ಮಲೆನಾಡಿನಲ್ಲಿ ನಿಲ್ಲದ ಮಳೆಯ ಆರ್ಭಟ: ಮಹಿಳೆ ಸಾವು
Recommended Video

ಚಿಕ್ಕಮಗಳೂರು, ಜುಲೈ.10: ಜಿಲ್ಲೆಯಲ್ಲಿ ಇಂದು ಮಂಗಳವಾರವೂ ಧಾರಕಾರ ಮಳೆ ಮುಂದುವರೆದಿದ್ದು, ಪ್ರಸಿದ್ಧ ಪ್ರವಾಸಿತಾಣ ಮುಳ್ಳಯ್ಯನ ಗಿರಿಶ್ರೇಣಿಯಲ್ಲಿ ಮತ್ತೆ ಗುಡ್ಡ ಕುಸಿತವುಂಟಾಗಿದೆ. ರಸ್ತೆ ಪಕ್ಕದಲ್ಲಿಯೇ ಗುಡ್ಡ ನಿಧಾನವಾಗಿ ಕುಸಿಯುತ್ತಿದ್ದು, ಕವಿಕಲ್ ಗಂಡಿ ರಸ್ತೆಯಲ್ಲಿ ಕಲ್ಲುಗಳನ್ನಿಟ್ಟು ವಾಹನ ಸವಾರರಿಗೆ ಮುನ್ನೆಚ್ಚರಿಕೆ ನೀಡಲಾಗುತ್ತಿದೆ.
ಸ್ವಲ್ಪ ಎಚ್ಚರ ತಪ್ಪಿದರೂ ಪ್ರಯಾಣಿಕರು ಪ್ರಪಾತಕ್ಕೆ ಬೀಳುವ ಸಾಧ್ಯತೆ ಹೆಚ್ಚಿದೆ. ಕಿರಿದಾದ ರಸ್ತೆಯ ಅಂಚಿನಲ್ಲಿಯೇ ಗುಡ್ಡ ಕುಸಿತ ಉಂಟಾದ ಪರಿಣಾಮ ವಾಹನ ಸವಾರರಲ್ಲಿ ಆತಂಕವುಂಟಾಗಿದೆ.
ಮಲೆನಾಡಲ್ಲಿ ರಾತ್ರಿಯಿಡೀ ಭಾರೀ ಮಳೆ ಸುರಿದಿದ್ದು, ಕೆಲವು ಕಡೆಗಳಲ್ಲಿ ಮಳೆ ಇನ್ನೂ ಧಾರಾಕಾರವಾಗಿ ಸುರಿಯುತ್ತಲೇ ಇದೆ. ಕಳಸ, ಶೃಂಗೇರಿ, ಕುದುರೆಮುಖ, ಬಾಳೆಹೊನ್ನೂರು ಭಾಗದಲ್ಲಿ ವರುಣನ ಅಬ್ಬರ ಹೆಚ್ಚಾಗಿದೆ.

ಕೆಲವು ಕಡೆ ಬೆಳಗ್ಗೆಯಿಂದ ವರುಣ ಕೊಂಚ ಬಿಡುವು ನೀಡಿದ್ದು, ಕೊಪ್ಪ, ಎನ್.ಆರ್.ಪುರ, ಮೂಡಿಗೆರೆ ಭಾಗದಲ್ಲಿ ಸಾಧಾರಣ ಮಳೆಯಾಗಿದೆ. ತುಂಗಾ, ಭದ್ರಾ, ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

ಮಹಿಳೆ ಬಲಿ: ಹಗಲಿರುಳು ಸುರಿದ ಮಳೆಗೆ ಕೊಟ್ಟಿಗೆಯ ಗೋಡೆ ಕುಸಿದು ಮಹಿಳೆ ಸಾವನ್ನಪ್ಪಿದ್ದಾರೆ. ವನಜಾ (48) ಮೃತ ಮಹಿಳೆ. ತಾಲೂಕಿನ ಕಂಬಿಹಳ್ಳಿಯಲ್ಲಿ ಈ ಘಟನೆ ನಿನ್ನೆ ಸೋಮವಾರ ಸಂಜೆ ಸಂಭವಿಸಿದೆ.

ವನಜಾ ಅವರು ಕೊಟ್ಟಿಗೆಯಲ್ಲಿ ಹಸು ಕಟ್ಟಿಹಾಕುವಾಗ ಗೋಡೆ ಕುಸಿದಿದೆ. ತೀವ್ರ ಮಳೆಗೆ ಗೋಡೆ ಶಿಥಿಲಗೊಂಡ ಪರಿಣಾಮ ಗೋಡೆ ಕುಸಿದಿದೆ. ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications