ಮಚ್ಚು, ಕೊಡಲಿ ಹಿಡಿದುಕೊಂಡು ಹೋಗುವ ವ್ಯಕ್ತಿಗೆ ಮಂತ್ರಿ ಸ್ಥಾನ: ಸರ್ಕಾರದ ವಿರುದ್ದ ಎಚ್ ಡಿ ಕುಮಾರಸ್ವಾಮಿ ಕಿಡಿ
ಬೆಂಗಳೂರು, ಸೆಪ್ಟೆಂಬರ್ 12: ಮಚ್ಚು, ಕೊಡಲಿ ಹಿಡಿದುಕೊಂಡು ಹೋಗುವ ವ್ಯಕ್ತಿಗೆ ಸಚಿವ ಸ್ಥಾನ ಕೊಟ್ಟಿದ್ದೀರಿ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಂಗಳವಾರ ಜೆಪಿ ನಗರದ ನಿವಾಸದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ದಲಿತರಿಗೆ ಧಮ್ಕಿ ಹಾಕಿ ದೌರ್ಜನ್ಯ ಎಸಗಿಸಿದ ಆರೋಪ ಎದುರಿಸುತ್ತಿರುವ ಯೋಜನೆ ಹಾಗೂ ಸಾಂಖ್ಯಿಕ ಖಾತೆ ಸಚಿವ ಡಿ.ಸುಧಾಕರ್ ಅವರನ್ನು ಕೂಡಲೇ ಸಂಪುಟದಿಂದ ವಜಾ ಮಾಡಬೇಕು ಹಾಗೂ ಅವರನ್ನು ಬಂಧಿಸಬೇಕು ಎಂದು ಹೆಚ್.ಡಿ.ಕುಮಾರಸ್ವಾಮಿ ಅವರು ಒತ್ತಾಯ ಮಾಡಿದರು.
ದಲಿತರ ರಕ್ಷಣೆ ಮಾಡುತ್ತೇವೆ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಈ ಸರಕಾರದಲ್ಲಿ ಏನಾಗುತ್ತಿದೆ? ಸಚಿವರೇ ದಲಿತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಇಂಥ ವ್ಯಕ್ತಿಯನ್ನು ಸಂಪುಟದಲ್ಲಿ ಇರಿಸಿಕೊಳ್ಳಬಾರದು ಎಂದು ಆಗ್ರಹಿಸಿದರು.

ಎಫ್ ಐ ಆರ್ ದಾಖಲಿಸಿದ ಪೊಲೀಸ್ ಅಧಿಕಾರಿಗಳಿಗೆ ಬೆದರಿಕೆ
ಸಿದ್ದರಾಮಯ್ಯನವರೇ ನೀವು ಬೇರೆ ಪಕ್ಷದವರಿಗೆ ಮಾನ ಮರ್ಯಾದೆ ಇದೆಯಾ ಅಂತ ಕೇಳ್ತಾ ಇರ್ತೀರಲ್ಲ, ಅಲ್ಲವೇ? ನಿಮಗೆ ಏನಿದೆ ಅಂತ ನಾನು ಕೇಳಲು ಬಯಸುತ್ತೇನೆ. ಎಫ್ ಐ ಆರ್ ದಾಖಲಿಸಿದ ಪೊಲೀಸ್ ಅಧಿಕಾರಿಗಳ ಮೇಲೆಯೇ ಒತ್ತಡ ಹೇರುವ ಕೆಲಸ ಮಾಡುತ್ತಿದ್ದಿರಿ. ನಿಮಗೆ ಆತ್ಮಸಾಕ್ಷಿ ಎನ್ನುವುದು ಇದೆಯಾ? ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಖಾರವಾಗಿ ಪ್ರಶ್ನಿಸಿದರು.
ಅಧಿಕಾರಿಗಳನ್ನು ಬಹಳ ಕೀಳಾಗಿ ನಡೆಸಿಕೊಳ್ಳುತ್ತಿದ್ದೀರಿ. ಎಫ್ ಐ ಆರ್ ದಾಖಲಿಸಿದ ಅಧಿಕಾರಿಯನ್ನು ದಾಖಲೆಗಳನ್ನು ತೆಗೆದುಕೊಂಡು ಮನೆಗೆ ಬಾ ಅಂತ ಬೆದರಿಕೆ ಹಾಕುತ್ತೀರಿ. ಇದಾ ದಲಿತರ ರಕ್ಷಣೆ? ಎಂದು ಕುಮಾರಸ್ವಾಮಿ ಕಿಡಿಕಾರಿದರು.
ಈ ಭೂಮಿ ಪ್ರಕರಣ ಮುಗಿದೇ ಹೋಗಿತ್ತು. ಈಗ ಕಾನೂನುಬದ್ದವಾಗಿ ಜೀವ ಕೊಟ್ಟಿದ್ದಾರೆ. ಎಲ್ಲದಕ್ಕೂ ತನಿಖೆ ತನಿಖೆ ಅಂತ ಹೇಳ್ತೀರಲ್ಲಾ, ಇದಕ್ಕೆ ಯಾವ ತನಿಖೆ ಮಾಡುತ್ತೀರಾ? ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅವರ ಮೇಲೆ ಕಾಗದದ ಚೂರು ಎಸೆದರು ಎಂದು ನೀವೆಲ್ಲಾ ಉದ್ದುದ್ದ ಬಾಷಣ ಮಾಡಿದ್ದರಲ್ಲ ಸಿದ್ದರಾಮಯ್ಯ, ಕೃಷ್ಣ ಬೈರೇಗೌಡ ಅವರೇ.. ಇವತ್ತು ಆ ದಲಿತ ಸಮುದಾಯದ ಹೆಣ್ಣು ಮಗಳ ಮೇಲೆ ಮಚ್ವು ಕೊಡಲಿ ಹಿಡಿದು ಬೆದರಿಸಲು ಹೊರಟಿದ್ದೀರಲ್ಲಾ? ಜನ ಇದಕ್ಕೆನಾ ನಿಮಗೆ ಮತ ಹಾಕಿದ್ದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಚ್ವು , ಕೊಡಲಿ, ಕತ್ತಿ ಹಿಡಿಯುವವರನ್ನು ಮಂತ್ರಿ ಮಾಡಿಕೊಂಡಿದ್ದೀರಲ್ಲಾ, ದಲಿತರ ಪರ ಕಾಳಜಿ ಇರುವ ವಿಧೇಯಕವನ್ನು ಬೇರೆ ಬೇರೆ ಸದನದಲ್ಲಿ ಪಾಸ್ ಮಾಡಿಕೊಂಡಿದ್ದೀರಲ್ಲ, ಕಸದ ಬುಟ್ಟಿಗೆ ಹಾಕಲಿಕ್ಕೆ ಆ ಬಿಲ್ ಅನ್ನು ಪಾಸ್ ಮಾಡಿಕೊಂಡಿದ್ದೀರಾ? ತಕ್ಷಣ ನಿಮ್ಮ ಮಂತ್ರಿಯನ್ನು ಸಂಪುಟದಿಂದ ವಜಾ ಮಾಡಿ, ಬಂಧಿಸಬೇಕು ಎಂದು ಒತ್ತಾಯ ಮಾಡಿದರು.
ನಾವು ಟೀಕೆ ಮಾಡಿದರೆ ಅಸೂಯೆ ಅಂತಾರೆ. ಇಂತಹ ಕೆಲಸ ಮಾಡಿದರೆ ನಾವು ನೋಡಿಕೊಂಡು ಸುಮ್ಮನೆ ಇರಬೇಕಾ? ಹೀಗೆನಾ ನೀವು ದಲಿತರನ್ನು ಉದ್ದಾರ ಮಾಡುವುದು ಎಂದ ಅವರು; ಇದು ದಲಿತ ವಿರೋಧಿ, ಜನವಿರೋಧಿ ಸರ್ಕಾರ. ದಲಿತ ಸಂಘಟನೆಗಳಿಗೂ ನಾನು ಮನವಿ ಮಾಡುತ್ತೇನೆ. ಅವರೂ ಇದನ್ನು ಗಮನಿಸಲಿ. ಅವರು ಈ ಅನ್ಯಾಯವನ್ನು ನೋಡಿಕೊಂಡು ಸುಮ್ಮನೆ ಇರಬಾರದು. ಈ ಮಂತ್ರಿಯ ವಿರುದ್ಧ ಹೋರಾಟ ನಡೆಸಬೇಕು ಎಂದು ಹೇಳಿದರು.












Click it and Unblock the Notifications