ಕನ್ನಡಕ್ಕೆ 3 ಕೋಟಿ, ತಮಿಳಿಗೆ 43, ಸಂಸ್ಕೃತಕ್ಕೆ 643 ಕೋಟಿ ಅನುದಾನ: ಎಚ್‌ಡಿಕೆ ಗರಂ
ಬೆಂಗಳೂರು, ಜನವರಿ 7: ಕನ್ನಡ ಅಭಿವೃದ್ದಿಗಾಗಿ ಬರೀ 3 ಕೋಟಿ ರೂಪಾಯಿ ನೀಡಿ ತಮಿಳು ಭಾಷೆ ಅಭಿವೃದ್ದಿಗೆ 43 ಕೋಟಿ ಹಾಗೂ ಸಂಸ್ಕೃತಕ್ಕೆ ಬರೋಬ್ಬರಿ 643 ಕೋಟಿ ನೀಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಖಂಡಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಎಚ್‌ಡಿ ಕುಮಾರಸ್ವಾಮಿ ಅವರು ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿ 15 ವರ್ಷಗಳೇ ಆಯಿತು. ಆದರೆ 13 ವರ್ಷಗಳಲ್ಲಿ ಕನ್ನಡಕ್ಕೆ ಸಿಕ್ಕಿದ ಅನುದಾನ ಕೇವಲ 3 ಕೋಟಿ ರೂಪಾಯಿಗಳು ಮಾತ್ರ. ಆದೆರ ತಮಿಳಿಗೆ ಸಿಕ್ಕಿದ್ದು 43 ಕೋಟಿ ಹಾಗೂ ಸಂಸ್ಕೃತಕ್ಕೆ ಇವರು ಕೊಟ್ಟಿದ್ದು ಬರೋಬ್ಬರಿ 643 ಕೋಟಿ ಎಂದು ಆರೋಪಿಸಿದ್ದಾರೆ.
ಕನ್ನಡದ ಕಣ್ಣಿಗೆ ಸುಣ್ಣ, ಬೇರೆ ಭಾಷೆಗಳಿಗೆ ಬೆಣ್ಣೆ. ಕನ್ನಡ ತಬ್ಬಲಿ ಮಕ್ಕಳ ಭಾಷೆಯೇ? ಎಂದು ಪ್ರಶ್ನಿಸಿರುವ ಎಚ್‌ಡಿ ಕುಮಾರಸ್ವಾಮಿ ಅವರು, ಕೇಂದ್ರದಿಂದ ಕನ್ನಡಕ್ಕೆ ಆಗುತ್ತಿರುವ ಅನುದಾನದ ಅನ್ಯಾಯದ ವಿರುದ್ಧ ನಾನು ಅನೇಕ ಸಲ ದನಿ ಎತ್ತಿದ್ದೇನೆ. ಬಿಜೆಪಿ,ಕಾಂಗ್ರೆಸ್ ಪಕ್ಷಗಳ ಆಡಳಿತಕ್ಕೆ ಅದು ಕೇಳಲೇ ಇಲ್ಲ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಬಂದ ಮೇಲೆ ಸಂಸ್ಕೃತ, ಹಿಂದಿ ತುಷ್ಟೀಕರಣದಿಂದ ಕನ್ನಡಕ್ಕೆ ಅದೆಷ್ಟು ವಂಚನೆ ಆಗಿದೆ ಎನ್ನುವುದಕ್ಕೆ ಅನುದಾನದ ತಾರತಮ್ಯವೇ ಸಾಕ್ಷಿ ಎಂದು ಟೀಕಿಸಿದ್ದಾರೆ.
ಈಗ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ.ದೊಡ್ದರಂಗೇಗೌಡ ಅವರೇ ಸಮ್ಮೇಳನದ ತಮ್ಮ ಭಾಷಣದಲ್ಲಿ ಅನುದಾನದ ಅನ್ಯಾಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಎದುರೇ ಬಿಜೆಪಿ ಸರ್ಕಾರದ ಮುಖಕ್ಕೆ ರಾಚುವಂತೆ ಹೇಳಿದ್ದಾರೆ. ಈ ವಿಷಯ ಪ್ರಸ್ತಾಪ ಮಾಡಿದ ಅವರನ್ನು ಮನಸಾರೆ ಅಭಿನಂದಿಸುತ್ತೇನೆ ಎಂದು ಎಚ್‌ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಹಿಂದಿ ಹೇರಿಕೆ ಮೂಲಕ ಸದಾ ಕನ್ನಡದ ಮೇಲೆ ಪ್ರಹಾರ ನಡೆಸುತ್ತಲೇ ಇರುವ ಬಿಜೆಪಿ ಸರ್ಕಾರಕ್ಕೆ ಅವಕಾಶ ಸಿಕ್ಕಾಗಲೆಲ್ಲ ಕನ್ನಡದ ಬೇರುಗಳಿಗೆ ಕೊಡಲಿಪೆಟ್ಟು ಕೊಡುತ್ತಿದೆ. ನೆಲ, ಜಲ, ಭಾಷೆ ವಿಷಯದಲ್ಲಿ ಕರ್ನಾಟಕಕ್ಕೆ ಆ ಪಕ್ಷವು ಅನ್ಯಾಯದ ಸರಣಿಯನ್ನೇ ಮುಂದುವರಿಸಿದೆ. ಬೆಳಗಾವಿ ವಿಷಯದಲ್ಲಿ ಬಿಜೆಪಿ ಸರ್ಕಾರಗಳು ವರ್ತಿಸುತ್ತಿರುವ ರೀತಿ ಕಳವಳಕಾರಿ ಎಂದು ಅವರು ಆಕ್ರೋಶ ವ್ಯಕ್ಯಪಡಿಸಿದ್ದಾರೆ.

ದೇಶಕ್ಕೆ ಅತಿಹೆಚ್ಚು ತೆರಿಗೆ ತೆರುತ್ತಿರುವ ಕರ್ನಾಟಕ
ಒಕ್ಕೂಟ ಭಾಷೆಗಳ ನಡುವೆ ಅನುದಾನದಲ್ಲಿ ಮಾತ್ರವಲ್ಲ, ಯಾವ ವಿಷಯದಲ್ಲೂ ತಾರತಮ್ಯ ಎಸಗಬಾರದು. ಈ ವ್ಯವಸ್ಥೆಯಲ್ಲಿ ಆಡಳಿತ ನಡೆಸುವವರಿಗೆ ರಾಜಧರ್ಮ ಪಾಲನೆ ಅತ್ಯಗತ್ಯ. ದೇಶಕ್ಕೆ ಅತಿಹೆಚ್ಚು ತೆರಿಗೆ ತೆರುತ್ತಿರುವ ಕರ್ನಾಟಕದ ವಿಷಯದಲ್ಲಿ ಇಂಥ ರಾಜಧರ್ಮ ಪಾಲನೆ ಆಗುತ್ತಿಲ್ಲ ಎಂದು ಎಚ್‌ಡಿ ಕುಮಾರಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಜೆಪಿ ಸರ್ಕಾರ ಎಚ್‌ಡಿಕೆ ತರಾಟೆ
ಹಾವೇರಿಯಲ್ಲಿ ನಡೆಯುತ್ತಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕನ್ನಡಕ್ಕೆ ಕೇಂದ್ರ ಸರ್ಕಾರದಿಂದ ಅನುದಾನದ ಬಗ್ಗೆ ಮಾತನಾಡುವಾಗ ಕನ್ನಡಕ್ಕೆ ಕೇಂದ್ರಸ ಸರ್ಕಾರ ನೀಡಿರುವ ಅನುದಾನದ ಬಗ್ಗೆ ಮಾತನಾಡಿದ್ದರು. ಅದರಂತೆ ಎಚ್‌ಡಿ ಕುಮಾರಸ್ವಾಮಿ ಆಡಳಿತ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಬಸವರಾಜ ಬೊಮ್ಮಾಯಿ ಉದ್ಘಾಟನೆ
ಹಾವೇರಿಯಲ್ಲಿ ಜನವರಿ 6ರಿಂದ ಆರಂಭವಾಗಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಿದ್ದರು. ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಸಮ್ಮೇಳನಾಧ್ಯಕ್ಷ ಸಾಹಿತಿ ದೊಡ್ಡ ರಂಗೇಗೌಡ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಎಚ್.ಎಸ್. ವೆಂಕಟೇಶಮೂರ್ತಿ,ಕಸಾಪ ಅಧ್ಯಕ್ಷ ನಾಡೋಜ ಮಹೇಶ ಜೋಶಿ ಇದ್ದರು.

ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ
ತಮ್ಮ ಭಾಷಣದಲ್ಲಿ ಬೊಮ್ಮಾಯಿ ಅವರು ಕನ್ನಡ ನಾಡಿನ ಸಮಗ್ರ ಅಭಿವೃದ್ಧಿ ಜೊತೆಗೆ ಗಡಿನಾಡಿನ ಅಭಿವೃದ್ಧಿ ಹಾಗೂ ಸಂರಕ್ಷಣೆಗೂ ನಮ್ಮ ಸರ್ಕಾರ ಆದ್ಯತೆ ನೀಡುತ್ತಿದೆ. ಕೈಗಾರಿಕೆಯಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ನೀಡುವ ಸಲುವಾಗಿ ನೂತನ ಉದ್ಯೋಗ ನೀತಿಯನ್ನು ಜಾರಿಗೆ ತಂದಿದ್ದೇವೆ. ಶೇ.80 ರಷ್ಟು ಕನ್ನಡಿಗರಿಗೆ ಉದ್ಯೋಗ ದೊರೆಯಬೇಕೆಂಬುದು ನಮ್ಮ ಸರ್ಕಾರದ ಸಂಕಲ್ಪವಾಗಿದೆ ಎಂದು ತಿಳಿಸಿದ್ದರು.












Click it and Unblock the Notifications