ಸರ್ಕಾರವೇ ಮುಂದೆ ನಿಂತು ಕೊಂದಿದೆ: ಎಚ್ ಡಿ ಕುಮಾರಸ್ವಾಮಿ ಆರೋಪ
ಬೆಂಗಳೂರು, ಡಿಸೆಂಬರ್ 20: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ವೇಳೆ ಮಂಗಳೂರಿನಲ್ಲಿ ಪೊಲೀಸರ ಗುಂಡೇಟಿಗೆ ಇಬ್ಬರು ಬಲಿಯಾದ ಘಟನೆ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಗೆ ಬಿಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರವೇ ನೇರ ಹೊಣೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಪ್ರತಿಭಟನೆ ಜೋರಾಗಿದ್ದರೂ, ಗೋಲಿಬಾರ್ ನಡೆಸುವಂತಹ ದೊಡ್ಡ ಮಟ್ಟದ ಹಿಂಸಾಚಾರ ನಡೆದಿರಲಿಲ್ಲ. ಅಲ್ಲದೆ, ಎರಡು ಪ್ರತ್ಯೇಕ ಪ್ರದೇಶಗಳಲ್ಲಿ ಪೊಲೀಸರ ಗುಂಡಿಗೆ ಇಬ್ಬರು ಬಲಿಯಾಗಿದ್ದಾರೆ. ಈ ಎರಡೂ ಕಡೆ ನಡೆದ ಗೋಲಿಬಾರ್‌ಗಳ ಹಿಂದಿನ ಕಾರಣಗಳ ಕುರಿತು ಅನೇಕರು ಅನುಮಾನ ವ್ಯಕ್ತಪಡಿಸಿದ್ದಾರೆ.
'ಗುಂಡು ಹಾರಿಸಿದ್ದರೂ ಒಬ್ಬನೂ ಸಾಯಲಿಲ್ಲವಲ್ಲ' ಎಂಬ ಪೊಲೀಸರ ಮಾತುಕತೆಯ ವಿಡಿಯೋವನ್ನು ಹಂಚಿಕೊಂಡಿರುವ ಕುಮಾರಸ್ವಾಮಿ, ಸರ್ಕಾರವೇ ಈ ಗೋಲಿಬಾರ್-ಹತ್ಯೆಗೆ ಆದೇಶ ನೀಡಿದೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ಆರೋಪಿಸಿದ್ದಾರೆ. ಯಡಿಯೂರಪ್ಪ ಅವರನ್ನು ಅಧಿಕಾರ ಮದ ಕಾಡುತ್ತಿದೆ. ಅವರು ಈ ಹಿಂದೆ ಹೋರಾಟಗಳನ್ನು ನಡೆಸಿದ್ದಾಗ ಹಿಂದಿನ ಸರ್ಕಾರಗಳು ಇದೇ ರೀತಿ ಬಂದೂಕು, ಗುಂಡುಗಳಿಂದ ಅದನ್ನು ಹತ್ತಿಕ್ಕಿದ್ದವೇ ಎಂದು ಸರಣಿ ಟ್ವೀಟ್‌ಗಳಲ್ಲಿ ಅವರು ಪ್ರಶ್ನಿಸಿದ್ದಾರೆ. ಬಿಎಸ್ ಯಡಿಯೂರಪ್ಪ ವಿರುದ್ಧ ಕುಮಾರಸ್ವಾಮಿ ಆರೋಪಗಳೇನು? ಮುಂದೆ ಓದಿ.
|
ಯಡಿಯೂರಪ್ಪ ಹೊಣೆ ಹೊರಬೇಕು
"ಫೈರ್ ಮಾಡಿದೆವು, ಒಂದು ಗುಂಡೂ ಬೀಳ್ಲಿಲ್ವಲ, ಒಬ್ಬರೂ ಸಾಯಲಿಲ್ವಲ" ಇದು ಮಂಗಳೂರು ಪ್ರತಿಭಟನೆ ವೇಳೆ ಹೋರಾಟಗಾರರನ್ನು ಕೊಂದ ಪೊಲೀಸ್ ಅಧಿಕಾರಿಯೊಬ್ಬರ ಮಾತು. ಸರ್ಕಾರವೇ ಮುಂದೆ ನಿಂತು ಪ್ರತಿಭಟನಾಕಾರರನ್ನು ಕೊಂದಿದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿ ನಿಂತಿದೆ. ಇದರ ಹೊಣೆಯನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೊರಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಹೋರಾಟಗಳ ಮೇಲೇಕೆ ದ್ವೇಷ?
ಹೋರಾಟಗಾರರನ್ನು ಕಂಡೊಡನೆ ಗುಂಡಿಕ್ಕಲು ಆದೇಶಿಸುವ ಬಿ.ಎಸ್. ಯಡಿಯೂರಪ್ಪ ತಾವೂ ಹೋರಾಟಗಳಿಂದಲೇ ರಾಜಕೀಯದಲ್ಲಿ ಮೇಲೇರಿದವರು ಎಂಬುದನ್ನು 'ಅನರ್ಹ ಅಧಿಕಾರ'ದ ಮದ ಮರೆಸಿದಂತಿದೆ. ಅವರ ಹೋರಾಟಗಳನ್ನು ಹಿಂದಿನ ಸರ್ಕಾರಗಳು ಬಂದೂಕು, ಗುಂಡುಗಳಿಂದ ಹತ್ತಿಕ್ಕಿದ್ದವೇ? ಹೀಗಿದ್ದೂ, ಹೋರಾಟಗಳ ಮೇಲೆ ಬಿಎಸ್‌ವೈಗೆ ಏಕೆ ಇಷ್ಟು ದ್ವೇಷ? ಎಂದು ಪ್ರಶ್ನಿಸಿದ್ದಾರೆ.

ಮೃತರ ಕುಟುಂಬಗಳ ಕ್ಷಮೆ ಕೇಳಲಿ
ಹಿಂದಿನ ಸರ್ಕಾರದಲ್ಲಿ ರೈತರನ್ನು ಕೊಂದ, ಈ ಬಾರಿ ಅಮಾಯಕ ಹೋರಾಟಗಾರರನ್ನು ಕೊಂದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೈತಿಕ ಹೊಣೆಗಾರಿಕೆ ಅರಿತು ಈ ಕೂಡಲೇ ಮೃತ ಹೋರಾಟಗಾರ ಕುಟುಂಬಗಳ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದ್ದಾರೆ.

ಅಂತ್ಯ ಕಾಲ ಸಮೀಪಿಸಿದೆ
ಅಧಿಕಾರದ ಅಮಲಿನಲ್ಲಿರುವವರ ದಾಹ, ಕ್ರೌರ್ಯಕ್ಕೆ ಪ್ರಜೆಗಳ ಹೆಣಗಳು ತೋರಣದಂತೆ ಕಟ್ಟಲ್ಪಡುತ್ತಿರುತ್ತವೆ. ಅಧಿಕಾರ ಹಪಾಹಪಿಗಳು ಸಾವಿನ ದಲ್ಲಾಳಿಗಳಾಗುತ್ತಾರೆ. ಇಂಥವರೇ ತುಂಬಿರುವ ಜನ ವಿರೋಧಿ ಪ್ರಭುತ್ವ ಅಂತ್ಯ ಕಾಲ ಸಮೀಪಿಸಿದೆ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.












Click it and Unblock the Notifications