ಪ್ರಜ್ವಲ್‌ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದರೆ ಎಷ್ಟು ಮಂದಿ ದೂರು ನೀಡಿದ್ದಾರೆ? ರಾಹುಲ್‌ ಗಾಂಧಿಗೆ ಎಚ್‌ಡಿಕೆ ಪ್ರಶ್ನೆ

ಪೆನ್‌ಡ್ರೈವ್‌ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ನೂರಾರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್‌ ಗಾಂಧಿ ಹೇಳಿಕೆ ನೀಡಿದ್ದರು. ಈ ಪೈಕಿ ಎಷ್ಟು ಮಂದಿ ಮಹಿಳೆಯರು ದೂರು ದಾಖಲಿಸಿದ್ದಾರೆ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

2024ರ ಲೋಕಸಭಾ ಚುನಾವಣೆಗೆ ಎರಡು ದಿನ ಬಾಕಿ ಇರುವಾಗ ಮಂಡ್ಯ ಮತ್ತು ಹಾಸನ ಭಾಗಗಳಲ್ಲಿ ವಿಡಿಯೊಗಳನ್ನು ಪೆನ್‌ಡ್ರೈವ್‌ಗಳಲ್ಲಿ ಹಂಚಲಾಗಿದೆ ಎಂದು ಹೇಳಿದ ಕುಮಾರಸ್ವಾಮಿ ಅವರು, ವಿಡಿಯೋಗಳಲ್ಲಿ ಇದ್ದ ಮಹಿಳೆಯರ ಮುಖಗಳನ್ನು ಮರೆಮಾಚಲಿಲ್ಲ. ಲೋಕಸಭೆಯ ಇವತ್ತಿನ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ನಾನೂರು ಮಹಿಳೆಯರ ಮೇಲೆ ಪ್ರಜ್ವಲ್ ರೇವಣ್ಣ ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಿದ್ದರು. ಆ ನಾನೂರು ಜನ ಮಹಿಳೆಯರಲ್ಲಿ ಎಷ್ಟು ಜನ ಬಂದು ಕೇಸು ದಾಖಲು ಮಾಡಿದ್ದಾರೆ? ಎಂದು ಪ್ರಶ್ನಿಸಿದರು.

HD Kumaraswamy: ಸರ್ಕಾರ ಉತ್ತರ ಕೊಡಬೇಕು

ಪೆನ್‌ಡ್ರೈವ್‌ಗಳಲ್ಲಿ ಹಲವು ಮಹಿಳೆಯರ ವಿಡಿಯೊಗಳನ್ನು ಹಂಚಿ ಅವರ ಕುಟುಂಬಗಳ ಗೌರವಕ್ಕೆ ಧಕ್ಕೆ ಉಂಟು ಮಾಡಿದರು. ವಿಡಿಯೊಗಳನ್ನು ಹೊರಕ್ಕೆ ಬಿಟ್ಟಾಗ ಆ ಮಹಿಳೆಯರ ಮುಖಗಳನ್ನು ಮಸುಕುಗೊಳಿಸಿ ಗೌಪ್ಯತೆ ಕಾಪಾಡಲಿಲ್ಲ. ಆ ವಿಡಿಯೊಗಳನ್ನು ಸಿದ್ಧಪಡಿಸಿ ಹಂಚಿದವರು ಯಾರು? ಯಾವ ಸ್ಥಳದಲ್ಲಿ ಸಿದ್ಧಪಡಿಸಲಾಯಿತು? ಅವುಗಳನ್ನು ಹಂಚಿದವರ ವಿರುದ್ಧ ಏನು ಕ್ರಮ ಕೈಗೊಳ್ಳಲಾಯಿತು? ಅವರೆಲ್ಲರೂ ದಿನವೂ ಹಾಸನದಲ್ಲಿ ಡಾನ್ಸ್ ಮಾಡಿಕೊಂಡು ತಿರುಗುತ್ತಿದ್ದಾರೆ. ಇದಕ್ಕೆ ಈ ಸರಕಾರ ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು.

ತಮ್ಮ ಕುಟುಂಬದ ಬಗ್ಗೆ, ನಮ್ಮ ತಾಯಿಯ ವಿರುದ್ಧವೂ ಸುದ್ದಿಗಳನ್ನು ಪ್ರಸಾರ ಮಾಡಲಾಯಿತು. ಕುಟುಂಬದವರು ಹಲವು ರೀತಿಯ ನಿಂದನೆಗಳನ್ನು ಎದುರಿಸಿದ್ದಾರೆ. ಅದಾಗ್ಯೂ ನಾವು ಯಾರೂ ಕೋರ್ಟ್ ಮೊರೆ ಹೋಗಿ ರಕ್ಷಣೆ ಪಡೆಯಲು ಹೋಗಲಿಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದರು.

ನಾನು ಈ ವ್ಯಕ್ತಿಯನ್ನು ಇಂದಿಗೂ ಮುಖ್ಯಮಂತ್ರಿ ಎಂದು ಹೇಳಲು ಸಿದ್ಧನಿಲ್ಲ, ನಮ್ಮ ರಾಜ್ಯಕ್ಕೆ ಇಂತಹ ಸ್ಥಿತಿ ಬರಬಾರದಾಗಿತ್ತು ಎಂದ ಸಚಿವರು; ನನ್ನ ತಾಯಿಯನ್ನೂ ಬಿಡಲಿಲ್ಲ ಇವರು. ದಿನವೂ ದೇವರ ಕೋಣೆಯಲ್ಲಿ ಬದುಕಿದವರು ನನ್ನ ತಾಯಿ, ಅವರ ಬಗ್ಗೆಯೂ ಸರಣಿ ಕಥೆಗಳನ್ನು ಸೃಷ್ಟಿಸಿದಿರಿ, ಈ ರೀತಿಯ ವಾತಾವರಣ ನಿರ್ಮಾಣ ಮಾಡಿರುವ ವ್ಯಕ್ತಿಯ ನಿರಂತರ ಕಸುಬೇ ಅಂತಹದ್ದು ಎಂದು ಮುಖ್ಯಮಂತ್ರಿ ಡಿಕೆಶಿ ವಿರುದ್ಧ ಕೇಂದ್ರ ಸಚಿವರು ಹರಿಹಾಯ್ದರು.

ಹೋರಾಟ ಮಾಡಿ, ಉನ್ನತ ತನಿಖೆ ನಡೆಸಿ

ಸುದೀರ್ಘ ಕಾಲ ಆಡಳಿತ ನಡೆಸಿದ ಅನುಭವವಿರುವ ಸಿದ್ದರಾಮಯ್ಯ ಅವರು ಕೋರ್ಟ್‌ಗಳಿಂದ ತಡೆಯಾಜ್ಞೆ ಪಡೆಯುವ ಬದಲು ದಿಟ್ಟವಾಗಿ ನಿಲ್ಲಬೇಕು. ಅಹಿಂದ ನಾಯಕರು ಇಂತಹ ಕೆಟ್ಟ ಬೆಳವಣಿಗೆಗಳನ್ನು ವಿರೋಧಿಸದಿದ್ದರೆ ಮುಂದಿನ ದಿನಗಳಲ್ಲಿ ತಕ್ಕ ಬೆಲೆ ತೆರಬೇಕಾಗುತ್ತದೆ. ಹೀಗಾಗಿ, ಹೋರಾಟ ಮಾಡಿ, ಉನ್ನತ ತನಿಖೆ ನಡೆಸಿ ಎಂದು ಸಚಿವರು ಕರೆ ನೀಡಿದರು.‌

ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ ರಚಿಸಿ ತನಿಖೆ ನಡೆಸಿರುವುದನ್ನು ತಾವು ಟೀಕಿಸಿಲ್ಲ ಎಂದು ಹೇಳಿದ ಅವರು; ಅದೇ ರೀತಿಯ ಗಂಭೀರತೆ ಇತರ ಪ್ರಕರಣಗಳಲ್ಲಿಯೂ ಇರಬೇಕು ಎಂದರು.

ಪೆನ್‌ಡ್ರೈವ್‌ಗಳನ್ನು ತಯಾರಿಸಿ ಹಂಚಿದವರ ವಿರುದ್ಧ ಎಷ್ಟು ಮಂದಿಯನ್ನು ಬಂಧಿಸಲಾಗಿದೆ? ಎಷ್ಟು ಮಹಿಳೆಯರು ದೂರು ನೀಡಿದ್ದಾರೆ? ತನಿಖೆಯಲ್ಲಿ ಏನು ಪತ್ತೆಯಾಗಿದೆ? ಪ್ರಶ್ನಿಸಿದ ಅವರು; ಒಬ್ಬರನ್ನು ಜೈಲಿಗೆ ಕಳುಹಿಸಲು ಎಸ್ ಐಟಿಗೆ ₹35 ಲಕ್ಷ ಬಹುಮಾನ ನೀಡಲಾಗಿದೆ ಎಂದು ಕಿಡಿಕಾರಿದರು.

ಸಿದ್ದರಾಮಯ್ಯ ಅವರಿಗೆ ಹೆಚ್ಡಿಕೆ ಮನವಿ

ಯಾವುದೇ ಕಾರಣಕ್ಕೂ ಈ ಕುತಂತ್ರಕ್ಕೆ ನೀವು ಹೆದರಬಾರದು ಎಂದು ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಸಚಿವ ಕುಮಾರಸ್ವಾಮಿ ಅವರು; ನೀವು ಎಂಟು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದವರು. ದಿವಂಗತ ದೇವರಾಜ ಅರಸು ಅವರ ದಾಖಲೆಯನ್ನು ಮೀರಿದ ನಾಯಕ ನೀವು. ಇಂತಹ ಹಿನ್ನೆಲೆ ಹೊಂದಿರುವ ನೀವು ನಿಮ್ಮ ವಿರುದ್ಧ ನಿಮ್ಮ ಪಕ್ಷದಲ್ಲಿ ನಡೆದಿರುವ ಸಂಚಿಗೆ ಹೆದುರುವ ಅಗತ್ಯವಿಲ್ಲ. ನಿಮಗೆ ಕಳಂಕ ಬರಲು ಬಿಡುವುದಿಲ್ಲ. ನೀವು ನ್ಯಾಯಾಲಯದ ಮೊರೆ ಹೋಗುವ ಸ್ಥಿತಿಗೆ ಏಕೆ ತಳ್ಳಲ್ಪಟ್ಟಿದ್ದೀರಿ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯನವರ ವಿರುದ್ಧ ತಾನು ಹಿಂದೆ ರಾಜಕೀಯವಾಗಿ ಹೋರಾಡಿದ್ದೇನೆ, ವಿಧಾನಸಭೆಯಲ್ಲಿ ಅವರ ಜತೆ ವಾಗ್ವಾದಗಳೂ ನಡೆದಿವೆ ಎಂದ ಸಚಿವರು; ಈಗ ನಾನು ಅವರ ಮೇಲೆ ಅನುಕಂಪದಿಂದ ಮಾತನಾಡುತ್ತಿಲ್ಲ. ಆದರೆ, ಅವರ ವಿರುದ್ಧ ನಡೆದಿರುವ ಷಡ್ಯಂತ್ರ್ಯದ ಬಗ್ಗೆ ಮಾತ್ರ ಹೇಳುತ್ತಿದ್ದೇನೆ. ಸಿದ್ದರಾಮಯ್ಯ ಅವರು ಸ್ಟಿಂಗ್‌ ಆಪರೇಷನ್‌ಗಳ ವಿರುದ್ಧ ತಮ್ಮ ಹಿಂದಿನ ಗಟ್ಟಿಯಾದ ದನಿಯಲ್ಲಿ ಮಾತನಾಡಿ ಇಂತಹ ಪ್ರವೃತ್ತಿಗೆ ಅಂತ್ಯ ಹಾಡಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್‌ ಸರ್ಕಾರವನ್ನು ವಜಾಗೊಳಿಸಬೇಕು ಅಥವಾ ಸರ್ಕಾರ ಕೆಡವಬೇಕು ಎಂದು ತಾನು ಹೇಳುತ್ತಿಲ್ಲ. ಸ್ಟಿಂಗ್‌ಗಳ ಮೂಲಕ ಜನರನ್ನು ಮತ್ತು ಕುಟುಂಬಗಳನ್ನು ಗುರಿಯಾಗಿಸುವ ಕೆಟ್ಟ ಸಂಸ್ಕೃತಿ ನಿಲ್ಲಬೇಕು ಎಂಬುದಷ್ಟೇ ತಮ್ಮ ಆಶಯ ಎಂದು ಅವರು ಸ್ಪಷ್ಟಪಡಿಸಿದರು.

ಸರ್ಕಾರಕ್ಕೆ ಬಹುಮತವಿದೆ. ಸರ್ಕಾರ ಬೀಳುತ್ತದೆ ಎಂಬ ಭಯದಿಂದ ತನಿಖೆ ತಪ್ಪಿಸಬೇಕಾಗಿಲ್ಲ ಎಂದ ಅವರು, ಶಾಸಕರು, ಸಚಿವರು ಮತ್ತು ಎಲ್ಲ ಪಕ್ಷಗಳ ನಾಯಕರು ಈ ವಿಷಯದಲ್ಲಿ ದನಿ ಎತ್ತಬೇಕು. ಇಂದು ಒಬ್ಬರನ್ನು ಗುರಿಯಾಗಿಸಿದರೆ ನಾಳೆ ಮತ್ತೊಬ್ಬರನ್ನೂ ಗುರಿಯಾಗಿಸಬಹುದು. ಇಂಥ ಚಾಳಿಗೆ ಬಿದ್ದಿರುವ ವ್ಯಕ್ತಿಗಳನ್ನು ಕಟ್ಟಿ ಹಾಕಿ ಅಂಕುಶ ಹಾಕಬೇಕು ಎಂದು ಅವರು ಒತ್ತಾಯಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+