JDS President: ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ: ಬಿಗ್ ಅಪ್‌ಡೇಟ್ ಕೊಟ್ಟ ಹೆಚ್ ಡಿ ಕುಮಾರಸ್ವಾಮಿ
ಬೆಂಗಳೂರು, ಅಕ್ಟೋಬರ್ 23: ರಾಜ್ಯ ಜೆಡಿಎಸ್ ಪಕ್ಷದಲ್ಲಿ ಬಹುದಿನಗಳಿಂದ ಜೆಡಿಎಸ್ ಪಕ್ಷಕ್ಕೆ ನೂತನ ಸಾರಥಿ ಆಯ್ಕೆ ಕುರಿತು ಚರ್ಚೆ ನಡೆಯುತ್ತಿದೆ. ನಿಖಿಲ್ ಕುಮಾರಸ್ವಾಮಿ ಅವರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದ ಪಟ್ಟ ಕಟ್ಟಲು ದೇವೇಗೌಡರ ಕುಟುಂಬ ಸಜ್ಜಾಗಿದ್ದು, ಇದೀಗ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ ಅವರು, ಸದ್ಯಕ್ಕೆ ಪಕ್ಷದಲ್ಲಿ ರಾಜ್ಯಾಧ್ಯಕ್ಷ ಬದಲಾವಣೆ ಚರ್ಚೆ ಇಲ್ಲ. ಈ ಬಗ್ಗೆ ವಿಷಯ ಚರ್ಚೆಗೆ ಬಂದಿಲ್ಲ. ಸದ್ಯ ನಾನೇ ಅಧ್ಯಕ್ಷನಾಗಿದ್ದೇನೆ. ಇನ್ನೊಂದು ಕಡೆ ನಿಖಿಲ್ ಕುಮಾರಸ್ವಾಮಿಗೆ ಅವರಿಗೆ ಜವಾಬ್ದಾರಿ ಕೊಡಬೇಕು ಅಂತ ಇದೆ. ಆದರೆ ಇದ್ಯಾವುದರ ಬಗ್ಗೆ ಚರ್ಚೆ ಆಗಿಲ್ಲ, ಸದ್ಯಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ಇಲ್ಲ ಎಂದು ತಿಳಿಸಿದರು.

ಇದೇ ವೇಳೆ ಸತೀಶ್ ಜಾರಕಿಹೊಳಿ ಸಿಎಂ ಆಗಲಿ ಎಂಬ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಹೆಚ್ ಡಿ ಕುಮಾರಸ್ವಾಮಿ ಅವರು, ಅವರ ಪಕ್ಷದ ಬೆಳವಣಿಗೆಗಳು ಏನಿದೆ ಎಂಬ ಬಗ್ಗೆ ನಾವು ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಅವರ ಪಕ್ಷದಲ್ಲಿ ಏನೇನು ಬೇಕು ಅವರು ತೀರ್ಮಾನ ಮಾಡಿಕೊಳ್ಳಲಿ ಎಂದರು. ಇನ್ನೂ ಶೀಘ್ರವೇ ಜೆಡಿಎಸ್-ಬಿಜೆಪಿ ನಡುವೆ ಸಮನ್ವಯ ಸಮಿತಿ ರಚನೆ ಆಗಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು, ಬಿಜೆಪಿ ನಾಯಕರು ಬಂದು ಚರ್ಚೆ ಮಾಡಿದ್ದಾರೆ. ಬೆಂಗಳೂರಿಗೆ ಒಂದು, ರಾಜ್ಯಕ್ಕೆ ಒಂದು ಸಮನ್ವಯ ಸಮಿತಿ ರಚನೆ ಬಗ್ಗೆ ತೀರ್ಮಾನ ಆಗಿದೆ. ಒಂದು ವಾರ ಅಥವಾ 10 ದಿನಗಳಲ್ಲಿ ಅದರ ಬಗ್ಗೆ ಅಂತಿಮ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.
ಕೋರ್ ಕಮಿಟಿ ಪುನಾ ರಚನೆ ವಿಚಾರ ಸಂಬಂಧ ಮಾತನಾಡಿ, ಕೋರ್ ಕಮಿಟಿ ಪುನಾ ರಚನೆ ಬಗ್ಗೆ ನಮ್ಮ ಪಕ್ಷದಲ್ಲಿ ಒಂದು ಸಭೆ ಆಗಿದೆ. ಕೋರ್ ಕಮಿಟಿ ಮತ್ತು ಕಾರ್ಪೋರೇಷನ್ ಚುನಾವಣೆ ಸಂಬಂಧ ಪಕ್ಷ ಸಂಘಟನೆಗೆ ಸಮಿತಿ ಮಾಡುವ ನಿರ್ಧಾರ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಆ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.
ಕೇಂದ್ರದಿಂದ ರಾಜ್ಯಕ್ಕೆ ಸೂಕ್ತ ಅನುದಾನ ಸಿಗುತ್ತಿಲ್ಲ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ದೇಶದಲ್ಲಿ 50 ವರ್ಷಗಳ ಕಾಂಗ್ರೆಸ್ ಪಕ್ಷ ಒಂದೇ ಆಡಳಿತ ನಡೆಸಿದೆ. ಸ್ವಾತಂತ್ರ್ಯ ಬಂದ ನಂತರ ಎಲ್ಲಾ28 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸಂಸದರನ್ನೇ ಜನ ಗೆಲ್ಲಿಸುತ್ತಿದ್ದರು. ಆಗ ಕೇಂದ್ರದಲ್ಲೂ, ರಾಜ್ಯದಲ್ಲೂ ಕಾಂಗ್ರೆಸ್ ಸರ್ಕಾರ ಇತ್ತು. ಅವತ್ತಿನ ಅ ಸಂಸತ್ ಸದಸ್ಯರು ಏನೇನು ತಂದಿದ್ದರು? ಎಂದು ಸಚಿವರು ವಾಗ್ದಾಳಿ ನಡೆಸಿದರು.
ಆಗ ದೆಹಲಿಯಿಂದ ಅವರದ್ದೇ ಪಕ್ಷದ ಸರ್ಕಾರದಿಂದ ಏನು ತಂದರು? ಅಂದು ಕರ್ನಾಟಕಕ್ಕೆ ಎಷ್ಟು ಹಣ ತಂದರು? ಯಾವ ನೀರಾವರಿ ಸಮಸ್ಯೆ ಬಗೆಹರಿಸಿದರು. ಯಾವ ಅಭಿವೃದ್ಧಿಗೆ ಹಣ ತಂದ್ರು? ನಮ್ಮ ಬಗ್ಗೆ ಚರ್ಚೆ ಮಾಡೋ ಬದಲು ಅವರೇ ಕುಳಿತು ಚರ್ಚೆ ಮಾಡಿಕೊಳ್ಳಲಿ ಎಂದು ಸಿಎಂ ಸಿದ್ದರಾಮಯ್ಯಗೆ ಹೆಚ್ ಡಿ ಕುಮಾರಸ್ವಾಮಿ ತಿರುಗೇಟು ನೀಡಿದರು.
ಚರಣ್ ಸಿಂಗ್ ಅವರಿಗೆ ಸಂಸತ್ ಕಲಾಪದಲ್ಲಿ ಭಾಗವಹಿಸಲು ಬಿಡಲಿಲ್ಲ. ಚಂದ್ರಶೇಖರ್ ಸೇರಿ ಎಷ್ಟು ಜನರನ್ನ ಬಲಿ ತೆಗೆದುಕೊಂಡರು. ಅವರ ರಾಜಕೀಯ ಭವಿಷ್ಯ ನಿರ್ನಾಮ ಮಾಡಿಬಿಟ್ಟರು. ಹಾಗೆಯೇ ದೇವೇಗೌಡರ ರಾಜಕೀಯ ಭವಿಷ್ಯ ನಿರ್ನಾಮ ಮಾಡಿದ್ದೇ ಇದೇ ಕಾಂಗ್ರೆಸ್. ಇವರಿಂದ ನಾನು ಕಲಿಬೇಕಾ? ಎಂದು ಕುಮಾರಸ್ವಾಮಿ ಅವರು ತೀವ್ರ ವಾಗ್ದಾಳಿ ನಡೆಸಿದರು.












Click it and Unblock the Notifications