Government employee: ಪಿಂಚಣಿದಾರರ ಬಗ್ಗೆ ಸರ್ಕಾರಕ್ಕೆ ಸಲಹೆ
ಬೆಂಗಳೂರು, ಫೆಬ್ರವರಿ 15: ಹಲವು ವರ್ಷಗಳ ಕಾಲ ಸರ್ಕಾರದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರನ್ನು ಸರ್ಕಾರ ಸಹಾನುಭೂತಿಯಿಂದ ನಡೆಸಿಕೊಳ್ಳಬೇಕು ಎಂದು ಕರ್ನಾಟಕ ಹೈಕೋರ್ಟ್ ಕಿವಿ ಮಾತು ಹೇಳಿದೆ.
ಅಲ್ಲದೆ, ಕನ್ನಡ ಮಾಧ್ಯಮದಲ್ಲಿ ಎಸ್‌ಎಸ್‌ಎಲ್‌ಸಿವರೆಗೂ ಅಧ್ಯಯನ ಮಾಡಿದ ಸರ್ಕಾರಿ ನೌಕರರಿಗೆ ನೀಡಬೇಕಾದ ಒಂದು ಅವಧಿಯ ವೇತನ ಹೆಚ್ಚಳ (ಇಂಕ್ರಿಮೆಂಟ್)ಅನ್ನು ನಿರಾಕರಿಸಿದ್ದ ಸರ್ಕಾರದ ಕ್ರಮಕ್ಕೆ ನ್ಯಾಯಾಲಯ ತೀವ್ರ ಬೇಸರ ಹೊರಹಾಕಿದೆ. ಜತೆಗೆ ಪಿಂಚಣಿದಾರರನ್ನು ರಾಜ್ಯ ಸರ್ಕಾರ ಸಹಾನುಭೂತಿ ಮತ್ತು ನೋವಿಲ್ಲದಂತೆ ನಡೆಸಿಕೊಳ್ಳಬೇಕಾಗುತ್ತದೆ ಎಂದು ತಾಕೀತು ಮಾಡಿದೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ನಿವೃತ್ತ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿರುವ ಸೀತಾಲಕ್ಷ್ಮಿ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್ ಮತ್ತು ಜಿ. ಬಸವರಾಜ ಅವರಿದ್ದ ವಿಭಾಗೀಯ ಪೀಠ, 2018ರ ಫೆಬ್ರವರಿಯಿಂದ ಜಾರಿಗೆ ಬರುವಂತೆ ಅರ್ಜಿದಾರರಿಗೆ ಮುಂದಿನ ಮೂರು ತಿಂಗಳ ಒಳಗಾಗಿ ಒಂದು ಬಾರಿ ವೇತನ ಹೆಚ್ಚಳ (ಇಕ್ರಿಮೆಂಟ್) ಮಂಜೂರು ಮಾಡುವಂತೆ ಮತ್ತು ಹೆಚ್ಚಳದ ಬಾಕಿ ಮೊತ್ತವನ್ನು ಪಾವತಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಿದೆ.

ಈ ಆದೇಶ ಜಾರಿಯಲ್ಲಿ ವಿಫಲವಾದಲ್ಲಿ, ವಿಳಂಬವಾದ ಪ್ರತಿ ತಿಂಗಳಿಗೆ ಶೇ.2 ದರದಲ್ಲಿ ಬಡ್ಡಿ ಸೇರಿಸಿ ಪಾವತಿಸಬೇಕು. ಆ ಬಡ್ಡಿ ಮೊತ್ತವನ್ನು ತಕ್ಷಣಕ್ಕೆ ಸರ್ಕಾರ ಪಾವತಿ ಮಾಡಬೇಕು. ಬಳಿಕ ಇದಕ್ಕೆ ಕಾರಣವಾದ ಅಧಿಕಾರಿಯಿಂದ ಸರ್ಕಾರ ವಸೂಲಿ ಮಾಡಿಕೊಳ್ಳಬೇಕು ಎಂದು ನ್ಯಾಯಪೀಠ ಹೇಳಿದೆ.
ಅರ್ಜಿದಾರರು 2008ರ ಸೆಪ್ಟೆಂಬರ್ 24 ರಿಂದ 2019ರ ಅಕ್ಟೋಬರ್ 31 ರವರೆಗೆ ಕಳಂಕ ರಹಿತ ಸೇವಾ ಉದ್ಯೋಗಿಯಾಗಿ ಕೆಲಸ ಮಾಡಿದ್ದಾರೆ. ಅವರು ಅದನ್ನು ಪ್ರಾಥಮಿಕ ಶಾಲಾ ಶಿಕ್ಷಕಿ ಎಂಬ ಅತ್ಯಂತ ವಿನಮ್ರ ಹುದ್ದೆಯಲ್ಲಿ ಸೇವೆ ಮಾಡಿದ್ದಾರೆ. ಬಹುಶಃ ಅವರು ಸರ್ಕಾರಿ ಶಾಲೆಯಲ್ಲಿ ತಾಯಿಯಾಗಿ ಅನೇಕ ಮಕ್ಕಳ ಭವಿಷ್ಯ ರೂಪಿಸಿದ್ದಾರೆ. ಅಲ್ಲದೆ, ಜೀವನದ ಇಳಿ ಸಂಜೆ ವಯಸ್ಸಿನಲ್ಲಿ ಹಲವು ತೊಂದರೆಗಳನ್ನು ಉಂಟುಮಾಡುತ್ತದೆ, ಇದನ್ನು ಹಣದ ಸಹಾಯದಿಂದ ತಗ್ಗಿಸಬಹುದು. ಯಾವುದೇ ಪರಿಹಾರವನ್ನು ಸಂಪೂರ್ಣವಾಗಿ ನಿರಾಕರಿಸುವುದು ಪಿಂಚಣಿದಾರರಿಗೆ ದೊಡ್ಡ ಅನ್ಯಾಯವಾಗಲಿದೆ ಎಂದು ಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ: ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಸೀತಾಲಕ್ಷ್ಮಿ ಎಂಬುವರು ಎಸ್‌ಎಸ್‌ಎಲ್‌ಸಿ ತನಕ ಕನ್ನಡ ಮಾಧ್ಯಮದಲ್ಲಿ ಕನ್ನಡ ಪಠ್ಯಕ್ರಮದಲ್ಲಿ ಒಂದು ವಿಷಯವಾಗಿ ಅಧ್ಯಯನ ಮಾಡಿದ್ದರು. ಸುಮಾರು ಮೂರು ದಶಕಗಳ ಸೇವೆಯ ನಂತರ ಅವರು 2019ರ ಅಕ್ಟೋಬರ್ 31 ರಂದು ಸೇವೆಯಿಂದ ನಿವೃತ್ತರಾಗಿದ್ದರು.
ಅವರಿಗೆ ಕನ್ನಡ ಭಾಷೆಯಲ್ಲಿ ಅಧ್ಯಯನ ಮಾಡಿದ್ದ ಆದಾರದಲ್ಲಿ ವೇತನದ ಹೆಚ್ಚಳ (ಇಕ್ರಿಮೆಂಟ್) ಅನ್ನು ಶಿಕ್ಷಣ ಇಲಾಖೆ ನೀಡಬೇಕು ಎಂಬ ನಿಯಮವಿತ್ತು. ಆದರೆ, ಇಲಾಖೆ ಅರ್ಜಿದಾರರ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿತ್ತು. ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮಂಡಳಿ ಅರ್ಜಿಯನ್ನು ವಜಾಗೊಳಿಸಿತ್ತು. ಈ ಆದೇಶ ಪ್ರಶ್ನಿಸಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು.












Click it and Unblock the Notifications