Karnataka Rain: ರಾಜ್ಯದ ಹಲವೆಡೆ ಭಾರೀ ಮಳೆ: ಸಿಡಿಲು ಬಡಿದು 30 ಕುರಿ ಸಾವು- ವಿದ್ಯುತ್ ಕಂಬ ಧರೆಗೆ
ಬೇಸಿಗೆಯ ಬಿಸಿಲು ಹೆಚ್ಚಾಗುತ್ತಿರುವ ಈ ದಿನಮಾನಗಳಲ್ಲಿ ಮಳೆರಾಯ ಭೂಮಿಯನ್ನು ತಂಪಾಗಿಸಿದ್ದಾನೆ. ರಾಜ್ಯದ ಹಲವೆಡೆ ಧಾರಾಕಾರವಾಗಿ ಮಳೆಯಾಗುತ್ತಿದ್ದು ವಾತಾವರಣವೇ ಬದಲಾಗಿ ಹೋಗಿದೆ. ಒಂದೆಡೆ ತಾಪಮಾನ ಹೆಚ್ಚಾಗಿದ್ದರೆ ಇನ್ನೂ ಕೆಲವೆಡೆ ಮಳೆಗಾಲಕ್ಕೂ ಮುನ್ನ ವರುಣ ಅರ್ಭಟಿಸುತ್ತಿದ್ದಾನೆ.
ರಾಜ್ಯದ ಹಲವೆಡೆ ಕಳೆದ ದಿನ ಭಾರಿ ಮಳೆ ಸುರಿದಿದೆ. ಹಾವೇರಿ, ದಕ್ಷಿಣ ಕನ್ನಡ, ಶಿವಮೊಗ್ಗ, ಮಂಗಳೂರು ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದ್ದು ವರುಣಾರ್ಭಟಕ್ಕೆ ಜನ ತತ್ತರಿಸಿದ್ದಾರೆ. ಕಳೆದ ದಿನ ಸುರಿದ ಮಳೆಗೆ ಹಾವೇರಿಯಲ್ಲಿ ಸಿಡಿಲು ಬಡಿದು 30 ಕುರಿಗಳು ಸಾವಿಗೀಡಾಗಿವೆ. ಮಂಗಳೂರಿನಲ್ಲಿ ಭಾರೀ ಮಳೆಗೆ ರಸ್ತೆಗಳಲ್ಲಿ ನೀರು ತುಂಬಿಕೊಂಡಿದ್ದು, ಶಿವಮೊಗ್ಗದಲ್ಲಿ ನಿರಂತರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.

ಹೌದು ಕಳೆದ ದಿನ ರಾಜ್ಯದ ಹಲವೆಡೆ ಮೋಡ ಕವಿದ ವಾತಾವರಣವಿತ್ತು. ರಾತ್ರಿ ಹಾಗೂ ಸಂಜೆ ತೀವ್ರ ಗಾಳಿ, ಗುಡುಗು, ಮಿಂಚಿನೊಂದಿಗೆ ಮಳೆ ಸುರಿದಿದೆ. ಇದರಿಂದಾಗಿ ಹಾವೇರಿಯ ಹಿರೇಕೆರೂರು ತಾಲೂಕಿನ ಹುಲಬಿಕೊಂಡ ಗ್ರಾಮದಲ್ಲಿ ಸಿಡಿಲು ಬಡಿದು 30ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ. ಈಟೇಪ್ಪ ಬನ್ನಿ ಎಂಬುವವರಿಗೆ ಸೇರಿದ ಕುರಿಗಳು ಸಿಡಿಲಿನ ಹೊಡೆತಕ್ಕೆ ಉಸಿರು ಚೆಲ್ಲಿವೆ.
ಕಳೆದ ದಿನ ಹಾವೇರಿಯಲ್ಲಿ ಸಿಡಿಲು ಸಮೇತ ಭಾರೀ ಮಳೆ ಸುರಿದಿದೆ. ಇದರಿಂದಾಗಿ 30ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ್ದು ಇಂದು ಶಾಸಕ ಯು.ಬಿ ಬಣಕಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಮಳೆ ಅರ್ಭಟ
ಇನ್ನೂ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಮಳೆ ಅರ್ಭಟ ಹೆಚ್ಚಾಗಿದೆ. ಕಳೆದ ಕೆಲ ದಿನಗಳಿಂದ ಕಡಬ ತಾಲೂಕಿನಾದ್ಯಂತ ಭಾರೀ ಮಳೆಯಾಗುತ್ತಿದೆ. ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ ಕಡಬ, ಕೋಡಿಂಬಾಳ, ನೆಲ್ಯಾಡಿಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾರೀ ಮಳೆಗೆ ನೆಲ್ಯಾಡಿ ಪೇಟೆ ಸಂಪೂರ್ಣವಾಗಿ ಜಲಾವೃತವಾಗಿದೆ. ಕಡಬದ ಪಂಜೋಡಿ ಎಂಬಲ್ಲಿ ವಿದ್ಯುತ್ ಕಂಬಗಳು ಧರೆಗೆ ಉರುಳಿ ಬಿದ್ದಿವೆ.
ಕಡಬ, ಕೋಡಿಂಬಾಳ, ನೆಲ್ಯಾಡಿಯಲ್ಲಿ ಭಾರಿ ಮಳೆಗೆ ರಸ್ತೆಗಳು ಜಾಲಾವೃತವಾಗಿದ್ದು ವಾಹನ ಸವಾರರು ಕಷ್ಟಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಡಬದ ಪಂಜೋಡಿ ಎಂಬಲ್ಲಿ ವಿದ್ಯುತ್ ಕಂಬಗಳು ಉಳಿದ್ದರಿಂದ ವಿದ್ಯುತ್ ವ್ಯತ್ಯಯ ಕೂಡ ಉಂಟಾಗಿದೆ.
ಮಂಗಳೂರಿನಲ್ಲೂ ವರುಣಾರ್ಭಟ
ಇನ್ನೂ ಮಂಗಳೂರಿನಲ್ಲೂ ವರುಣನ ಅರ್ಭಟ ಜೋರಾಗಿದೆ. ಕಳೆದ ಕೆಲ ದಿನಗಳಿಂದ ಮಂಗಳೂರಿನ ವಾತಾವರಣ ಬದಲಾಗಿದೆ. ದಿನಬಿಟ್ಟು ದಿನ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನಜೀವನವೇ ಅಸ್ತವ್ಯಸ್ತಗೊಂಡಿದೆ. ಕಳೆದ ದಿನ ಬಿರುಗಾಳಿ, ಗುಡುಗು ಮಿಂಚು ಸಮೇತ ಸುರಿದ ಮಳೆಗೆ ಜನ ಹೈರಾಣಾಗಿದ್ದು ಮನೆ ಬಿಟ್ಟು ಹೊರ ಬರಲು ಹಿಂದೇಟಾಕುವಂತಹ ಸ್ಥಿತಿ ನಿರ್ಮಾಣವಾಗಿದೆ.
ಉತ್ತರ ಕರ್ನಾಟಕದ ವಿಜಯಪುರ, ಕಲಬುರಗಿ ಹಾಗೂ ಬೆಳಗಾವಿಗೆ ಮುಂದಿನ ಮೂರು ಗಂಟೆಯಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಇಂದೂ ಕೂಡ ಉತ್ತರ ಕನ್ನಡ, ಮಂಗಳೂರು, ಬೆಳಗಾವಿ, ಹಾವೇರಿ, ಮೈಸೂರು, ಮಂಡ್ಯ, ವಿಜಯಪುರ, ತುಮಕೂರು ಸೇರಿದಂತೆ ಹಲವೆಡೆ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.












Click it and Unblock the Notifications