Rain Alert: ಜೂನ್ 21ರಿಂದ ಎರಡು ವಾರ ಈ ಜಿಲ್ಲೆಗಳಿಗೆ ಭಾರಿ ಮಳೆ ಎಚ್ಚರಿಕೆ!
ಕಳೆದ ವರ್ಷ ಬರಗಾಲದಿಂದ ತತ್ತರಿಸಿದ್ದ ರಾಜ್ಯಕ್ಕೆ ಈ ಬಾರಿ ಮುಂಗಾರು ತಕ್ಕಮಟ್ಟಿಗೆ ಪರಿಹಾರ ನೀಡಿದೆ. ಕೆಲವು ಕಡೆಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದ್ದರೂ, ಇನ್ನೂ ಕೆಲವು ಭಾಗಗಳಲ್ಲಿ ಮಳೆ ಕೊರತೆಯಾಗಿದೆ.
ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಮಳೆ ಉತ್ತಮವಾಗಿದೆ ಎಂದು ಸಮಾಧಾನ ಮಾಡಿಕೊಳ್ಳಬಹುದು. ಕರಾವಳಿ ಭಾಗದಲ್ಲಿ ಈವರೆಗೂ ಮಳೆ ಕೊರತೆಯಾಗಿದ್ದು, ಮುಂದಿನ ಎರಡು ವಾರ ಆ ಕೊರತೆಯನ್ನು ನೀಗಿಸುವ ನಿರೀಕ್ಷೆ ಹೊಂದಲಾಗಿದೆ.

ಇನ್ನೆರಡು ದಿನಗಳಲ್ಲಿ ರಾಜ್ಯದಲ್ಲಿ ಮುಂಗಾರು ಮತ್ತಷ್ಟು ಚುರುಕಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ಕರಾವಳಿ, ಮಲೆನಾಡಿಗೆ ಭಾರಿ ಮಳೆ
ಜೂನ್ 21ರಿಂದ ಕರಾವಳಿ ಕರ್ನಾಟಕ ಮತ್ತು ಮಲೆನಾಡು ಪ್ರದೇಶಗಳಲ್ಲಿ ಜುಲೈ ಮೊದಲನೇ ವಾರದವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿದೆ.
22ನೇ ಜೂನ್‌ನಿಂದ ಕೋರ್ ಮಾನ್ಸೂನ್ ಸ್ಥಳಗಳಲ್ಲಿ, ವಿಶೇಷವಾಗಿ ದಕ್ಷಿಣ ಕರಾವಳಿ ಕರ್ನಾಟಕ ಮತ್ತು ಘಟ್ಟಗಳ ಪ್ರದೇಶಗಳಲ್ಲಿ ದೈನಂದಿನ ಆಧಾರದ ಮೇಲೆ 200 ಎಂಎಂಗಿಂತ ಹೆಚ್ಚಿನ ಮಳೆಯನ್ನು ನಿರೀಕ್ಷೆ ಮಾಡಬಹುದು ಎಂದು ಹೇಳಿದೆ.
ಎರಡು ವಾರಗಳ ಕಾಲ ರಾಜ್ಯದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು, ಜಲಾಶಯಗಳ ಒಳಹರಿವು ಹೆಚ್ಚಾಗುವ ಸಾಧ್ಯತೆ ಇದೆ.
ಕೃಷ್ಣಾ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆ
ಜೂನ್ 18 ರಿಂದ 26 ರವರೆಗೆ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಚದುರಿದಂತೆ ವ್ಯಾಪಕವಾಗಿ ಮಳೆಯಾಗುವ ಸಾಧ್ಯತೆಯಿದೆ. ಇದಲ್ಲದೆ, ಜೂನ್ 22 ಮತ್ತು 23 ರಿಂದ ಮಳೆಯ ಪ್ರಮಾಣವು ಹೆಚ್ಚಾಗುವ ಸಾಧ್ಯತೆಯಿದೆ, ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಅಲ್ಲಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಕಾವೇರಿ ವ್ಯಾಪ್ತಿಯಲ್ಲಿ ಮಳೆ
ಜೂನ್ 18 ರಿಂದ 26 ರವರೆಗೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಅಲ್ಲಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತ ಇದೆ. ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದ್ದು, ಜೂನ್ 21 ರಿಂದ ಜೂನ್ 26 ರವರೆಗೆ ವ್ಯಾಪಕವಾಗಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿದೆ.
ಬೆಂಗಳೂರಿನಲ್ಲಿ ಕೂಡ ಜೂನ್ 21ರಿಂದ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಜೂನ್ ತಿಂಗಳ ವಾಡಿಕೆಗಿಂತ ಈಗಾಗಲೇ ನಗರದಲ್ಲಿ ಹೆಚ್ಚಿನ ಮಳೆಯಾಗಿದ್ದು, ಜುಲೈನಲ್ಲಿ ಕೂಡ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ.











Click it and Unblock the Notifications