ಮಲೆನಾಡನ್ನು ಬಿಡದ ಮಳೆ, ಹಳ್ಳಕ್ಕೆ ಬಿದ್ದು ಮೃತಪಟ್ಟ ಮಹಿಳೆ
ಚಿಕ್ಕಮಗಳೂರು, ಆಗಸ್ಟ್ 11: ಮಲೆನಾಡಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಜಿಲ್ಲೆಯಲ್ಲಿ ಮತ್ತೊಂದು ಜೀವ ಬಲಿಯಾಗಿದೆ. ಹಳ್ಳ ದಾಟುವಾಗ ಕಾಲು ಜಾರಿ ಬಿದ್ದು, ಮಹಿಳೆ ಸಾವನ್ನಪ್ಪಿದ್ದಾರೆ. ಮೃತಪಟ್ಟ ಮಹಿಳೆ ಸುಶೀಲಾ ಎಂದು ಗುರುತಿಸಲಾಗಿದೆ. ಜಮೀನು ಕೆಲಸಕ್ಕೆ ತೆರಳುವಾಗ ಘಟನೆ ಸಂಭವಿಸಿದೆ.
ಜಮೀನಿನ ಪಕ್ಕದ ಹಳ್ಳ ದಾಟುವಾಗ ಕಾಲು ಜಾರಿ ಬಿದ್ದು, ಸುಶೀಲಾ ಸಾವನ್ನಪ್ಪಿದ ಪ್ರಕರಣ ಶೃಂಗೇರಿ ತಾಲೂಕಿನ ಬೇಗಾರು ಸಮೀಪದ ದೇವಾಲೆಕೊಪ್ಪ ಮಳಲಿ ಗ್ರಾಮದಲ್ಲಿ ಸಂಭವಿಸಿದೆ. ಶೃಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಶೃಂಗೇರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನು ಶೃಂಗೇರಿ ತಾಲೂಕಿನಲ್ಲೂ ಮಳೆಯ ಪ್ರಮಾಣ ಹೆಚ್ಚಾಗಿದೆ. ಕಾಫಿ ಹಾಗೂ ಅಡಿಕೆ ಬೆಳೆಗೆ ಕೊಳೆ ರೋಗ ಬರುವ ಭೀತಿಯಲ್ಲಿ ರೈತರಿದ್ದಾರೆ. ಶೃಂಗೇರಿಯ ನರಸಿಂಹವನದಲ್ಲಿ ಇರುವ ಶ್ರೀಮಠದಲ್ಲಿ ಜಗದ್ಗುರುಗಳನ್ನು ಭೇಟಿ ಮಾಡಿದ ರೈತರು, ಈ ಮಳೆ ಕಡಿಮೆ ಆಗುವಂತೆ ದೇವರಿಗೆ ಪ್ರಾರ್ಥನೆ ಸಲ್ಲಿಸುವಂತೆ ಕೇಳಿಕೊಂಡಿದ್ದಾರೆ.

ಸ್ವಾಮೀಜಿಗಳಿಗೆ ಅರಿಕೆ ಮಾಡಿಕೊಂಡರೆ ಮಳೆ ಕಡಿಮೆ ಆಗುತ್ತದೆ ಎಂಬ ನಂಬಿಕೆ ಇರುವ ಹಿನ್ನೆಲೆಯಲ್ಲಿ ರೈತರು ಮನವಿ ಮಾಡಿದ್ದಾರೆ.












Click it and Unblock the Notifications