Karnataka Budget: ಸದನದಲ್ಲಿ ಹೋರಾಟ ಹೇಗಿರಬೇಕು? ಶಾಸಕರಿಗೆ ಮಹತ್ವದ ಸೂಚನೆ ಕೊಟ್ಟ ಹೆಚ್ ಡಿ ಕುಮಾರಸ್ವಾಮಿ
ಬೆಂಗಳೂರು, ಮಾರ್ಚ್ 03: ವಿಧಾನ ಮಂಡಲದ ಬಜೆಟ್ ಅಧಿವೇಶನ ಇಂದಿನಿಂದ( ಮಾರ್ಚ್ 3ರ ಸೋಮವಾರ) ಆರಂಭವಾಗಿದೆ. ವಿಧಾನಸಭೆ ಅಧಿವೇಶನ ಮಾರ್ಚ್ 21ರ ತನಕ ನಡೆಯಲಿದ್ದು, ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್ 7ರಂದು ಬಜೆಟ್ ಮಂಡಿಸಲಿದ್ದಾರೆ. 16ನೇ ಬಾರಿಗೆ ಬಜೆಟ್ ಮಂಡಿಸುವ ಮೂಲಕ ಅವರು ದಾಖಲೆಯನ್ನು ಮಾಡಲಿದ್ದಾರೆ. ಇನ್ನೂ ಈ ಅಧಿವೇಶನದಲ್ಲಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮೈತ್ರಿ ನಾಯಕರು ಮುಂದಾಗಿದ್ದು, ತಮ್ಮ ಶಾಸಕರಿಗೆ ಮಾಜಿ ಸಿಎಂ ಹಾಗೂ ಕೇಂದ್ರ ಸಚಿವರಾದ ಹೆಚ್ ಡಿ ಕುಮಾರಸ್ವಾಮಿ ಹಲವು ಸೂಚನೆಗಳನ್ನ ನೀಡಿದ್ದಾರೆ.
ಬೆಂಗಳೂರಿನಲ್ಲಿ ಭಾನುವಾರ ಸಂಜೆ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್ ಬಾಬು ಅವರ ಅಧ್ಯಕ್ಷತೆಯಲ್ಲಿ ನಡೆದ ಶಾಸಕರ ಸಭೆಯಲ್ಲಿ ಕೆಲ ಪ್ರಮುಖ ಅಂಶಗಳ ಬಗ್ಗೆ ಶಾಸಕರಿಗೆ ಸೂಚನೆಗಳನ್ನು ಕೊಟ್ಟ ಕುಮಾರಸ್ವಾಮಿ ಅವರು, ವಿಧಾನ ಮಂಡಲ ಅಧಿವೇಶನದಲ್ಲಿ ಅನುಸರಿಸಬೇಕಾದ ಕಾರ್ಯತಂತ್ರದ ಬಗ್ಗೆ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಪಕ್ಷದ ಶಾಸಕರಿಗೆ ಅಗತ್ಯ ಮಾರ್ಗದರ್ಶನ ನೀಡಿದರು. ಜನಪರ ವಿಷಯಗಳ ಬಗ್ಗೆ ಕಲಾಪದಲ್ಲಿ ಚರ್ಚೆ ಮಾಡಿ. ಸರ್ಕಾರ ವೈಫಲ್ಯಗಳ ಬಗ್ಗೆ ಆದ್ಯತೆ ನೀಡಿ. ಈಗಾಗಲೇ ನಮ್ಮ ಮಿತ್ರಪಕ್ಷ ಬಿಜೆಪಿ ನಾಯಕರ ಜತೆ ಚರ್ಚೆ ನಡೆಸಲಾಗಿದೆ. ಎರಡೂ ಪಕ್ಷಗಳ ಶಾಸಕರು ಉಭಯ ಸದನಗಳಲ್ಲಿ ಪರಸ್ಪರ ಒಮ್ಮತದಿಂದ ಸರ್ಕಾರದ ಹೋರಾಟ ಮಾಡಬೇಕು ಎಂದು ಕೇಂದ್ರ ಸಚಿವರು ನಿರ್ದೇಶನ ನೀಡಿದರು.

ಸುಖಾಸುಮ್ಮನೆ ಕಲಾಪದಲ್ಲಿ ಮಾತನಾಡಬೇಡಿ. ದಾಖಲೆಗಳನ್ನು ಇಟ್ಟುಕೊಂಡು ಮಾತನಾಡಿ. ಮಾಧ್ಯಮಗಳನ್ನು ಸೂಕ್ಷ್ಮವಾಗಿ ಗಮನಿಸಿ. ಕಲಾಪದ ಸಮಯವನ್ನು ಸದುಪಯೋಗ ಮಾಡಿಕೊಂಡು ಜನರ ಪರವಾಗಿ ಕೆಲಸ ಮಾಡಿ ಎಂದು ಹೇಳಿದರು. ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದಕ್ಕಿಂತ ಅವುಗಳನ್ನು ದುರ್ಬಳಕೆ ಮಾಡಿಕೊಂಡು ರಾಜಕೀಯ ಲಾಭ ಮಾಡಿಕೊಂಡಿದ್ದೇ ಹೆಚ್ಚು. ಮೂರು ನಾಲ್ಕು ತಿಂಗಳು ಕಾಲ ಗೃಹಲಕ್ಷ್ಮಿ ಗ್ಯಾರಂಟಿ ಹಣವನ್ನು ಬಾಕಿ ಇಟ್ಟುಕೊಂಡು ಯಾವುದಾದರೂ ಚುನಾವಣೆ ಬಂದಾಗ ಒಮ್ಮೆಲೇ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುತ್ತಿದೆ. ಇದು ಸರ್ಕಾರ ಜನರಿಗೆ ಮಾಡುತ್ತಿರುವ ಮೋಸ ಎಂದು ಕುಮಾರಸ್ವಾಮಿ ಅವರು ಸಭೆಯಲ್ಲಿ ಹೇಳಿದರು.
ಈ ವಿಷಯವನ್ನು ಕಲಾಪದಲ್ಲಿ ಪರಿಣಾಮಕಾರಿಯಾಗಿ ಚರ್ಚೆ ನಡೆಸಿ ಎಂದು ಅವರು ಶಾಸಕರಿಗೆ ಸೂಚನೆ ಕೊಟ್ಟರು. ಅಲ್ಲದೆ, ಕಲ್ಯಾಣ ಕರ್ನಾಟಕಕ್ಕೆ ₹5000 ಅನುದಾನ ಕೊಟ್ಟು ಕ್ರಿಯಾಯೋಜನೆ ರೂಪಿಸುತ್ತೇವೆ ಎಂದು ಹೇಳಿದ್ದ ಕಾಂಗ್ರೆಸ್ ಸರಕಾರ, ಈವರೆಗೆ ಕ್ರಿಯಾಯೋಜನೆ ರೂಪಿಸುವ ಮಾತಿರಲಿ, ನಯಾಪೈಸೆಯನ್ನು ಬಿಡುಗಡೆ ಮಾಡಿಲ್ಲ. ಕಲ್ಯಾಣ ಕರ್ನಾಟಕ ಮತ್ತು ಉತ್ತರ ಕರ್ನಾಟಕಕ್ಕೆ ಸರ್ಕಾರ ನಿರಂತರವಾಗಿ ಮೋಸ ಮಾಡುತ್ತಿದೆ. ಈ ಬಗ್ಗೆಯೂ ನೀವು ಹೋರಾಟ ಮಾಡಬೇಕಿದೆ ಎಂದು ಸಚಿವರು ಶಾಸಕರಿಗೆ ನಿರ್ದೇಶನ ನೀಡಿದರು.
ಗ್ಯಾರಂಟಿಗಳ ಬಗ್ಗೆ ಚರ್ಚೆ ಮಾಡಿ. ತೆರಿಗೆ ಎಷ್ಟು ವಸೂಲಿ ಮಾಡಿದ್ದೀರಿ? ಗ್ಯಾರಂಟಿಗಳಿಗೆ ಎಷ್ಟು ಹಣ ಖರ್ಚು ಮಾಡುತ್ತಿದ್ದೀರಿ? ಉಳಿದ ಹಣ ಎಲ್ಲಿ ಹೋಗುತ್ತಿದೆ? ಎಂಬ ಬಗ್ಗೆ ಪ್ರಶ್ನೆ ಮಾಡಿ. ಜನರ ತೆರಿಗೆ ಹಣ, ಯಾವುದೇ ಬಳಕೆ ಆಗುತ್ತಿದೆ ಎಂಬ ಮಾಹಿತಿ ಅವರಿಗೆ ಗೊತ್ತಾಗಬೇಕಿದೆ. ಅಬಕಾರಿ ಸುಂಕವನ್ನು ನಾಲ್ಕು ಬಾರಿ ಏರಿಕೆ ಮಾಡಿದ್ದಾರೆ.ಈ ಬಗ್ಗೆ ಸರ್ಕಾರವನ್ನು ಪ್ರಶ್ನೆ ಮಾಡಿ ಎಂದು ಅವರು ಶಾಸಕರಿಗೆ ತಿಳಿ ಹೇಳಿದರು.












Click it and Unblock the Notifications