಕಾಲೇಜುಗಳನ್ನು ಪುನಾರಂಭಿಸಬೇಕು ಮತ್ತು ಶೀಘ್ರ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಮರಳು ಅವಕಾಶ ಕಲ್ಪಿಸಿಕೊಡಬೇಕು. ಎಲ್ಲಾ ವಿದ್ಯಾರ್ಥಿಗಳಿಗೂ ನಾವು ನಿರ್ಬಂಧ ಹೇರುತ್ತಿದ್ದೇವೆ. ತಮ್ಮ ಧರ್ಮಾನುಸಾರ ಕೇಸರಿ ಶಾಲು ಸ್ಕಾರ್ಫ್, ಹಿಜಾಬ್ ಅಥವಾ ಯಾವುದೇ ಧಾರ್ಮಿಕ ಸಂಕೇತಗಳನ್ನಾಗಲೀ ತರಗತಿಯೊಳಗೆ ತರುವಂತಿಲ್ಲ. ಮುಂದಿನ ಆದೇಶದವರೆಗೂ ಇವುಗಳಿಗೆ ನಿರ್ಬಂಧ ವಿಧಿಸುತ್ತಿದ್ದೇವೆ'' ಎಂದು ತ್ರಿಸದಸ್ಯಪೀಠ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.












Click it and Unblock the Notifications