ಇಬ್ಬರು ಡ್ರಗ್ ಪೆಡ್ಲರ್‌ಗಳಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್
ಬೆಂಗಳೂರು, ಮಾರ್ಚ್ 08: ಎಂಡಿಎಂ ಮಾದಕ ದ್ರವ್ಯ ಹೊಂದಿದ್ದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಇಬ್ಬರಿಗೆ ಹೈಕೋರ್ಟ್ ಜಾಮೀನು ನಿರಾಕರಿಸಿದೆ. ಅಲ್ಲದೆ, ಮಾದಕ ದ್ರವ್ಯ ಸಂಗ್ರಹಣೆ ಹಾಗೂ ಮಾರಾಟವು ರಾಜ್ಯದ ಆರ್ಥಿಕತೆ ಹಾಗೂ ಸಮಾಜದ ವಿರುದ್ಧದ ಅಪರಾಧವಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಜಾಮೀನು ಕೋರಿ ರಾಜಸ್ಥಾನ ಮೂಲದ ಸುನೀಲ್ ಕುಮಾರ್ ಮತ್ತು ಬೆಂಗಳೂರಿನ ಕೊಡುಗೆಹಳ್ಳಿ ನಿವಾಸಿ ಅಶೋಕ್ ಕುಮಾರ್ ಸಲ್ಲಿಸಿದ್ದ ಅರ್ಜಿಗಳನ್ನು ತಿರಸ್ಕರಿಸಿ ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್ ಅವರ ಪೀಠ ಆದೇಶಿಸಿದೆ.

ಯುವಜನತೆ ಮೇಲೆ ಪರಿಣಾಮ: ಪ್ರಕರಣದಲ್ಲಿ ದಾಖಲೆ ಪರಿಶೀಲಿಸಿದಾಗ ವಾಣಿಜ್ಯ ಪ್ರಮಾಣದಲ್ಲಿ ಮಾದಕ ದ್ರವ್ಯವಾದ ಎಂಡಿಎಂ ಅನ್ನು ಆರೋಪಿಗಳಿಂದ ತನಿಖಾಧಿಕಾರಿಗಳು ಜಪ್ತಿ ಮಾಡಿದ್ದಾರೆ. ಮಾದಕ ದ್ರವ್ಯ ಮಾರಾಟವು ಸಮಾಜದ ಮತ್ತು ರಾಜ್ಯ ಆರ್ಥಿಕತೆ ವಿರುದ್ಧದ ಅಪರಾಧವಾಗಿದೆ.
ಮಾದಕ ದ್ರವ್ಯ ಮಾರಾಟಕ್ಕೆ ವಿಶೇಷವಾಗಿ ಶಾಲಾ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಯುವ ಜನಾಂಗವನ್ನು ಗುರಿಯಾಗಿಸಿಕೊಳ್ಳಲಾಗಿದೆ. ಈ ಘಟನೆಯನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲವಾಗಿದ್ದು, ಕಬ್ಬಿಣದ ಕೈಗಳಿಂದ ವ್ಯವಹರಿಸಬೇಕಿದೆ.
ಹಾಗಾಗಿ, ಜಾಮೀನು ಮಂಜೂರು ಮಾಡಲು ಅರ್ಹ ಪ್ರಕರಣ ಇದಾಗಿಲ್ಲ. ಪ್ರಕರಣದ ಸ್ವರೂಪ ಹಾಗೂ ಗಂಭೀರತೆ ಆಧರಿಸಿ ಅರ್ಜಿ ವಜಾಗೊಳಿಸಲಾಗುತ್ತಿದೆ ಎಂದು ಪೀಠ ಆದೇಶದಲ್ಲಿ ಹೇಳಿದೆ.
ಪ್ರಕರಣದ ಹಿನ್ನೆಲೆ: ದಾವಣಗೆರೆ ಜಿಲ್ಲೆಯಲ್ಲಿನ ರಾಷ್ಟ್ರೀಯ ಹೆದ್ದಾರಿ-48ರ ಸರ್ವಿಸ್ ರಸ್ತೆಯ ಪಕ್ಕದಲ್ಲಿರುವ ಮಯೂರ್ ಗ್ಲೋಬಲ್ ಶಾಲೆ ಸಮೀಪ ಕೆಲ ವ್ಯಕ್ತಿಗಳು ಅಕ್ರಮವಾಗಿ ಎಂಡಿಎಂ ಮಾದಕ ದ್ರವ್ಯ ಸಂಗ್ರಹಿಸಿಕೊಂಡು ಸೇವನೆ ಮಡುತ್ತಿದ್ದ ಬಗ್ಗೆ 2023ರ ನ.5ರಂದು ಸಂಜೆ 4 ಗಂಟೆಗೆ ಸಿಇಎನ್ ಠಾಣೆಯ ಇನ್ಸ್ ಪೆಕ್ಟರ್‌ಗೆ ಮಾಹಿತಿ ಲಭ್ಯವಾಗಿತ್ತು. ಪೊಲೀಸ್ ಅಧೀಕ್ಷಕರ ಅನುಮತಿ ಪಡೆದು ಪೊಲೀಸರು ಸಂಜೆ 4.40ಕ್ಕೆ ದಾಳಿ ನಡೆಸಿದ್ದರು. ಕಾರೊಂದರಲ್ಲಿದ್ದ ಐವರ ನಡೆ ಅನುಮಾನಸ್ಪದವಾಗಿತ್ತು. ಅವರನ್ನು ಬಂಧಿಸಿದ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದರು.
ಅವರ ಪೈಕಿ ಓರ್ವ ಆರೋಪಿಯಾದ ರಾಮ್ ರತನ್ ನೀಡಿದ್ದ ಮಾಹಿತಿ ಮೇರೆಗೆ ಬೆಂಗಳೂರಿನ ಬಸವೇಶ್ವರ ಬಡಾವಣೆಯಲ್ಲಿನ 7ನೇ ಆರೋಪಿಯಾದ ಸುನೀಲ್ ಕುಮಾರ್ ಮನೆಯ ಮೇಲೆ 2023ರ ಡಿ.3ರಂದು ಪೊಲೀಸರು ದಾಳಿ ನಡೆಸಿದ್ದರು. ದಾಳಿ ವೇಳೆ 8ನೇ ಆರೋಪಿ ಅಶೋಕ್ ಕುಮಾರ್ ಸ್ಥಳದಲ್ಲಿದ್ದ.
ಅವರಿಂದ 27 ಗ್ರಾಂ ಎಂಡಿಎಂ ಮಾದಕ ದ್ರವ್ಯ ವಶಪಡಿಸಿಕೊಳ್ಳಲಾಗಿತ್ತು. ಅವರ ವಿರುದ್ಧದ ಪ್ರಕರಣ ದಾಖಲಾಗಿತ್ತು. ವಿಚಾರಣಾ ನ್ಯಾಯಾಲಯವು ಜಾಮೀನು ನೀಡಲು ನಿರಾಕರಿಸಿತ್ತು. ಹಾಗಾಗಿ ಆರೋಪಿಗಳು ಹೈಕೋರ್ಟ್ ಮೊರೆ ಹೋಗಿದ್ದರು.












Click it and Unblock the Notifications