ನವೆಂಬರ್ 8ರ ಬಳಿಕ ಕರ್ನಾಟಕದಲ್ಲಿ ಮತ್ತೆ ಭಾರಿ ಮಳೆ
ಬೆಂಗಳೂರು, ನವೆಂಬರ್ 05 : ಹಿಂದೂ ಮಹಾಸಾಗರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಕರ್ನಾಟಕದಲ್ಲಿ ಮತ್ತೆ ಮಳೆಯಾಗಲಿದೆ. ನವೆಂಬರ್ 8ರ ಬಳಿಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ಕರ್ನಾಟಕದ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ನವೆಂಬರ್ 8ರ ಬಳಿಕ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಕಳೆದ ನಾಲ್ಕು ದಿನಗಳಿಂದ ಮಳೆ ಕಡಿಮೆಯಾಗಿದ್ದು, ಬಿಸಿಲು ಇದೆ.
ವಾಯುಭಾರ ಕುಸಿತ ಚಂಡಮಾರುತವಾಗಿ ರೂಪಗೊಳ್ಳುವ ಸಾಧ್ಯತೆ ಇದೆ. ಇದರಿಂದಾಗಿ ಬೆಂಗಳೂರು, ತುಮಕೂರು, ಮಂಡ್ಯ, ಹಾಸನ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಮುನ್ಸೂಚನೆಯಲ್ಲಿ ತಿಳಿಸಲಾಗಿದೆ.

ಉತ್ತರ ಒಳನಾಡು ಹಾಗೂ ಕರಾವಳಿ ಭಾಗದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ನವೆಂಬರ್ 8ರ ತನಕ ಮಳೆಯಾಗುವುದಿಲ್ಲ ಎಂದು ಹವಾಮಾನ ಇಲಾಖೆ ಹೇಳಿದೆ. ಸೋಮವಾರ ಕಲಬುರಗಿಯ ಸುಲೆಪೇಟೆಯಲ್ಲಿ 2, ಪಣಂಬೂರು, ಪುತ್ತೂರು, ಸೈದಾಪುರ, ಆನವಟ್ಟಿಯಲ್ಲಿ ತಲಾ 1 ಸೆಂ. ಮೀ ಮಳೆಯಾಗಿದೆ.
ಕರ್ನಾಟಕದಲ್ಲಿ ಮುಂಗಾರು ಋತುವಿನಲ್ಲಿ ಭಾರಿ ಮಳೆಯಾಗಿತ್ತು. ಚಂಡಮಾರುತದ ಪ್ರಭಾವದಿಂದ ಅಕ್ಟೋಬರ್ ಅಂತ್ಯದ ತನಕವೂ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಿದೆ. ಈಗ ನವೆಂಬರ್ ಬಂದರೂ ಮಳೆ ಬೀಳುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.












Click it and Unblock the Notifications