ಇಸ್ರೇಲ್‌ನಲ್ಲೇ ನನ್ನ ಪ್ರಾಣ ಹೋಗಬೇಕಿತ್ತು: ಮಾಜಿ ಸಿಎಂ ಕುಮಾರಸ್ವಾಮಿ!
ತುಮಕೂರು, ಅ. 25: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಜನರೊಂದಿಗೆ ತಮ್ಮ ಕಷ್ಟವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ತಮ್ಮ ನೋವುಗಳನ್ನು ಜನರಿಗೆ ಹೇಳುವ ಮೂಲಕ ಜನಸಾಮಾನ್ಯರೊಂದಿಗೆ ಬೆರೆತಿದ್ದಾರೆ.
"ರಾಷ್ಟ್ರೀಯ ಪಕ್ಷಗಳ ಅಬ್ಬರ, ಮುಖಂಡರ ಪಕ್ಷಾಂತರ, ನಂಬಿದ ನಾಯಕರ ವಿಶ್ವಾಸ ದ್ರೋಹದ ನಡುವೆಯೂ ಪ್ರಾದೇಶಿಕ ಪಕ್ಷವನ್ನು ಕಳೆದ 12 ವರ್ಷಗಳಿಂದ ಕಟ್ಟುತ್ತಾ ಬಂದಿದ್ದೇನೆ" ಎಂದು ಹೇಳುತ್ತಲೇ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕಣ್ಣೀರಿಟ್ಟ ಸಂಗತಿ ತುಮಕೂರು ಜಿಲ್ಲೆ ಗುಬ್ಬಿಯಲ್ಲಿ ಸೋಮವಾರ ನಡೆಯಿತು.
ಬೇರೆ ಪಕ್ಷಗಳಿಂದ ಜೆಡಿಎಸ್ ಸೇರಿದ ನಾಯಕರನ್ನು ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ ಅವರು, "ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಹಣ ಇಟ್ಟುಕೊಂಡು ರಾಜಕೀಯ ಮಾಡಲಿಲ್ಲ. ನಿಮ್ಮಂಥ ಲಕ್ಷಾಂತರ ಕಾರ್ಯಕರ್ತರಿಂದ ರಾಜಕೀಯ ಮಾಡಿ ನಾಡಿನ ಸೇವೆ ಮಾಡಿದ್ದೇವೆ. ನಿಮ್ಮ ಆಶೀರ್ವಾದದಿಂದ ಕೆಲಸ ಮಾಡುತ್ತಿದ್ದೇವೆ. ನಮಗೆ ದೊಡ್ಡ ದೊಡ್ಡ ಶ್ರೀಮಂತರ ಸಂಪರ್ಕವೂ ಇಲ್ಲ. ನಮಗೆ ಇರುವುದು ನಿಮ್ಮಂಥ ಕಾರ್ಯಕರ್ತರ ಸಂಬಂಧ ಮಾತ್ರ, ಒಂದೊಂದು ಚುನಾವಣೆ ನಡೆಸಬೇಕಾದರೂ ಎಷ್ಟೆಷ್ಟು ಕಷ್ಟಪಟ್ಟಿದ್ದೇವೆ ಎನ್ನುವುದು ನಮಗೆ ಮಾತ್ರ ಗೊತ್ತು. ನಾವೇನಿದ್ದರೂ ನಿಮ್ಮಿಂದ ಬೆಳೆದವರು" ಎಂದು ಜನರೊಂದಿಗೆ ತಮ್ಮ ಮನದಲ್ಲಿನ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ಇಸ್ರೇಲ್‌ನಲ್ಲೇ ನನ್ನ ಪ್ರಾಣ ಹೋಗಬೇಕಿತ್ತು
"ಎರಡನೇ ಸಲ ಮುಖ್ಯಮಂತ್ರಿ ಆಗುವುದಕ್ಕೆ ಮೊದಲು ನಾನು ಕೃಷಿ ಅಧ್ಯಯನಕ್ಕಾಗಿ ಇಸ್ರೇಲ್ ದೇಶಕ್ಕೆ ಭೇಟಿ ನೀಡಿದ್ದೆ. ಅಲ್ಲಿಯೇ ನನ್ನ ಪ್ರಾಣ ಹೋಗಬೇಕಾಗಿತ್ತು. ನನ್ನ ತಂದೆ-ತಾಯಿ ಮಾಡಿದ ಪುಣ್ಯದಿಂದ ನಾನು ಬದುಕುಳಿದು ವಾಪಸ್ ಬಂದೆ. ಎರಡನೇ ಸಲ ಹೃದಯದ ಆಪರೇಷನ್ ಆದಾಗ ಒಂದೇ ತಿಂಗಳಲ್ಲಿ ಪಕ್ಷ ಕಟ್ಟಬೇಕೆಂದು ರಾಜ್ಯಾದ್ಯಾಂತ ಪ್ರವಾಸಕ್ಕೆ ಹೊರಟುಬಿಟ್ಟೆ. ಯಾರು ಕೂಡ ನನ್ನ ಹಿಂದೆ ಬಂದು ರಾಜ್ಯಾದ್ಯಂತ ಸುತ್ತಲಿಲ್ಲ. ದೇವೇಗೌಡರು ಈ ವಯಸ್ಸಿನಲ್ಲೂ ಪಕ್ಷ ಕಟ್ಟುವ ಕೆಲಸ ಮಾಡುತ್ತಿದ್ದಾರೆ" ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಮ್ಮ ಕುರಿತು ಹೇಳಿಕೊಂಡರು.

ನಮಗೆ ಸಿಗುತ್ತಿರುವುದು ಇಷ್ಟು ಮಾತ್ರ!
ಇಷ್ಟೆಲ್ಲ ಕಷ್ಟಪಟ್ಟು ನಾವು ಪಕ್ಷದ ಕೆಲಸ ಮಾಡುತ್ತಿದ್ದರೂ ಇನ್ನೂ ನಮಗೆ ಸಿಗುತ್ತಿರುವುದು 40 ಸ್ಥಾನಗಳಷ್ಟೇ. ಇದರಲ್ಲಿ ಪಕ್ಷವನ್ನು ಏಣಿಯಂತೆ ಬಳಸಿಕೊಂಡು ಒದ್ದು ಹೋದವರ ಪ್ರಮೇಯವೂ ಇದೆ. ಪಕ್ಷಕ್ಕೆ ಬರುವ ತನಕ ಜನರ ಸೇವೆ ಎನ್ನುವವರು ನಂತರ ಹಣದ ಹಿಂದೆ ಬೀಳುತ್ತಾರೆ ಎಂದು ಕುಮಾರಸ್ವಾಮಿ ಇದೇ ವೇಳೆ ಬೇಸರ ವ್ಯಕ್ತಪಡಿಸಿದರು.

ಕಾಂಗ್ರೆಸ್‌ನಿಂದ ವ್ಯವಸ್ಥಿತ ಅಪಪ್ರಚಾರ
2018ರ ಚುನಾವಣೆಯಲ್ಲಿ ಯಾರಿಗೂ ಬಹುಮತ ಬರಲಿಲ್ಲ, ದೇವೇಗೌಡರ ಮನೆಗೆ ಬಂದ ಕಾಂಗ್ರೆಸ್ ನಾಯಕರು ಜೆಡಿಎಸ್ ಕಾಂಗ್ರೆಸ್ ಸರಕಾರ ಮಾಡೋಣ ಅಂತ ಗೌಡರಿಗೆ ದುಂಬಾಲು ಬಿದ್ದರು. ಗೌಡರಂತೂ ಖರ್ಗೆ ಅವರನ್ನೇ ಸಿಎಂ ಮಾಡಿ ಅಂತ ಅವರಿಗೆ ಹೇಳಿದರು. ಆದರೆ ದೆಹಲಿ ಕಾಂಗ್ರೆಸ್ ನಾಯಕರು ಕುಮಾರಸ್ವಾಮಿ ಅವರೇ ಸಿಎಂ ಆಗಬೇಕು ಎಂದು ಹೇಳಿ ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರು ಎಂದ ಕುಮಾರಸ್ವಾಮಿ ತಾವು ಎರಡನೇ ಬಾರಿ ಸಿಎಂ ಆಗಿದ್ದನ್ನು ವಿವರಿಸಿದ್ದಾರೆ.
Recommended Video

ರಾಜ್ಯಾದ್ಯಂತ ವ್ಯವಸ್ಥಿತ ಅಪಪ್ರಚಾರ ನಡೆಸಿದ ಕಾಂಗ್ರೆಸ್!
2018ರ ಚುನಾವಣೆಯಲ್ಲಿ ನಮ್ಮ ಪಕ್ಷದ ವಿರುದ್ಧ ದುರುದ್ದೇಶಪೂರಿತವಾಗಿ ಪ್ರಚಾರ ಮಾಡಿದರು ಕಾಂಗ್ರೆಸ್ ನಾಯಕರು. ಗೆದ್ದರೆ ಬಿಜೆಪಿ ಜತೆ ಹೋಗಿ ಸರಕಾರ ಮಾಡುತ್ತಾರೆ. ಜೆಡಿಎಸ್ ಪಕ್ಷ ಬಿಜೆಪಿ ಬಿ ಟೀಂ ಎಂದೆಲ್ಲ ರಾಜ್ಯಾದ್ಯಂತ ವ್ಯವಸ್ಥಿತವಾಗಿ ಅಪಪ್ರಚಾರ ನಡೆಸಿದರು. ಅಲ್ಪಸಂಖ್ಯಾತರ ಧರ್ಮ ಗುರುಗಳಿಗೆ ತಪ್ಪು ಮಾಹಿತಿ ನೀಡಿ, ನಿವೃತ್ತ ಐಎಎಸ್-ಐಪಿಎಸ್ ಅಧಿಕಾರಿಗಳನ್ನು ಇಡೀ ರಾಜ್ಯಾದ್ಯಾಂತ ಕಳಿಸಿ ಮುಸ್ಲಿಮರಲ್ಲಿ ಜೆಡಿಎಸ್ ಬಗ್ಗೆ ತಪ್ಪು ಭಾವನೆ ಮೂಡಿಸಿದರು. ಅದರಿಂದಾಗಿ ಬಿಜೆಪಿ 40 ರಿಂದ 105 ಕ್ಷೇತ್ರಗಳಲ್ಲಿ ಗೆದ್ದಿತು, 130 ಸ್ಥಾನಗಳಿಂದ 78 ಸ್ಥಾನಗಳಿಗೆ ಕಾಂಗ್ರೆಸ್ ಕುಸಿಯಿತು. ಹೀಗಾಗಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತಂದವರು ಯಾರು? ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.












Click it and Unblock the Notifications