ವಿನಯ್ ಕುಲಕರ್ಣಿ ವಿರುದ್ಧ ಕೊಲೆ ಪ್ರಕರಣ: ತೀರ್ಪು ಕಾಯ್ದಿರಿಸಿದ ಕೋರ್ಟ್
ಹುಬ್ಬಳ್ಳಿ, ಮಾರ್ಚ್ 16: ಜಿಲ್ಲಾ ಪಂಚಾಯತಿ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಯವರ ಅರ್ಜಿಯ ತೀರ್ಪನ್ನು ಹೈಕೋರ್ಟ್ ಕಾಯ್ದಿರಿಸಿದೆ.
ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಸದಸ್ಯರಾಗಿದ್ದ ಯೋಗೀಶ್‌ಗೌಡ ಗೌಡರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ಸೆಷನ್ಸ್ ನ್ಯಾಯಾಲಯ ನಿಗದಿಪಡಿಸಿರುವ ದೋಷಾ ರೋಪಣೆಯಲ್ಲಿ ಸಾಕಷ್ಟು ದೋಷಗಳಿವೆ.

ಹೀಗೆಂದು ಆಕ್ಷೇಪಿಸಿ ಪ್ರಕರಣದ ಆರೋಪಿಯೂ ಆದ ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆಯನ್ನು ಮುಕ್ತಾಯಗೊಳಿಸಿರುವ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.
ವಿನಯ್ ಕುಲಕರ್ಣಿ ಅರ್ಜಿ ಸಲ್ಲಿಕೆ
'ನನ್ನ ವಿರುದ್ಧ ಹೊರಿಸಲಾಗಿರುವ ದೋಷಾರೋಪಣೆ ಮತ್ತು ಬೆಂಗಳೂರು ಸಿಟಿ ಸಿವಿಲ್ ಕೋರ್ಟ್‌ನ ವಿಶೇಷ ನ್ಯಾಯಾಲಯದಲ್ಲಿ ನಡೆಯಲಿರುವ ವಿಚಾರಣಾ ನ್ಯಾಯಾಲಯದ ನ್ಯಾಯ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕೆಂದು' ಕೋರಿ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಯಿತು.
ಶಾಸಕರು ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಪೀಠ'ದಲ್ಲಿದ್ದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಪೂರ್ಣಗೊಳಿಸಿದರು. ಶಾಸಕ ವಿನಯ ಕುಲಕರ್ಣಿ ಅವರ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ಹಾಗೂ ಸಿಬಿಐ ಪರ ಪಿ.ಪ್ರಸನ್ನಕುಮಾರ್ ವಾದ ಮಂಡಿಸಿದರು.
ದೋಷಾರೋಪ ಪಟ್ಟಿ ಸಲ್ಲಿಕೆ
ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2016ರ ಜೂನ್ 15ರಂದು ಯೋಗೀಶ್ ಗೌಡ ಕೊಲೆ ನಡೆದಿತ್ತು. ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸಿದ್ದು, ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ.
ಸಿಸಿಎಚ್-82ರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಒಟ್ಟು 21 ಆರೋಪಿಗಳ ವಿರುದ್ಧ ದೋಷಾರೋಪ ನಿಗದಿಪಡಿಸಿ 2024ರ ಜನವರಿ 29ರಿಂದ ಫೆಬ್ರುವರಿ 1ರವರೆಗೆ ನಿಯಮಿತವಾಗಿ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ಆದೇಶಿಸಿತ್ತು. ಪ್ರಕರಣದ ಆರೋಪಿಯೂ ಆದ ವಿನಯ್ ಕುಲಕರ್ಣಿ, ದೋಷಾರೋಪ ನಿಗದಿ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದೀಗ ವಿನಯ್ ಕುಲಕರ್ಣಿಯವರ ಅರ್ಜಿ ಅಂತ್ಯಗೊಳಿಸಿ, ತೀರ್ಪು ಕಾಯ್ದರಿಸಲಾಗಿದೆ.












Click it and Unblock the Notifications