ಕರ್ನಾಟಕ ಕರಾವಳಿ, ಬೆಂಗಳೂರಿನಲ್ಲಿ ಮುಂದಿನ ವಾರದವರೆಗೂ ವರುಣನ ಆರ್ಭಟ: ಹವಾಮಾನ ಇಲಾಖೆ
ಬೆಂಗಳೂರು, ಜುಲೈ. 14: ಗುರುವಾರ ಮತ್ತು ಶುಕ್ರವಾರ ಬೆಂಗಳೂರಿನ ಕೆಲವು ಭಾಗಗಳು ಮತ್ತು ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಮಳೆ ಮುಂದುವರೆದಿದೆ. ಇದರಿಂದ ಚಿಕ್ಕಪೇಟೆ ಮತ್ತು ಇತರ ಪ್ರದೇಶಗಳು ಜಲಾವೃತವಾದ ವರದಿಗಳು ದಾಖಲಾಗಿದೆ. ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ವಾರಾಂತ್ಯದ ಉದ್ದಕ್ಕೂ ಮತ್ತು ಮುಂಬರುವ ವಾರದ ವರೆಗೂ ಮಳೆಯಾಗಬಹುದು ಎಂದು ಭಾರತದ ಹವಾಮಾನ ಇಲಾಖೆ ಹೇಳಿದೆ.
ಭಾರತದ ಹವಾಮಾನ ಇಲಾಖೆಯು ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಮತ್ತು ದಕ್ಷಿಣ ಒಳನಾಡಿನ ಕರ್ನಾಟಕದ ಇತರ ಭಾಗಗಳಲ್ಲಿ "ಭಾರೀ ಮಳೆ" ಮತ್ತು ಗುಡುಗು ಸಹಿತ ಮಳೆಯಾಗುವ ಎಚ್ಚರಿಕೆಗಳನ್ನು ನೀಡಿದೆ. ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಮುಂದಿನ 48 ಗಂಟೆಗಳಲ್ಲಿ ಹಗುರದಿಂದ ಸಾಧಾರಣ ಮಳೆ ಮುಂದುವರಿಯಲಿದ್ದು, ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 29 ಮತ್ತು 21 ಡಿಗ್ರಿ ಸೆಲ್ಸಿಯಸ್ ಆಗುವ ಸಾಧ್ಯತೆಯಿದೆ ಎಂದು ಭಾರತದ ಹವಾಮಾನ ಇಲಾಖೆ ತಿಳಿಸಿದೆ.
Short spell of intense showers near Sapthagiri Medical College, Chikkabanawara in #Bengaluru now#BengaluruRains #BangaloreRains #KarnatakaRains #BengaluruRain #BangaloreRain #Bangalore pic.twitter.com/4xPboWvT8H
— Karnataka Weather (@Bnglrweatherman) July 14, 2023
ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಭಾರತದ ಹವಾಮಾನ ಇಲಾಖೆ "ಆರೆಂಜ್" ಅಲರ್ಟ್ ಘೋಷಿಸಿದ್ದು, ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ "ಹಳದಿ" ಅಲರ್ಟ್ ಘೋಷಿಸಿದೆ. ಗುರುವಾರ ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕೋಡ್ಕಣಿ ಮತ್ತು ದೊಡ್ಮನೆಯಲ್ಲಿ 200 ಮಿಮೀ ಮತ್ತು 184.5 ಮಿಮೀ ಮಳೆ ದಾಖಲಾಗಿದ್ದರೆ, ಕುಂದಾಪುರದ ಹಳ್ಳಿಹೊಳೆಯಲ್ಲಿ 184.5 ಮಿಮೀ ಮಳೆಯಾಗಿದೆ. ಉಡುಪಿ ಜಿಲ್ಲೆಯ ತಾಲೂಕಿನಲ್ಲಿ 183.5 ಮಿ.ಮೀ ಮಳೆ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಹೇಳಿದೆ.

ಜೂನ್ 1 ರಿಂದ ಜುಲೈ 13 ರವರೆಗಿನ ವಿಶ್ಲೇಷಣೆಯಲ್ಲಿ, 21 ಜಿಲ್ಲೆಗಳಲ್ಲಿ ಮಳೆ ಕೊರತೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರವು ಮಾಹಿತಿ ನೀಡಿದೆ. ಬಾಗಲಕೋಟೆಯಲ್ಲಿ ಅತಿ ಹೆಚ್ಚು ಮಳೆ ಕೊರತೆ ದಾಖಲಾಗಿದೆ. ಆದರೆ ಕಲಬುರಗಿ, ಯಾದಗಿರಿ, ವಿಜಯಪುರ, ಬೆಳಗಾವಿ, ರಾಯಚೂರು, ಧಾರವಾಡ, ಹಾವೇರಿ, ಗದಗ, ಕೊಪ್ಪಳ, ವಿಜಯನಗರ, ಬಳ್ಳಾರಿ , ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಕೊಡಗು, ಮೈಸೂರು, ಚಾಮರಾಜನಗರ, ರಾಮನಗರದಲ್ಲಿ ಸಾಮಾನ್ಯ ಮಳೆ ಕೊರತೆ ಕಂಡು ಬಂದಿದೆ. ಒಂಬತ್ತು ಜಿಲ್ಲೆಗಳು ಸಾಮಾನ್ಯ ಮಳೆಯನ್ನು ಕಂಡಿವೆ ಮತ್ತು ಈ ಅವಧಿಯಲ್ಲಿ "ಹೆಚ್ಚುವರಿ" ಮಳೆಯನ್ನು ದಾಖಲಿಸಿದ ಏಕೈಕ ಜಿಲ್ಲೆ ಉಡುಪಿ.
ಇನ್ನು, ಬೆಂಗಳೂರು ನಗರದಲ್ಲಿ ಮಳೆ ಸಂಬಂಧಿತ ಘಟನೆಗಳ ಬಗ್ಗೆ ಜಾಗ್ರತೆ ವಹಿಸಿರುವ ಪೊಲೀಸರು ಇತ್ತೀಚೆಗೆ ಮಳೆಯ ನಡುವೆ ಸುರಕ್ಷಿತ ಪ್ರಯಾಣಕ್ಕಾಗಿ ನಿವಾಸಿಗಳಿಗೆ ಮಾರ್ಗಸೂಚಿಗಳನ್ನು ನೀಡಿದ್ದಾರೆ.












Click it and Unblock the Notifications