ನಂಜನಗೂಡು ಶ್ರೀಕಂಠೇಶ್ವರನ ಹುಂಡಿಗೆ ಕೈ ಹಾಕಿದ ಬಿಜೆಪಿ ಶಾಸಕ: ಇದು ಬಿಜೆಪಿಯ ನೈಜ ಜಾಯಮಾನ ಎಂದ ಎಚ್‌ಡಿಕೆ
ಬೆಂಗಳೂರು, ಏಪ್ರಿಲ್ 04: ನಂಜನಗೂಡು ಶ್ರೀಕಂಠಶ್ವರ ದೇವಾಲಯದ ಹುಂಡಿಯ ಹಣವನ್ನು ವಿವಿಧ ಕಾರ್ಯಗಳಿಗೆ ಬಳಸಿಕೊಂಡಿರುವ ಬಿಜೆಪಿ ಶಾಸಕ ಹರ್ಷವರ್ಧನ ಅವರನ್ನು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಜೆಪಿ ಶಾಸಕರಿಗೆ ಕನಿಷ್ಠ ನಾಚಿಕೆ, ಸಂಕೋಚವಿಲ್ಲವೆಂದು ಅವರು ವಾಗ್ದಾಳಿ ನಡೆಸಿದ್ದಾರೆ. 'ಪ್ರಜಾವಾಣಿ' ಪತ್ರಿಕೆಯಲ್ಲಿ ಪ್ರಕಟಗೊಂಡಿರುವ ವರದಿಯನ್ನು ಅವರು ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ.
'ಸ್ವಯಂ ಘೋಷಿತ ಧರ್ಮೋದ್ಧಾರಕರು, ಹಿಂದೂ ಧರ್ಮವನ್ನು ಗುತ್ತಿಗೆಗೆ ಪಡೆದುಕೊಂಡವರೆಂದು ಬೀಗುವವರಿಗೆ ಧರ್ಮವೆಂದರೆ ಅಧಿಕಾರಕ್ಕಿರುವ ರಾಜಮಾರ್ಗವಾಗಿದೆ. ದೇವರ ಹುಂಡಿ ಎಂಬುದು ಲಜ್ಜೆಗೆಟ್ಟು ಹೊಡೆದುಕೊಳ್ಳುವ ನಿಧಿ. ಇವರಿಗೆ ನಾಚಿಕೆ, ಸಂಕೋಚ ಎನ್ನುವುದು ಕನಿಷ್ಠಕ್ಕಿಂತ ಕಡಿಮೆ ಎನ್ನುವುದಕ್ಕೆ ಇಲ್ಲಿದೆ ಸಾಕ್ಷಿ' ಎಂದು ಎಚ್‌ಡಿಕೆ ಹರಿಹಾಯ್ದಿದ್ದಾರೆ.

'ನಾಡಿಗೆ ನಾಡೇ ಶ್ರದ್ಧಾಭಕ್ತಿಯಿಂದ ನಡೆದುಕೊಳ್ಳುವ ನಂಜನಗೂಡಿನ ಶ್ರೀ ನಂಜುಂಡೇಶ್ವರ ದೇವರ ಹುಂಡಿಗೆ ಬಿಜೆಪಿ ಶಾಸಕ ಬಿ.ಹರ್ಷವರ್ದನ್ ಅವರು ಕೈ ಹಾಕಿರುವುದು ದೈವಕ್ಕೆ ಎಸಗಿದ ಅಪಮಾನ. ಇದು ಯೋಜನೆಗಳ ಹೆಸರಿನಲ್ಲಿ ದೇವರ ಹುಂಡಿಗೂ ಕನ್ನ ಕೊರೆಯುವ ಬಿಜೆಪಿಯ ನೈಜ ಜಾಯಮಾನ. ಕಮಲಪಕ್ಷ ಮತ್ತೊಮ್ಮೆ ಬೆತ್ತಲಾಗಿದೆ' ಎಂದು ಕುಮಾರಸ್ವಾಮಿ ಹೇಳಿದ್ದಾರೆ.
'ಮುಜರಾಯಿ ದೇವಾಲಯದ ಆದಾಯ ಆಯಾ ದೇಗುಲದ ಅಭಿವೃದ್ಧಿಗೇ ಬಳಸಬೇಕು ಎನ್ನುವುದು ಕಾನೂನು. ಬಿಜೆಪಿ ಸರಕಾರ ಕಾನೂನನ್ನು ಗಾಳಿಗೆ ಬಿಟ್ಟು, 40 ಪರ್ಸೆಂಟ್‌ಗಾಗಿ ದೇವರ ದುಡ್ಡನ್ನೇ ನುಂಗಿನೀರು ಕುಡಿದು, ಆ ಹಣವನ್ನೂ ಚುನಾವಣೆಗೆ ಸುರಿಯಲು ಹೊರಟಿದೆ. ಪಾಪದ ಪಕ್ಷಕ್ಕೆ ಪ್ರಾಯಶ್ಚಿತ್ತ ತಪ್ಪದು.. ಶ್ರೀ ನಂಜುಂಡೇಶ್ವರನ ಶಾಪವೂ ತಟ್ಟದೆ ಇರದು' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಹೇಳುವುದು ಒಂದು, ಮಾಡುವುದು ಇನ್ನೊಂದು. ಧರ್ಮ, ದೇವರು ಎನ್ನುವುದು ಬಿಜೆಪಿಗೆ ಮತಫಸಲು ಕೊಡುವ ಸಾಧನಗಳಷ್ಟೇ. ಶ್ರದ್ಧೆ, ಭಕ್ತಿ ಜನರದ್ದು; ಭುಕ್ತಿ ಮಾತ್ರ ಬಿಜೆಪಿಯದ್ದು. ನೀಚತನದ ಪರಮಾವಧಿ ಇದು. ಸಮುದಾಯ ಭವನಗಳ ನಿರ್ಮಾಣಕ್ಕೆ ದೇವರ ದುಡ್ಡೇ ಬೇಕೆ? ಕೇತ್ರಕ್ಕೆ ಸರಕಾರ ಕೊಟ್ಟ ಹಣ, ಶಾಸಕರ ವಿಶೇಷ ಅನುದಾನ ಇತ್ಯಾದಿಗಳೆಲ್ಲ ಎಲ್ಲಿ ಹೋದವು?' ಎಂದು ಪ್ರಶ್ನಿಸಿದ್ದಾರೆ.

'ರಾಜ್ಯ ಬಿಜೆಪಿ ಸರಕಾರವು ಶ್ರೀ ನಂಜುಂಡೇಶ್ವರ ದೇವರ ಹುಂಡಿಯನ್ನು ಎಗರಿಸುವ ಶಾಸಕರ ಧೂರ್ತ ಪ್ರಯತ್ನಕ್ಕೆ ತಡೆ ಹಾಕಬೇಕು. ಈ ಬಗ್ಗೆ ಹೊರಡಿಸಿರುವ ಆದೇಶವನ್ನು ಕೂಡಲೇ ಹಿಂಪಡೆಯಬೇಕು. ದೇವರ ದುಡ್ಡನ್ನು ದೇವಾಲಯದ ಅಭಿವೃದ್ಧಿಗೇ ಬಳಸಬೇಕು' ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಬಿಜೆಪಿಯಿಂದ ಅಸಹಿಷ್ಣುತೆ ಪೋಷಣೆ
'ಕನಕಪುರ ತಾಲೂಕಿನ ಸಾತನೂರು ಬಳಿ ಜಾನುವಾರು ಸಾಗಣೆ ಮಾಡುತ್ತಿದ್ದ ಕಾರಣಕ್ಕೆ ಯುವಕನೊಬ್ಬ ಹತ್ಯೆಗೀಡಾಗಿರುವುದು ಸರ್ವಜನಾಂಗದ ಶಾಂತಿಯ ತೋಟವಾದ ಕರ್ನಾಟಕದಲ್ಲಿ ಕಳೆದ ಮೂರೂವರೆ ವರ್ಷದಲ್ಲಿ ಬಿಜೆಪಿ ಸರಕಾರ ವ್ಯವಸ್ಥಿತವಾಗಿ ಬೆಳೆಸಿ ಪೋಷಿಸಿರುವ ಅಸಹನೆ, ಅಸಹಿಷ್ಣುತೆಯೇ ಕಾರಣ' ಎಂದು ಕುಮಾರಸ್ವಾಮಿ ಗುಡುಗಿದ್ದಾರೆ.
'ಜಾನುವಾರು ಸಾಗಿಸುತ್ತಿದ್ದಾನೆ ಎಂದರೆ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಬಹುದಿತ್ತು ಅಥವಾ ಮಾಹಿತಿ ನೀಡಬಹುದಿತ್ತು. ಅದರ ಹೊರತಾಗಿ ಹತ್ಯೆ ಮಾಡುವುದು ಎಂದರೆ ಅರ್ಥವೇನು? ಚುನಾವಣೆ ಹೊತ್ತಿನಲ್ಲಿ ಇದರ ಹಿಂದಿರುವ ಷಡ್ಯಂತ್ರ ಎಂಥದ್ದು ಎಂದು ಯಾರಿಗಾದರೂ ಅರ್ಥ ಆಗುವಂತದ್ದೇ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಎಲ್ಲಿಗೆ ಬಂದು ನಿಂತಿದೆ?' ಎಂದು ಪ್ರಶ್ನಿಸಿದ್ದಾರೆ.

'ಯುವಕನ ಕೊಲೆಯಾದ ರಾತ್ರಿ ಆರೋಪಿ ಮತ್ತವನ ಸಹಚರರು ರಸ್ತೆಯಲ್ಲಿ ಕ್ರಿಕೆಟ್ ಬ್ಯಾಟುಗಳನ್ನು ಹಿಡಿದು ಗೋ ರಕ್ಷಕನ ಸೋಗು ಹಾಕಿಕೊಂಡು ಪಹರೆ ಕಾಯುವ ನಾಟಕದ ವಿಡಿಯೋ ಮಾಡಿ ತನ್ನ ಜಾಲತಾಣದಲ್ಲಿಯೇ ಹಾಕಿಕೊಂಡಿದ್ದಾನೆ. ಅವರ ಉದ್ದೇಶವೇ ಬೇರೆ ಇತ್ತು ಎನ್ನುವುದು ಸ್ಪಷ್ಟ. ಇದಕ್ಕಿಂತ ಸಾಕ್ಷಿ ಬೇಕೆ? ಕೂಡಲೇ ಪೊಲೀಸರು ಆರೋಪಿಗಳನ್ನು ಬಂಧಿಸಬೇಕು' ಎಂದೂ ಅವರು ಒತ್ತಾಯಿಸಿದ್ದಾರೆ.
'ರಾತ್ರಿ ಹೊತ್ತು ಇವರು ರಸ್ತೆಯಲ್ಲಿ ಕ್ರಿಕೆಟ್ ಬ್ಯಾಟುಗಳನ್ನಿಡಿದುಕೊಂಡು ಗಸ್ತು ತಿರುಗುತ್ತಿದ್ದರು ಎಂದರೆ, ಇವರಿಗೆ ಪೊಲೀಸರ ಮೌನ ಅನುಮತಿ ಇತ್ತಾ? ಇಲ್ಲವೇ, ಇವರೇನು ಮಫ್ತಿ ಪೊಲೀಸರಾ? ಅಥವಾ ಗೋ ರಕ್ಷಣೆ ನೆಪದಲ್ಲಿ ದರೋಡೆಗೆ ಹೊಂಚು ಹಾಕಿ ಕೂತಿದ್ದರಾ? ಈ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ' ಎಂದು ಹೇಳಿದ್ದಾರೆ.
'ನಿಜಕ್ಕಾದರೆ, ಗೋ ಸಂಕ್ಷಣೆಯ ಸೋಗಿನ ಈ ಸೋಗಲಾಡಿಗಳಿಗೆ ಆಶ್ರಯ, ಮೇವು ಇಲ್ಲದೆ ಬೀದಿಪಾಲಾಗಿರುವ ಅನಾಥ ಗೋವುಗಳ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಆದರೆ, ಜಾತಿ ಧರ್ಮಗಳ ನಡುವೆ ಬೆಂಕಿ ಇಟ್ಟು ಚಳಿ ಕಾಯಿಸಿಕೊಳ್ಳುವುದೇ ಇವರ ಜಾಯಮಾನ. ಪೊಲೀಸ್ ವ್ಯವಸ್ಥೆ ಗಾಢ ನಿದ್ದೆಯಲ್ಲಿದೆಯಾ?' ಎಂದು ಪ್ರಶ್ನಿಸಿದ್ದಾರೆ.
'ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವಾಗಲೇ ಈ ಘಟನೆ ನಡೆದಿದೆ. ರಾಜ್ಯದಲ್ಲಿ ಕೋಮು ಸೌಹಾರ್ದ ಕದಡಿ ಹಿಂಸಾಚಾರ ಸೃಷ್ಟಿಸುವುದು ಮತ್ತು ಚುನಾವಣೆ ಹೊತ್ತಿನಲ್ಲಿ ಕರ್ನಾಟಕವನ್ನು ಕದಡುವುದೇ ಇವರ ದುರುದ್ದೇಶ ಆಗಿರುವಂತಿದೆ. ನನಗೆ ಈ ಹತ್ಯೆ ಆಘಾತ ಉಂಟು ಮಾಡಿದೆ' ಎಂದೂ ಅವರು ಹೇಳಿದ್ದಾರೆ.












Click it and Unblock the Notifications