ಮಳೆ ಅಬ್ಬರ ಮತ್ತಷ್ಟು ಹೆಚ್ಚು, ಇನ್ನೂ 3 ದಿನ ಇದೇ ಪರಿಸ್ಥಿತಿ!
ಕರ್ನಾಟಕ ರಾಜ್ಯವೂ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಭೀಕರವಾಗಿ ಸುರಿಯುತ್ತಿರುವ ಮಳೆಯು ಮತ್ತೆ ಇನ್ನಷ್ಟು ತನ್ನ ರೌದ್ರ ರೂಪ ತೋರಿಸಲು ಸಜ್ಜಾಗಿದೆ. ಕಳೆದ 3 ತಿಂಗಳಿಂದ ನಿರಂತರವಾಗಿ ಮಳೆ, ಗಾಳಿ ಅಬ್ಬರ ಇದೆ. ಹಾಗೇ ಮಳೆ ಆರ್ಭಟ ಇನ್ನೇನು ಕಡಿಮೆ ಆಗಬಹುದು ಅನ್ನೋ ನಿರೀಕ್ಷೆಯಲ್ಲೇ ಜನ ಇದ್ದರು, ಆದರೆ ಮತ್ತೊಮ್ಮೆ ಮಳೆ ತನ್ನ ಆರ್ಭಟ ತೋರಿಸುತ್ತಿದೆ. ಹಾಗೇ ಮುಂದಿನ 3 ದಿನಗಳ ಕಾಲ, ಇದೇ ರೀತಿಯಾಗಿ ಇನ್ನಷ್ಟು ಮಳೆ ಸುರಿಯುವ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ.
ಎಲ್ಲಾ ಕಡೆ ಮಳೆ ಅಬ್ಬರ ಜೋರಾಗಿದ್ದು, ಇದೀಗ ಭಾರಿ ಮಳೆ ಕಾರಣಕ್ಕೆ ಹಲವು ಅವಾಂತರ ಎದುರಾಗಿದೆ. ಭಾರಿ ಮಳೆಯ ಅಬ್ಬರಕ್ಕೆ ಎಲ್ಲವೂ ಕೊಚ್ಚಿಕೊಂಡು ಹೋಗುತ್ತಿದ್ದು, ಇದೀಗ ಸುರಿಯುತ್ತಿರುವ ಮಳೆ ಅಬ್ಬರ ಕಂಡು ಕರ್ನಾಟಕದ ರೈತರು & ಸಾಮಾನ್ಯ ಜನರು ಭಯ ಪಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಯಾಕಂದ್ರೆ ಅಷ್ಟು ಜೋರಾಗಿ ಮಳೆ ಅಬ್ಬರಿಸುತ್ತಿರುವ ಕಾರಣಕ್ಕೆ ಯಾವ ಕ್ಷಣದಲ್ಲಿ ದೊಡ್ಡ ಅನಾಹುತ ಸಂಭವಿಸುತ್ತೋ ಅನ್ನೋ ಆತಂಕ ಎದುರಾಗಿದೆ. ಇಂತಹ ಸಮಯದಲ್ಲೇ ಮತ್ತಷ್ಟು ಮಳೆ ಸುರಿಯುವ ಬಗ್ಗೆ ಈಗ ವಾರ್ನಿಂಗ್ ಕೊಡಲಾಗಿದ್ದು, ಹಲವು ಜಿಲ್ಲೆಗಳಲ್ಲಿ ಭಾರಿ ಕಟ್ಟೆಚ್ಚರ ವಹಿಸಲಾಗಿದೆ.

ಯಾವ ಯಾವ ಜಿಲ್ಲೆಗಳಲ್ಲಿ ಮಳೆ?
ಕರ್ನಾಟಕದ ಕರಾವಳಿ ಜಿಲ್ಲೆಗಳು ಸೇರಿದಂತೆ ಮಲೆನಾಡು ಜಿಲ್ಲೆಗಳಲ್ಲೂ ಭಾರಿ ಮಳೆ ಸುರಿಯುತ್ತಿದೆ. ಹೌದು, ಜುಲೈ 26 ಶನಿವಾರ ಕೂಡ ಭಾರಿ ಘೋರ ಮಳೆ ಬರುತ್ತಿರುವ ಕಾರಣ ಹಲವು ಜಿಲ್ಲೆಗಳ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಮತ್ತೊಂದು ಕಡೆ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇದೇ ರೀತಿ ಇನ್ನಷ್ಟು ಮಳೆ ಸುರಿಯುವ ಮುನ್ನೆಚ್ಚರಿಕೆ ಇದೆ. ಹೀಗಾಗಿ ಮತ್ತೆ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಮಾಡುವ ಸಾಧ್ಯತೆ ದಟ್ಟವಾಗಿದೆ.
ಮುಂಗಾರು ಮಳೆ ಅಬ್ಬರ ಹಿನ್ನೆಲೆ ಜುಲೈ 26 ಉತ್ತರ ಕನ್ನಡ, ಹಾಸನ ಸೇರಿ ಚಿಕ್ಕಮಗಳೂರು ಜಿಲ್ಲೆಗಳ ಹಲವು ತಾಲೂಕುಗಳ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ & ಭಟ್ಕಳ, ಹಾಸನ ಜಿಲ್ಲೆಯ ಸಕಲೇಶಪುರ, ಬೇಲೂರು ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಕಳಸ, ಶೃಂಗೇರಿ, ಎನ್‌ಆರ್ ಪುರ, ಕೊಪ್ಪ ತಾಲೂಕು ಶಾಲೆಗಳಿಗೆ ಈಗ ರಜೆ ಘೋಷಣೆ ಮಾಡಲಾಗಿದೆ. ಹಾಗೇ ಮಲೆನಾಡಿನ ಹೆಬ್ಬಾಗಿಲು ಅಂತಾ ಕರೆಸಿಕೊಳ್ಳುವ ಶಿವಮೊಗ್ಗ ಜಿಲ್ಲೆಯ ಹಲವಾರು ತಾಲೂಕುಗಳಿಗೆ ಕೂಡ ಇದೀಗ ರಜೆ ಘೋಷಿಸಲಾಗಿದೆ. ಇನ್ನೂ ಹಲವು ಜಿಲ್ಲೆಗಳ ಪರಿಸ್ಥಿತಿ ಸೂಕ್ಷ್ಮವಾಗಿದ್ದು, ಮಳೆ ಮತ್ತಷ್ಟು ಹೆಚ್ಚಾಗುತ್ತಿದೆ...
ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲೂ ಮಳೆ...
ಕರಾವಳಿ ಜಿಲ್ಲೆಗಳು ಮಾತ್ರವಲ್ಲ ಉತ್ತರ ಕರ್ನಾಟಕ ಭಾಗದಲ್ಲಿ ಕೂಡ ಮಳೆ ತನ್ನ ಅಸಲಿ ರೂಪ ತೋರಿಸುತ್ತಾ ಆತಂಕ ಹೆಚ್ಚು ಮಾಡಿದೆ. ಬೀದರ್, ವಿಜಯಪುರ, ಬಾಗಲಕೋಟೆ & ರಾಯಚೂರು, ಬಳ್ಳಾರಿ ಸೇರಿದಂತೆ ಬೆಳಗಾವಿ, ಹುಬ್ಬಳ್ಳಿ & ಧಾರವಾಡ ಜಿಲ್ಲೆಗಳಲ್ಲೂ ಮಳೆಯ ಅಬ್ಬರ ಜೋರಾಗಿದೆ. ಇದರ ಜೊತೆಗೆ ಇನ್ನಷ್ಟು ಪ್ರದೇಶಗಳಿಗೆ ಮಳೆಯ ಮೋಡಗಳು ಆವರಿಸಿಕೊಳ್ಳುವ ಮುನ್ಸೂಚನೆ ಇದ್ದು, ಜುಲೈ 28 ಸೋಮವಾರದ ತನಕ ಇದೇ ಪರಿಸ್ಥಿತಿ ಇರಲಿದೆ. ಆ ನಂತರ ಕೂಡ ಮಳೆ ತನ್ನ ಆರ್ಭಟ ಮುಂದುವರಿಸಿದರೂ ಆಶ್ಚರ್ಯ ಇಲ್ಲ...












Click it and Unblock the Notifications