ಭೂ ಹಗರಣ, ಶೆಟ್ಟರ್ ವಿರುದ್ಧದ ತನಿಖೆ ತಡೆಯಾಜ್ಞೆ
ಬೆಂಗಳೂರು, ನ. 21 : ಜಗದೀಶ್ ಶೆಟ್ಟರ್ ವಿರುದ್ಧದ ಭೂ ಹಗರಣದ ವಿಚಾರಣೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದ್ದು, ವಿಚಾರಣೆಯನ್ನು ಡಿಸೆಂಬರ್ 5ಕ್ಕೆ ಮುಂದೂಡಿದೆ. ಬೆಂಗಳೂರಿನ ಶ್ರೀಗಂಧ ಕಾವಲ್‌ನಲ್ಲಿನ ನಾಲ್ಕು ಎಕರೆ ಭೂಮಿಯನ್ನು ಶೆಟ್ಟರ್ ಸಿಎಂ ಆಗಿದ್ದಾಗ ಅಕ್ರಮವಾಗಿ ಮಂಜೂರು ಮಾಡಿದ್ದಾರೆ ಎಂಬುದು ಆರೋಪವಾಗಿದೆ.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಎ.ಪ್ರಸಾದ್ ಅವರು ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್)ಗೆ ಸಲ್ಲಿಸಿದ ದೂರಿನ ಅನ್ವಯ ಜಗದೀಶ್ ಶೆಟ್ಟರ್ ಅವರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ. ಈ ವಿಚಾರಣೆಗೆ ತಡೆ ನೀಡಬೇಕೆಂದು ಶೆಟ್ಟರ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. [ಶೆಟ್ಟರ್ ಕೊರಳಿಗೆ ಭೂ ಹಗರಣ]

ಶುಕ್ರವಾರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಜಗದೀಶ್ ಶೆಟ್ಟರ್ ವಿಚಾರಣೆ ನಡೆಸದಂತೆ ಬಿಎಂಟಿಎಫ್‌ಗೆ ಮಧ್ಯಂತರ ತಡೆಯಾಜ್ಞೆ ನೀಡಿದ್ದು, ಅರ್ಜಿಯ ವಿಚಾರಣೆಯನ್ನು ಡಿ.5ಕ್ಕೆ ಮುಂದೂಡಿದೆ. ಐಪಿಸಿ ಸೆಕ್ಷನ್ 420, 218, 166, 192 (ಎ) ಮತ್ತು (ಬಿ) ಅಡಿಯಲ್ಲಿ ಜಗದೀಶ್ ಶೆಟ್ಟರ್, ಎಸ್.ಸುಂದರೇಶ್ ಮತ್ತು ಇತರೆ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. [ಶೆಟ್ಟರ್ ವಿರುದ್ಧ ಎಫ್ ಐಆರ್]
ಆರೋಪವೇನು : ಬೆಂಗಳೂರಿನ ಶ್ರೀಗಂಧ ಕಾವಲ್‌ನಲ್ಲಿನ ನಾಲ್ಕು ಎಕರೆ ಭೂಮಿಯನ್ನು ಶೆಟ್ಟರ್ ಸಿಎಂ ಆಗಿದ್ದಾಗ ಅಕ್ರಮವಾಗಿ ಮಂಜೂರು ಮಾಡಿದ್ದಾರೆ ಎಂದು ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರೊ.ನಾಗರಾಜ್ ಆರೋಪಿಸಿದ್ದರು.
25 ವರ್ಷಗಳ ಹಿಂದೆಯೇ ನಿಧನರಾಗಿರುವ ಸ್ವಾತಂತ್ರ್ಯ ಹೋರಾಟಗಾರ ಸೂರ್ಯ ನಾರಾಯಣರಾವ್ ಅವರ ಪುತ್ರ ಎಸ್.ಸುಂದರೇಶ್ ಎಂಬುವವರಿಗೆ ಸಂಘದ ಸ್ವಾಧೀನದಲ್ಲಿರುವ 4 ಎಕರೆ ಜಮೀನನ್ನು ನೀಡಲಾಗಿದೆ. ಇದರ ಹಿಂದೆ ಭೂ ಮಾಫಿಯಾ ಕೈವಾಡವಿದೆ ಎಂದು ಆರೋಪಿಸಿದ್ದರು ಮತ್ತು ಬಿಎಂಟಿಎಫ್‌ಗೆ ಈ ಬಗ್ಗೆ ದೂರು ಸಲ್ಲಿಸಿದ್ದರು.












Click it and Unblock the Notifications