ಗೃಹಿಣಿಯರ ಮಾಸಿಕ ಆದಾಯ 30 ಸಾವಿರ ರೂ. ಎಂದು ಪರಿಗಣಿಸಿ ಬರೋಬ್ಬರಿ 59.69 ಲಕ್ಷ ಪರಿಹಾರ ನೀಡಿದ ಹೈಕೋರ್ಟ್

ಒಂದು ಮನೆ ಮತ್ತು ಅದರ ಸದಸ್ಯರು ನೆಮ್ಮದಿಯಿಂದ ಬದುಕಲು ಗೃಹಿಣಿಯರ ಮಾಡುವ ಶ್ರಮ ಮತ್ತು ತ್ಯಾಗವನ್ನ ಲೆಕ್ಕ ಹಾಕಲು ಸಾಧ್ಯವಿಲ್ಲ. ಇವನ್ನೆಲ್ಲ ಕೇವಲ ಹಣದಿಂದ ಅಳೆಯಲು ಕೂಡ ಸಾಧ್ಯವಿಲ್ಲ. ಆದರೂ, ಅವರ ಆರ್ಥಿಕ ಮೌಲ್ಯವನ್ನ ಗುರುತಿಸುವ ನಿಟ್ಟಿನಲ್ಲಿ ಇತ್ತೀಚೆಗೆ ಸುಪ್ರೀಂ ಕೋರ್ಟ್ ಮಹತ್ವದ ಹೆಜ್ಜೆಯಿಟ್ಟಿತ್ತು.

ಇದೀಗ ಅದೇ ಹಾದಿಯಲ್ಲಿ ಸಾಗಿರುವ ಹೈಕೋರ್ಟ್, ರಸ್ತೆ ಅಪಘಾತದಲ್ಲಿ ಮೃತಪಟ್ಟ ಗೃಹಿಣಿಯೊಬ್ಬರ ಕುಟುಂಬಕ್ಕೆ ಬರೋಬ್ಬರಿ 59.69 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ವಿಮಾ ಕಂಪನಿಗೆ ಮಹತ್ವದ ಆದೇಶ ನೀಡಿದೆ. ಇದು ಇತ್ತೀಚಿನ ವರ್ಷಗಳಲ್ಲಿ ಗೃಹಿಣಿಯರ ಪ್ರಕರಣದಲ್ಲಿ ನೀಡಲಾದ ಅತಿ ದೊಡ್ಡ ಪರಿಹಾರ ಮೊತ್ತವಾಗಿದೆ.

High Court Awards 59 69 Lakh Compensation to Homemaker s Family Values Monthly Income at 30K

ವಾಹನ ಅಪಘಾತಗಳ ಪರಿಹಾರ ನ್ಯಾಯಾಧಿಕರಣದ ಆದೇಶವನ್ನ ಪ್ರಶ್ನಿಸಿ ವಿಮಾ ಕಂಪನಿ ಮತ್ತು ಪರಿಹಾರ ಹೆಚ್ಚಳ ಕೋರಿ ಮೃತರ ಸಂಬಂಧಿಕರು ಸಲ್ಲಿಸಿದ್ದ ಎರಡೂ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಯಂತ್ ಬ್ಯಾನರ್ಜಿ ಹಾಗೂ ನ್ಯಾಯಮೂರ್ತಿ ತಾರಾ ವಿತಾಸ್ತ ಗಂಜೂ ಅವರಿದ್ದ ವಿಭಾಗೀಯ ಪೀಠ ಈ ಐತಿಹಾಸಿಕ ತೀರ್ಪು ಪ್ರಕಟಿಸಿದೆ.

ಸುಪ್ರೀಂ ಕೋರ್ಟ್ ಆದೇಶ ಮತ್ತು ಹೈಕೋರ್ಟ್ ತೀರ್ಪು

ಕೆಲವು ದಿನಗಳ ಹಿಂದಷ್ಟೇ ಸುಪ್ರೀಂ ಕೋರ್ಟ್, ಗೃಹಿಣಿಯರ ಮನೆಕೆಲಸ ಹಾಗೂ ಕುಟುಂಬದ ಆರೈಕೆಯ ಮೌಲ್ಯವನ್ನು ಮಾಸಿಕ 30,000 ರೂಪಾಯಿ ಎಂದು ಪರಿಗಣಿಸಬೇಕು ಎಂದು ಸೂಚಿಸಿತ್ತು. 'ಕಿಶು ಪಾಲ್ ವರ್ಸಸ್ ಸುಜೀತ್' ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಈ ತೀರ್ಪನ್ನ ಉಲ್ಲೇಖಿಸಿರುವ ಹೈಕೋರ್ಟ್, ಮೃತ ಗೃಹಿಣಿಯ ಮಾಸಿಕ ಆದಾಯವನ್ನ 30 ಸಾವಿರ ರೂಪಾಯಿ ಎಂದು ಲೆಕ್ಕಾಚಾರ ಮಾಡಿದೆ.

ಇದಕ್ಕೆ ಭವಿಷ್ಯದ ಗಳಿಕೆಯ ಶೇ.40ರಷ್ಟು ಮೊತ್ತವನ್ನು ಸೇರ್ಪಡೆ ಮಾಡಿ, ಒಟ್ಟು 59.69 ಲಕ್ಷ ರೂಪಾಯಿ ಪರಿಹಾರವನ್ನ ನಿಗದಿಪಡಿಸಿದೆ. ಈ ಮೊತ್ತವನ್ನ ವಾರ್ಷಿಕ ಶೇ.9ರಷ್ಟು ಬಡ್ಡಿಯೊಂದಿಗೆ ಮೃತ ಮಹಿಳೆಯ ಪುತ್ರನಿಗೆ ಪಾವತಿಸುವಂತೆ ವಿಮಾ ಕಂಪನಿಗೆ ನಿರ್ದೇಶನ ನೀಡಲಾಗಿದೆ.

ಒಟ್ಟು ಮೊತ್ತದಲ್ಲಿ ಶೇ.20ರಷ್ಟನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಹಾಗೂ ಉಳಿದ ಹಣವನ್ನ ಬ್ಯಾಂಕ್‌ನಲ್ಲಿ ಠೇವಣಿ ಇರಿಸಿ, ಮುಂದಿನ 20 ವರ್ಷಗಳ ಕಾಲ ಪ್ರತಿ 5 ವರ್ಷಕ್ಕೊಮ್ಮೆ ಕಂತುಗಳಲ್ಲಿ ಬಿಡುಗಡೆ ಮಾಡಬೇಕು ಎಂದು ಷರತ್ತು ವಿಧಿಸಿದೆ.

ಗೃಹಿಣಿಯ ಶ್ರಮಕ್ಕೆ ಬೆಲೆ ಕಟ್ಟಲಾಗದು

ತೀರ್ಪು ಪ್ರಕಟಿಸುವ ವೇಳೆ ನ್ಯಾಯಾಲಯವು ಗೃಹಿಣಿಯರ ಪರವಾದ ಕಾಳಜಿಯುತ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಮೃತ ಮಹಿಳೆಯು ಒಬ್ಬ ಗೃಹಿಣಿಯಾಗಿದ್ದು, ಆಕೆ ತನ್ನ ಇಡೀ ಜೀವಮಾನದಲ್ಲಿ ಕುಟುಂಬಕ್ಕಾಗಿ ಮೀಸಲಿಡುವ ಶ್ರಮ ಮತ್ತು ನೀಡುವ ಕೊಡುಗೆಯನ್ನ ಕೇವಲ ಕನಿಷ್ಠ ಆದಾಯದ ಮಾನದಂಡದಲ್ಲಿ ಅಳೆಯುವುದು ಅಸಾಧ್ಯ. ಅವರ ನಿಸ್ವಾರ್ಥ ಸೇವೆಗೆ ಯಾವುದೇ ಬೆಲೆ ಕಟ್ಟಲಾಗದು ಎಂದು ನ್ಯಾಯಪೀಠವು ನುಡಿದಿದೆ.

ವಿಮಾ ಕಂಪನಿಯ ವಾದ ತಳ್ಳಿಹಾಕಿದ ನ್ಯಾಯಾಲಯ

ವಿಚಾರಣೆ ವೇಳೆ ವಿಮಾ ಕಂಪನಿಯ ಪರ ವಕೀಲರು, ಬೈಕ್‌ಗೆ ಹಸುವೊಂದು ಅಡ್ಡಬಂದು ಡಿಕ್ಕಿ ಹೊಡೆದಿದ್ದರಿಂದ ಈ ಅಪಘಾತ ಸಂಭವಿಸಿದೆ. ಈ ಪ್ರಕರಣದಲ್ಲಿ ಸವಾರನಿಗೆ ಕ್ರಿಮಿನಲ್ ನ್ಯಾಯಾಲಯದಿಂದ ಈಗಾಗಲೇ ಖುಲಾಸೆ ಸಿಕ್ಕಿದೆ. ಹೀಗಾಗಿ ಪರಿಹಾರ ನೀಡುವ ಹೊಣೆಗಾರಿಕೆ ನಮ್ಮ ಮೇಲಿಲ್ಲ ಎಂದು ವಾದ ಮಂಡಿಸಿದ್ದರು.

ಆದರೆ ಈ ವಾದವನ್ನ ತಳ್ಳಿಹಾಕಿದ ನ್ಯಾಯಾಲಯ, ಮೋಟಾರು ವಾಹನ ಕಾಯಿದೆಯಡಿ ಪರಿಹಾರವನ್ನು ಸಾಕ್ಷ್ಯಾಧಾರಗಳ ಪ್ರಬಲ ಸಾಧ್ಯತೆಯ ಆಧಾರದ ಮೇಲೆ ನೀಡಲಾಗುತ್ತದೆಯೇ ಹೊರತು, ಕ್ರಿಮಿನಲ್ ಪ್ರಕರಣದ ಖುಲಾಸೆಯ ಆಧಾರದ ಮೇಲಲ್ಲ ಎಂದು ಸ್ಪಷ್ಟಪಡಿಸಿದೆ.

ಬಿದಡಿ ರಸ್ತೆ ಅಪಘಾತದ ಹಿನ್ನೆಲೆ

2011ರ ಆಗಸ್ಟ್ 23ರಂದು ಈ ದುರ್ಘಟನೆ ನಡೆದಿತ್ತು. ಪುಷ್ಪಾ ಅಲಿಯಾಸ್ ಪುಟ್ಟತಾಯಮ್ಮ (37) ಅವರು ತಮ್ಮ ಪತಿ ಮಂಜುಣ್ಣ ಗೌಡ ಅವರೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಬಿದಡಿ ಸಮೀಪದ ಕೆಂಪೂಸಹಳ್ಳಿ ಗೇಟ್ ಬಳಿ ಸಂಚರಿಸುತ್ತಿದ್ದಾಗ ಭೀಕರ ಅಪಘಾತ ಸಂಭವಿಸಿತ್ತು. ತೀವ್ರವಾಗಿ ಗಾಯಗೊಂಡಿದ್ದ ಪುಷ್ಪಾ ಅವರನ್ನ ಆಸ್ಪತ್ರೆಗೆ ದಾಖಲಿಸಿ ಸತತ 45 ದಿನಗಳ ಕಾಲ ಚಿಕಿತ್ಸೆ ನೀಡಲಾಗಿತ್ತು. ಆಸ್ಪತ್ರೆ ವೆಚ್ಚಕ್ಕಾಗಿ ಬರೋಬ್ಬರಿ 7.36 ಲಕ್ಷ ರೂ. ಖರ್ಚು ಮಾಡಲಾಗಿತ್ತು.

ಆದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದರು. ಪುಷ್ಪಾ ಅವರು ಹೂವು ಮಾರಾಟ ಮಾಡಿಕೊಂಡು ತಿಂಗಳಿಗೆ 8 ಸಾವಿರ ರೂಪಾಯಿ ಗಳಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಸೂಕ್ತ ಪರಿಹಾರ ಕೋರಿ ಅವರ ಸಂಬಂಧಿಕರು ನ್ಯಾಯಮಂಡಳಿಯ ಮೆಟ್ಟಿಲೇರಿದ್ದರು. ಆರಂಭದಲ್ಲಿ ನ್ಯಾಯಾಧಿಕರಣವು ಕೇವಲ 11.18 ಲಕ್ಷ ರೂಪಾಯಿ ಪರಿಹಾರ ಘೋಷಿಸಿತ್ತು, ಆದರೆ ಇದೀಗ ಹೈಕೋರ್ಟ್ ಅದನ್ನು 59.69 ಲಕ್ಷ ರೂಪಾಯಿಗೆ ಹೆಚ್ಚಿಸಿ ಕುಟುಂಬಕ್ಕೆ ನ್ಯಾಯ ಒದಗಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+