Flood: ಕಲಬುರಗಿಯಲ್ಲಿ ಭಾರೀ ಮಳೆಗೆ ಪ್ರವಾಹ: ತ್ವರಿತ ಪರಿಹಾರ ಕ್ರಮಕ್ಕೆ ಸಿದ್ದರಾಮಯ್ಯ ಸೂಚನೆ
ಬೆಂಗಳೂರು, ಸೆಪ್ಟಂಬರ್ 28: ಉತ್ತರ ಕರ್ನಾಟಕದ ಬೀದರ್, ಕಲಬುರಗಿ, ರಾಯಚೂರು ಭಾಗಗಳಲ್ಲಿ ಭಾರೀ ಮಳೆ ಮುಮದುವರಿದಿದೆ. ಮಹಾರಾಷ್ಟ್ರ ಸೇರಿ ಮೇಲಿನ ಭಾಗದಲ್ಲಿ ನಿರಂತರ ಮಳೆಗೆ ತುಂಬಿದ ಉಜನಿ ಹಾಗೂ ವೀರ್ ಜಲಾಶಯದಿಂದ ಅಪಾರ ಪ್ರಮಾಣದ ನೀರನ್ನು ಹೊರ ಬಿಡಲಾಗಿದೆ. ಇದರಿಂದಾಗಿ ಜಲಾನಯನ ಪ್ರದೇಶಗಳಲ್ಲಿ ಮತ್ತು ಭಾರೀ ಮಳೆಗೆ ಕಲಬುರಗಿ ಜಿಲ್ಲೆಯಲ್ಲಿ ಪ್ರವಾಹ ಸ್ಥಿತಿ ಉಂಟಾಗಿದೆ. ಸಿಎಂ ಸಿದ್ದರಾಮಯ್ಯ ಪರಿಹಾರ ಕಾರ್ಯ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕಲಬುರ್ಗಿ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಹಾಗೂ ಕೃಷ್ಣಾ ನದಿಗೆ ಮಹಾರಾಷ್ಟ್ರದ ಉಜನಿ ಹಾಗೂ ನೀರ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರನ್ನು ಹೊರಬಿಟ್ಟಿರುವುದರಿಂದ ಭೀಮಾ ನದಿ ತೀರದಲ್ಲಿ ಹಾಗೂ ಬೆಣ್ಣೆತೋರಾದಲ್ಲಿ ಪ್ರವಾಹದ ಪರಿಸ್ಥಿತಿ ಉದ್ಭವಿಸಿದೆ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿಯ ಮೇಲೆ ತೀವ್ರ ನಿಗಾವಹಿಸಬೇಕು. ಅಗತ್ಯ ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ಕಂದಾಯ ಸಚಿವರಾದ ಕೃಷ್ಣಬೈರೇಗೌಡರು ಮತ್ತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹಾಗೂ ಕಲಬುರಗಿ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾಗಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವಿಟ್ಟರ್ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ತಲೆದೋರಿರುವ ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನೀಡಿದ ಸೂಚನೆಗಳು ಈ ಮುಂದಿನಂತಿವೆ.
* ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಸಿಇಒ ಗಳು ಪ್ರವಾಹ ಪೀಡಿತ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ ತುರ್ತು ಕ್ರಮ ಕೈಗೊಳ್ಳಬೇಕು.
* ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ತಕ್ಷಣ ಜಿಲ್ಲೆಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು.
* ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳು, ಜಲ ಸಂಪನ್ಮೂಲ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿಗಳು ಸ್ಥಳಕ್ಕೆ ಭೇಟಿ ನೀಡಬೇಕು. ಜನ ಮತ್ತು ಜಾನವಾರುಗಳ ಪ್ರಾಣ ರಕ್ಷಣೆಗೆ ಪ್ರಥಮ ಆದ್ಯತೆ ನೀಡಿ, ಅಗತ್ಯವಿರುವ ಎಲ್ಲಾ ಎಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು.
* ಸಂತ್ರಸ್ಥರಿಗೆ ಕಾಳಜಿ ಕೇಂದ್ರಗಳು, ಜಾನುವಾರುಗಳಿಗೆ ಅಗತ್ಯ ಮೇವು ಸೇರಿದಂತೆ ತಾತ್ಕಾಲಿಕ ಸೂರು ಕಲ್ಪಿಸಬೇಕು ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ.
ಭಾರೀ ಮಳೆ ಮುನ್ಸೂಚನ
ಕಲಬುರಗಿ, ರಾಯಚೂರು, ಬೀದರ್ ಹಾಗೂ ಕೊಪ್ಪಳ ಭಾಗಗಳಲ್ಲಿ ಮುಂದಿನ 48 ಗಂಟೆ ಸಹ (ಸೆಪ್ಟಂಬರ್ 29ರವರೆಗೆ) ಭಾರೀಯಿಂದ ಅತ್ಯಧಿಕ ಮಳೆ ನಿರೀಕ್ಷೆ ಇದೆ. ಕೆಲವೆಡೆ ಗುಡುಗು ಮಿಂಚು ಸಹಿತ ಧಾರಕಾರ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದೆಲ್ಲ ನೋಡಿದರೆ ಮುಂದಿನ ಎರಡು ಮೂರು ದಿನ ಪ್ರವಾಹ ಸ್ಥಿತಿಗತಿ ಮುಂದುವರಿಯುವ ಲಕ್ಷಣ ಕಾಣಿಸುತ್ತಿವೆ.












Click it and Unblock the Notifications