ಹೆದ್ದಾರಿಯಲ್ಲಿ ಹಗಲು ದರೋಡೆ ನಡೆಯುತ್ತಿದೆ: ಟೋಲ್ ಹೆಚ್ಚಳಕ್ಕೆ ಎಚ್‌ಡಿ ಕುಮಾರಸ್ವಾಮಿ ಖಂಡನೆ
ಬೆಂಗಳೂರು, ಜೂನ್ 14: ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್‌ವೇಯ ಟೋಲ್ ಶುಲ್ಕವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೆಚ್ಚಳ ಮಾಡಿರುವ ಹಿನ್ನೆಲೆಯಲ್ಲಿ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ಖಂಡಿಸಿದ್ದು, ಇದು ಅನ್ಯಾಯದ ಪರಮಾವಧಿ ಎಂದು ಹೇಳಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಎಚ್‌ಡಿ ಕುಮಾರಸ್ವಾಮಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿಯ ಟೋಲ್ ದರವನ್ನು ಯಾರಿಗೂ ಗೊತ್ತಿಲ್ಲದಂತೆ ಶೇ.22ರಷ್ಟು ಏರಿಸಿರುವುದು ಅನ್ಯಾಯದ ಪರಮಾವಧಿಯಾಗಿದ್ದು ಇದು ಖಂಡನೀಯ. ಬಿಜೆಪಿ ಹಾಗೂ ಕಾಂಗ್ರೆಸ್ ಸರ್ಕಾರಗಳೆರಡೂ ಸೇರಿ ಜನರ ಮೇಲೆ ಮತ್ತಷ್ಟು ಭಾರ ಹೊರೆಸಿವೆ ಎಂದು ಅವರು ಕಿಡಿಕಾರಿದ್ದಾರೆ.

ಏಕಾಏಕಿ ಈ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ 30ರಿಂದ 200 ರೂ.ವರೆಗೆ ಟೋಲ್ ದರ ಹೆಚ್ಚಳ ಮಾಡಿರುವುದು ಸರಿಯಲ್ಲ, ಸಮರ್ಥನಿಯವೂ ಅಲ್ಲ. ಇಷ್ಟು ದೊಡ್ಡ ಪ್ರಮಾಣದಲ್ಲಿ ಟೋಲ್ ದರ ಹೆಚ್ಚಿಸಿರುವುದು ಹೆದ್ದಾರಿಯಲ್ಲಿ ನಡೆಯುತ್ತಿರುವ ಹಗಲು ದರೋಡೆಯಷ್ಟೇ. ಎಕ್ಸ್‌ಪ್ರೆಸ್ ಹೆದ್ದಾರಿಗೆ ಭೂಮಿ ಕೊಟ್ಟಿದ್ದು ಕರ್ನಾಟಕ ಸರ್ಕಾರ. ಇದ್ದ ನೆಲೆ ಕಳೆದುಕೊಂಡವರು ನಮ್ಮ ರೈತರು. ಈಗ 20% ಸುಲಿಗೆಗೆ ಒಳಗಾಗುತ್ತಿರುವವರು ಕೂಡ ಕನ್ನಡಿಗರೇ. ಕನ್ನಡಿಗರನ್ನು ಕೊಳ್ಳೆ ಹೊಡೆಯುವ ಧೂರ್ತ ನಡೆಗೆ ನಮ್ಮ ಧಿಕ್ಕಾರ ಎಂದು ಅವರು ಹೇಳಿದ್ದಾರೆ.
ಕೇಂದ್ರ, ರಾಜ್ಯ ಸರ್ಕಾರಗಳು ಬೆಲೆ ಏರಿಕೆಯನ್ನೇ 'ಅಧಿಕೃತ ವ್ಯವಹಾರ' ಮಾಡಿಕೊಂಡಿವೆ. ಇನ್ನೂ ರಾಜ್ಯದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳೆಂಬ ತುಪ್ಪ ಸವರಿ, ಅದೇ ಗ್ಯಾರಂಟಿಗಳ ಇಲಾಖೆಗಳ ಮೂಲಕವೇ ಜನರ ಮೇಲೆ ಮಣಭಾರ ಹೇರುತ್ತಿದೆ. ಒಂದು ಕೈಯ್ಯಲ್ಲಿ ಕೊಟ್ಟು ಎರಡು ಕೈಗಳಲ್ಲಿ ಬರೆ ಎಳೆಯುತ್ತಿದೆ. ಹೆದ್ದಾರಿ ಪ್ರಾಧಿಕಾರವು ಹೆಚ್ಚಳ ಮಾಡಿರುವ ಟೋಲ್ ದರವನ್ನು ಕೂಡಲೇ ಹಿಂಪಡೆಯಬೇಕು. ಹೆದ್ದಾರಿ ಪ್ರಾಧಿಕಾರದ ಮೇಲೆ ರಾಜ್ಯ ಸರಕಾರ ಒತ್ತಡ ಹಾಕಬೇಕು. ಬೆಲೆಬರೆ ಬವಣೆಯಿಂದ ಬಸವಳಿದಿರುವ ಜನರು ರೊಚ್ಚಿಗೇಳುವ ಮುನ್ನ ಟೋಲ್ ದರ ಇಳಿಯಬೇಕು ಎಂದು ಅವರು ತಿಳಿಸಿದ್ದಾರೆ.

ಪ್ರತಿಪಕ್ಷವಾಗಿದ್ದಾಗ ಬೆಲೆ ಏರಿಕೆ ವಿರುದ್ಧ, ಆಡಳಿತ ಪಕ್ಷವಾದ ಮೇಲೆ ಬೆಲೆ ಏರಿಕೆ ಪರ ಇದ್ದರೆ ಜನರು ತಕ್ಕಪಾಠ ಕಲಿಸುತ್ತಾರೆ. ಊಸರವಳ್ಳಿ ವೈಖರಿ ಸಂಶಯಕ್ಕೆ ದಾರಿ. ಹಿಂದಿನ ಬಿಜೆಪಿ ಸರ್ಕಾರದ ದಾರಿಯಲ್ಲಿಯೇ ಈ ಸರಕಾರವೂ ನಡೆಯುತ್ತಿದೆಯಾ? ಎನ್ನುವ ಅನುಮಾನ ಆರಂಭದಲ್ಲಿಯೇ ಬರುತ್ತಿದೆ ಎಂದು ಅವರು ಶಂಕೆ ವ್ಯಕ್ತಪಡಿಸಿದ್ದಾರೆ.












Click it and Unblock the Notifications