Heavy Rain: ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಭರ್ಜರಿ ಮಳೆ: ಛತ್ರಿ ಜೊತೆಯಲ್ಲಿಟ್ಟುಕೊಂಡೆ ಹೊರ ಬನ್ನಿ...
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಬೆಂಗಳೂರು ಸೇರಿದಂತೆ ಇಂದು ರಾಜ್ಯದ ಹಲವೆಡೆ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದು ಮಾತ್ರವಲ್ಲದೆ ನಾಳೆ (ನವೆಂಬರ್ 27) ಕೂಡ ಮಳೆ ಅರ್ಭಟ ಹೆಚ್ಚಾಗಿರಲಿದೆ ಎಂದು ಐಎಂಡಿ ಮಾಹಿತಿ ಹಂಚಿಕೊಂಡಿದೆ.
ಇನ್ನೇನು ಕೆಲವೇ ದಿನಗಳಲ್ಲಿ ನವೆಂಬರ್ ತಿಂಗಳು ಕಳೆದು ಡಿಸೆಂಬರ್ ಆಗಮಿಸಲಿದೆ. ರಾಜ್ಯದೆಲ್ಲೆಡೆ ಕ್ರಮೇಣ ಚಳಿ ಹೆಚ್ಚಾಗುತ್ತಿದೆ. ಈ ನಡುವೆ ಕೆಲ ದಿನಗಳಿಂದ ಬೆಂಗಳೂರಿನಲ್ಲಿ ಬಿಸಿಲಿನೊಂದಿಗೆ ಮೋಡ ಕವಿದ ವಾತಾವರಣ ಇದ್ದು ಬೆಳಗ್ಗೆ ಹಾಗೂ ಸಂಜೆ ದಟ್ಟ ಮಂಜು, ತಂಪು ಗಾಳಿಯೊಂದಿಗೆ ಚಳಿ ಹೆಚ್ಚಾಗುತ್ತಿದೆ.

ಬೆಳಿಗ್ಗೆ ಸೂರ್ಯ ನೆತ್ತಿಗೇರುವವರೆಗೂ ಚಳಿ ಅಧಿಕವಾಗಿರುತ್ತಿದೆ. ಇನ್ನೂ ಅಕ್ಟೋಬರ್ ತಿಂಗಳಲ್ಲಿ ಆಗಾಗ ಎಂಟ್ರಿ ಕೊಡುತ್ತಿದ್ದ ಮಳೆ ನವೆಂಬರ್ ತಿಂಗಳಲ್ಲಿ ಸಂಪೂರ್ಣವಾಗಿ ಕಡಿಮೆಯಾಗಿತ್ತು. ಆದರೀಗ ಇಂದು ಮತ್ತು ನಾಳೆ ಎರಡು ದಿನ ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಮಳೆಯಾಗುವ ಸೂಚನೆಯನ್ನು ಐಎಂಡಿ ನೀಡಿದೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿಯುತ್ತಿದೆ. ಇತ್ತ ಹಿಂದೂ ಮಹಾಸಾಗರದಲ್ಲಿ ಚಂಡಮಾರುತ ಉಂಟಾಗುತ್ತಿದೆ. ಹೀಗಾಗಿ ಇಂದು ಹಾಗೂ ನವೆಂಬರ್ 27ರಂದು ಕರ್ನಾಟಕ ಮತ್ತು ಕೇರಳದಲ್ಲಿ ಮಳೆ ಅಬ್ಬರ ಹೆಚ್ಚಾಗಲಿದೆ ಎನ್ನುವ ಸೂಚನೆ ನೀಡಲಾಗಿದೆ. ಕರ್ನಾಟಕದ ಹತ್ತು ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾದರೆ, ಏಳು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಇಲಾಖೆ ಹೇಳಿದೆ.
ಇಂದು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಕೊಡಗು, ಮಂಡ್ಯ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ರಾಮನಗರ, ತುಮಕೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದೆ.
ತಮಿಳುನಾಡು ಮಳೆ: ರೆಡ್ ಅಲರ್ಟ್ ಘೋಷಣೆ...
ಅಲ್ಲದೆ ಆಗ್ನೇಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು ಮುಂದಿನ ದಿನಗಳಲ್ಲಿ ಮಳೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪ್ರಾದೇಶಿಕ ಹವಾಮಾನ ಕೇಂದ್ರವು (ಆರ್‌ಎಂಸಿ) ಚೆನ್ನೈ, ಕಾರೈಕಲ್ ಮತ್ತು ಪುದುಚೇರಿಗೆ ಆರೆಂಜ್ ಅಲರ್ಟ್ ಘೋಷಿಸಿದ್ದು, ತಮಿಳುನಾಡಿನ ಡೆಲ್ಟಾ ಜಿಲ್ಲೆಗಳಿಗೆ ಗುರುವಾರ ಮತ್ತು ಶುಕ್ರವಾರ (ನವೆಂಬರ್ 28 ಮತ್ತು 29) ರೆಡ್ ಅಲರ್ಟ್ ಘೋಷಿಸಿದೆ.
ಜೊತೆಗೆ ತಮಿಳುನಾಡು-ಶ್ರೀಲಂಕಾ ಕರಾವಳಿಯ ಸಮೀಪದ ಪ್ರದೇಶದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಚೆನ್ನೈ ಸೇರಿದಂತೆ ಡೆಲ್ಟಾ ಜಿಲ್ಲೆಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಅಲ್ಲದೆ ನವೆಂಬರ್ 25 ರಿಂದ 28 ರವರೆಗೆ ಡೆಲ್ಟಾ ಜಿಲ್ಲೆಗಳು, ಚೆನ್ನೈ ಮತ್ತು ಸುತ್ತಮುತ್ತಲಿನ ಪ್ರತ್ಯೇಕ ಪ್ರದೇಶಗಳಲ್ಲಿ (11.5 cm ನಿಂದ 20.4 cm) ಭಾರೀ ಮಳೆಯಾಗುವುದರಿಂದ RMC ರೆಡ್ ಅಲರ್ಟ್ ಘೋಷಿಸಿದೆ.
ಶಬರಿಮಲೆಯಲ್ಲಿ ಇಂದು ಮತ್ತು ನಾಳೆ ಭಾರೀ ಮಳೆಯ ಎಚ್ಚರಿಕೆ
ಶಬರಿಮಲೆ ಅಯ್ಯಪ್ಪನ ದೇವಸ್ಥಾನದಲ್ಲಿ ಪ್ರಸಕ್ತ ಮಂಡಲ ಮತ್ತು ಮಕರ ದೀಪದ ಸೀಸನ್ ನಿಮಿತ್ತ ನ.15ರಂದು ಯಾತ್ರೆ ಆರಂಭವಾಗಿದೆ. ಅಂದಿನಿಂದ ಪ್ರತಿದಿನ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಸ್ವಾಮಿಯ ದರ್ಶನ ಪಡೆಯುತ್ತಿದ್ದಾರೆ. ನಿತ್ಯ ದೇವಸ್ಥಾನಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ. ಈ ನಡುವೆ ಶಬರಿಮಲೆಯಲ್ಲಿ ಇಂದು ಮತ್ತು ನಾಳೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಶಬರಿಮಲೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಂಭವವಿದ್ದು, ಬಾಂಬೆ, ನಿಲಕ್ಕಲ್ ಭಾಗದಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. 7 ಸೆಂ.ಮೀ ನಿಂದ 11 ಸೆಂ.ಮೀ. ವರೆಗೆ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.












Click it and Unblock the Notifications