ದಂಡ ಮೊತ್ತ ಹೆಚ್ಚಳ; ಪೆಟ್ರೋಲ್ ಸ್ಥಗಿತಗೊಳಿಸುವ ಎಚ್ಚರಿಕೆ
Recommended Video
ಬೆಂಗಳೂರು, ಸೆಪ್ಟೆಂಬರ್ 09 : ಸಂಚಾರಿ ನಿಯಮ ಉಲ್ಲಂಘನೆಗೆ ವಿಧಿಸುತ್ತಿರುವ ದಂಡವನ್ನು ಕಡಿಮೆ ಮಾಡದಿದ್ದರೆ ಪೆಟ್ರೋಲ್, ಡೀಸೆಲ್ ಪೂರೈಕೆ ಸ್ಥಗಿತಗೊಳಿಸುವ ಬೆದರಿಕೆ ಹಾಕಲಾಗಿದೆ. ಹೆಚ್ಚಿನ ಮೊತ್ತದ ದಂಡ ವಿಧಿಸುತ್ತಿರುವುದಕ್ಕೆ ಈಗಾಗಲೇ ಆಕ್ರೋಶ ವ್ಯಕ್ತವಾಗುತ್ತಿದೆ.
ಕರ್ನಾಟಕ ತೈಲ ಸಾಗಣೆ ಟ್ಯಾಂಕರ್ ಚಾಲಕರು ಮತ್ತು ಕ್ಲೀನರ್ ಒಕ್ಕೂಟದ ಅಧ್ಯಕ್ಷ ಶ್ರೀರಾಮ್ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಗೆ ಈ ಕುರಿತು ಪತ್ರ ಬರೆದಿದ್ದಾರೆ. ಅವೈಜ್ಞಾನಿಕವಾಗಿ ದಂಡಮೊತ್ತವನ್ನು ಹೆಚ್ಚಳ ಮಾಡಿರುವುದನ್ನು ಖಂಡಿಸಿದ್ದಾರೆ.
"ಚಾಲಕರು ಹಾಗೂ ಮಾಲೀಕರ ಕಷ್ಟಕ್ಕೆ ಸರ್ಕಾರ ಸ್ಪಂದಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ತೈಲ ಸಾಗಣೆ ಸ್ಥಗಿತಗೊಳಿಸಿ ಮುಷ್ಕರ ಆರಂಭಿಸಲಾಗುತ್ತದೆ" ಎಂದು ಶ್ರೀರಾಮ್ ಪತ್ರದಲ್ಲಿ ಎಚ್ಚರಿಕೆ ನೀಡಿದ್ದಾರೆ.

"ತೈಲ ಉತ್ಪನ್ನಗಳನ್ನು ಸಾಗಣೆ ಮಾಡುವ ಟ್ಯಾಂಕರ್ ಚಾಲಕರಿಗೆ ದಿನಕ್ಕೆ 525 ರೂ. ವೇತನವಿದೆ. ಜನರ ದುಡಿಮೆ ಮತ್ತು ಆರ್ಥಿಕ ಮಟ್ಟವನ್ನು ತಿಳಿದುಕೊಂಡು ದಂಡವನ್ನು ಪರಿಷ್ಕರಣೆ ಮಾಡಬೇಕು. ಬೇಕಾಬಿಟ್ಟಿಯಾಗಿಯಾಗಿ ದಂಡ ಹೆಚ್ಚಳ ಮಾಡಿರುವುದು ಸರಿಯಲ್ಲ" ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಬೆಂಗಳೂರು ನಗರದಲ್ಲಿ 1800ಕ್ಕೂ ಅಧಿಕ ತೈಲ ಉತ್ಪನ್ನ ಸರಬರಾಜು ಮಾಡುವ ಟ್ಯಾಂಕರ್‌ಗಳಿವೆ. ಸಂಚಾರಿ ನಿಯಮ ಉಲ್ಲಂಘನೆ ಎಂದು ಚಾಲಕರಿಂದ 10 ರಿಂದ 35 ಸಾವಿರದ ತನಕ ದಂಡ ವಸೂಲಿ ಮಾಡಲಾಗಿದೆ.
"ಅಪಘಾತಗಳನ್ನು ತಡೆಯಲು ಮೊದಲು ರಸ್ತೆ ಸರಿಪಡಿಸಿ. ಸಂಚಾರಿ ನಿಯಮದ ಕುರಿತು ಜಾಗೃತಿ ಮೂಡಿಸಿ. ಚಾಲನಾ ಪರವಾನಗಿ ನೀಡುವಾಗಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ" ಎಂದು ಶ್ರೀರಾಮ್ ಪತ್ರದಲ್ಲಿ ವಿವರಣೆ ನೀಡಿದ್ದಾರೆ.
ಸಂಚಾರಿ ನಿಯಮ ಉಲ್ಲಂಘನೆಗೆ ಭಾರಿ ಮೊತ್ತದ ದಂಡ ವಿಧಿಸುವ ಮೋಟಾರು ವಾಹನ ತಿದ್ದುಪಡಿ ಕಾಯ್ದೆ 2019 ದೇಶಾದ್ಯಂತ ಜಾರಿಗೆ ಬಂದಿದೆ. ಆಗಸ್ಟ್ 9ರಂದು ಕೇಂದ್ರ ಸರ್ಕಾರ ಕಾಯ್ದೆಯನ್ನು ಜಾರಿಗೆ ತಂದು ಅಧಿಸೂಚನೆ ಹೊರಡಿಸಿತ್ತು.
ಬೆಂಗಳೂರು ನಗರದಲ್ಲಿ ಒಂದೇ ದಿನ 30 ಲಕ್ಷ ದಂಡವನ್ನು ಸಂಚಾರಿ ಪೊಲೀಸರು ಸಂಗ್ರಹ ಮಾಡಿದ್ದಾರೆ. ದಂಡದ ಹೆಸರಿನಲ್ಲಿ ಚಾಲಕರಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪಗಳು ಇವೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಟ್ವೀಟ್ ಮೂಲಕ ದಂಡ ಮೊತ್ತವನ್ನು ಕಡಿಮೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದರು.












Click it and Unblock the Notifications