ಕರ್ನಾಟಕದಲ್ಲಿ ಬಿಸಿಗಾಳಿ: ಮಾಲೀಕರಿಗೆ, ಕಾರ್ಮಿಕರಿಗೆ ಸಲಹೆಗಳು
ಬೆಂಗಳೂರು, ಮೇ 03: ಕರ್ನಾಟಕದಲ್ಲಿ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಹಲವು ಜಿಲ್ಲೆಗಳಲ್ಲಿ ಮಳೆ ಸುರಿದರೂ ಸಹ ಬಿಸಿಗಾಳಿಯ ತಾಪ ನಿಂತಿಲ್ಲ. ಬಿಸಿಲು, ಬಿಸಿಗಾಳಿಯ ತಾಪದ ಕಾರಣ ಬಿಸಿಲಿನಲ್ಲಿ ಕೆಲಸ ಮಾಡುವ ಕಾರ್ಮಿಕರು ಹೈರಾಣಾಗಿದ್ದಾರೆ.
ಬೇಸಿಗೆಯ ಧಗೆ, ಸೂರ್ಯನ ಶಾಖ ಹೆಚ್ಚಾಗುತ್ತಿರುವುದರಿಂದ ಶಾಖದ ಹೊಡೆತದಿಂದಾಗಿ ಕಾರ್ಮಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆಯಿರುವುದರಿಂದ, ಮುಂಜಾಗ್ರತಾ ಕ್ರಮವಾಗಿ ಹೊರಗಡೆ ಕೆಲಸ ನಿರ್ವಹಿಸುವ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರು, ಬೀದಿ ಬದಿ ವ್ಯಾಪಾರಸ್ಥರು, ವಾಹನ ಚಾಲಕರ ಮತ್ತು ಇತರ ವರ್ಗದ ಎಲ್ಲಾ ಕೆಲಸಗಾರರ ಆರೋಗ್ಯವನ್ನು ಕಾಪಾಡಲು ಸಲಹೆಗಳನ್ನು ನೀಡಲಾಗಿದೆ.

ಎಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣದಾರ ಮತ್ತು ಇತರೆ ಉದ್ದಿಮೆಗಳ ಮಾಲೀಕರಿಗೆ ಮತ್ತು ಕಾರ್ಮಿಕರಿಗೆ ಸಲಹೆ-ಸೂಚನೆಗಳನ್ನು ನೀಡಿ ಮುಂದಿನ ದಿನಗಳಲ್ಲಿ ತಮ್ಮ ಸುರಕ್ಷತೆಯನ್ನು ಕಾಪಾಡುವ ಹಿನ್ನಲೆಯಲ್ಲಿ ಸಹಕರಿಸುವಂತೆಯೂ ಕೋರಲಾಗಿದೆ. ಕಾರ್ಮಿಕರಿಗೆ ನೀಡಿರುವ ಸಲಹೆಗಳು ಇಲ್ಲಿವೆ.
* ಕೆಲಸದ ಸ್ಥಳದಲ್ಲಿ ಕಾರ್ಮಿಕರಿಗೆ ತಂಪಾದ ಕುಡಿಯುವ ನೀರು ಮತ್ತು ಎಲೆಕ್ಟ್ರೋಲೈಟ್ ಪೂರಕಗಳ ವ್ಯವಸ್ಥೆಯನ್ನು ಮಾಲೀಕರು ಮಾಡಬೇಕು.
* ಡಿ-ಹೈಡ್ರೇಟೆಡ್ ಆಗದಿರಲು ಕಾರ್ಮಿಕರು ಮತ್ತು ಎಲ್ಲರೂ ಪ್ರತಿ 20 ನಿಮಿಷಗಳಿಗೊಮ್ಮೆ ಅಥವಾ ಹೆಚ್ಚು ಭಾರಿ ನೀರನ್ನು ಕುಡಿಯುವಂತೆ ಹಾಗೂ ಕೆಲಸದ ನಡುವೆ ವಿಶ್ರಾಂತಿ ಪಡೆದು ಕೆಲಸ ಮಾಡಲು ಗಮನ ವಹಿಸಬೇಕು.
* ಶ್ರಮದಾಯಕ ಮತ್ತು ಹೊರಾಂಗಣ ಚಟುವಟಿಕೆಗಳನ್ನು ತಾಪಮಾನ ಕಡಿಮೆ ಇರುವ ಸಮಯದಲ್ಲಿ, ಅಂದರೆ ಬೆಳಗಿನ ಅಥವಾ ಸಂಜೆಯ ಸಮಯದಲ್ಲಿ ನಿರ್ವಹಿಸುವುದು.
* ಅದಷ್ಟು ಕಾರ್ಮಿಕರು ಬೆಳಗ್ಗೆ 11 ರಿಂದ ಸಂಜೆ 4 ರವರೆಗೆ ನೇರ ಸೂರ್ಯನ ಬಿಸಿಲಿನಲ್ಲಿ ಕೆಲಸ ನಿರ್ವಹಿಸದಂತೆ ಮಾಲೀಕರು ಎಚ್ಚರ ವಹಿಸುವುದು. ಸಾಧ್ಯವಾದಲ್ಲಿ ಬೃಹತ್ ಕಟ್ಟಡ ಮತ್ತು ಇತರೆ ನಿರ್ಮಾಣದಾರರು ಕೆಲಸದ ಪಾಳಿಯನ್ನು ರಾತ್ರಿ ವೇಳೆ ಮಾಡಬಹುದಾಗಿರುತ್ತದೆ.
* ಹೆಚ್ಚಿನ ಬಿಸಿಲಿನ ತಾಪಮಾನವಿರುವ ಸಮಯದಲ್ಲಿ ಕಾರ್ಮಿಕರಿಗೆ ಕೆಲಸ ಮಾಡಲು ಅನುಕೂಲವಾಗುವಂತೆ ನೆರಳು ಇರುವ ಪ್ರದೇಶವನ್ನು ಮಾಲೀಕರು ಒದಗಿಸುವುದು ಅಥವಾ ನೌಕರರು ಮತ್ತು ಕಾರ್ಮಿಕರಿಗೆ ಕೆಲಸ ಸಮಯವನ್ನು ಕಾರ್ಮಿಕರೊಂದಿಗೆ ಸಮಾಲೋಚಿಸಿ ಮರು-ನಿಗದಿಪಡಿಸಿಕೊಳ್ಳುವುದು.
* ಕೆಲಸದ ಸ್ಥಳದ ಬಳಿ ವಿಶ್ರಾಂತಿ ಪಡೆಯಲು ಗಾಳಿ, ಬೆಳಕು ಮತ್ತು ಕುಡಿಯುವ ನೀರಿನ ವ್ಯವಸ್ಥೆಯೊಂದಿಗೆ ತಾತ್ಕಾಲಿಕ ಶೆಡ್ ಗಳನ್ನು ಮಾಲೀಕರು ನಿರ್ಮಿಸತಕ್ಕದ್ದು.
* ಕಾರ್ಮಿಕರಿಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಹೊರಡಿಸಿದ ಆರೋಗ್ಯ ಸಲಹೆಯನ್ನು ಅನುಸರಿಸಿ, ಕಾರ್ಮಿಕರ ನಿಯಮಿತ ಆರೋಗ್ಯ ತಪಾಸಣೆಯನ್ನು ಖಚಿತಪಡಿಸಿಕೊಳ್ಳಲು ಆರೋಗ್ಯ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸುವುದು.
* ಕೆಲಸದ ಸಮಯದಲ್ಲಿ ಕಾರ್ಮಿಕರು ಆದಷ್ಟು ಹತ್ತಿಯ ಮತ್ತು ಶ್ವೇತ ವರ್ಣದ ತುಂಬು ತೋಳಿನ ಅಂಗಿ/ ಬಟ್ಟೆ ಮತ್ತು ಟೋಪಿ, ಕೂಲಿಂಗ್ ಗ್ಲಾಸ್ ಧರಿಸುವುದು.
* ಒಳಾಂಗಣದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸಂಬಂಧಿಸಿದಂತೆ ಕೊಠಡಿಯ ತಾಪಮಾನವನ್ನು ಕಡಿಮೆ ಮಾಡಲು ಸೂಕ್ತ ಕ್ರಮಗಳನ್ನು ಮಾಲೀಕರು ತೆಗೆದುಕೊಳ್ಳುವುದು (use window, shades, fanning and cross ventilation, Artificial Humidification)
* ಹೀಟ್ ಸ್ಟ್ರೋಕ್ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿಯನ್ನು ತಂಪಾದ ಜಾಗಕ್ಕೆ ಸ್ಥಳಾಂತರಿಸಿ ಶಾಖದ ಹೊಡೆತದಿಂದ ಬಳಲುತ್ತಿರುವ ವ್ಯಕ್ತಿಯು ಕನಿಷ್ಟ ಬಟ್ಟೆಯನ್ನು ಹೊಂದಿರುವಂತೆ ನೋಡಿಕೊಂಡು, ವ್ಯಕ್ತಿಗೆ ತಣ್ಣೀರಿನಿಂದ ಸ್ಪಾಂಜ್ ಮಾಡಬೇಕು ಅಥವಾ ಐಸ್ ಪ್ಯಾಕ್‌ಗಳನ್ನು ಉಪಯೋಗಿಸುವುದು.
* ಹೀಟ್ ವೇವ್ ಸ್ಟ್ರೋಕ್‌ಗೆ ಒಳಗಾದ ವ್ಯಕ್ತಿಗೆ ಯಾವುದೇ ಸುಧಾರಣೆ ಕಂಡುಬರದಿದ್ದರೆ, ಅವರನ್ನು ತಕ್ಷಣ ಆಸ್ಪತ್ರೆಗೆ ಸ್ಥಳಾಂತರಿಸಲು ಕ್ರಮ ವಹಿಸತಕ್ಕದ್ದು.
ಎಲ್ಲಾ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಕ್ತ ಕ್ರಮಕ್ಕಾಗಿ ಸಲಹೆಗಳನ್ನು ಕಳಿಸಲಾಗಿದೆ. ಎಲ್ಲಾ ಮಾಲೀಕರ ಮತ್ತು ಕಾರ್ಮಿಕರ ಸಂಘಟನೆಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳ ಮಾಹಿತಿ ಹಾಗೂ ಸೂಕ್ತ ಕ್ರಮಕ್ಕಾಗಿ ಕಳುಹಿಸಲಾಗಿದೆ.












Click it and Unblock the Notifications